yay-ಪದ್ಮನಾಭ ಹೆಗಡೆ
ಒಬ್ಬರ ಮನೆಯಲ್ಲಿ ಪೂಜೆಗೆ ಹೋಗಿದ್ದೆ. ಸರಿ ಸುಮಾರು 150 ಜನ ಸೇರಿದ್ದರು. ಇವರಲ್ಲಿ ಹೆಚ್ಚಿನವರು ಕೃಷಿಕರಾಗಿದ್ದರು. ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ಹೆಣ್ಣು ಕೊಡದೇ ಇರುವದರಿಂದ ಹಿಡಿದು ಕಾರ್ಮಿಕರ ಕೊರತೆ, ಬೆಳೆಗೆ ಯೋಗ್ಯ ಬೆಲೆ ಸಿಗದೇ ಇರುವುದು, ಕೃಷಿಯಲ್ಲಿ ಯವಕರಲ್ಲಿಯ ನಿರಾಸಕ್ತಿ ಹೀಗೆ ಇನ್ನೆನು ರೈತರಿಗೆ ಭವಿಷ್ಯವೇ ಇಲ್ಲ ಎನ್ನುವಷ್ಟು ಹಲವು ಸಮಸ್ಯೆಗಳ ಕುರಿತು ಚರ್ಚೆಗಳಾಗುತ್ತಿದ್ದವು. ರೈತರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಕೃಷಿಯಲ್ಲಿಯ ಋಣಾತ್ಮಕ ಅಂಶಗಳನ್ನೆ ತೋರಿಸಿ/ಬಿತ್ತರಿಸುವುದು ರೈತರಲ್ಲಿಯ ಇಂತಹ ಯೋಚನೆಗಳಿಗೆ ಕಾರಣವಾಗಿರಬಹುದು.
ನಾವು ಹಲವು ದಶಕಗಳಿಂದಲೂ ಅನೇಕ ಲೇಖನಗಳಿಂದ, ದಿನಪತ್ರಿಕೆಗಳಲ್ಲಿ ಕೃಷಿಯಲ್ಲಿಯ ಸಮಸ್ಯೆಗಳನ್ನೇ ಚರ್ಚಿಸಿ, ಎಲ್ಲರೂ ಕೃಷಿಯ ಬಗ್ಗೆ ಋಣಾತ್ಮಕ ಚಿಂತನೆಗೆ ಒಳಪಡುವಂತಾಗಿದ್ದು, ಸಮಸ್ಯೆಗಳು ಬಂಡೆಯಾಕಾರದ್ದಾಗಿದೆ ಎಂಬ ಭಾವನೆ ಬಂದಿದೆ. ಇದರಿಂದ ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಕೈ ಹಾಕುವಂತಾಗಿದೆ. ಕೃಷಿಯ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದೇ ಇರುವುದು, ಯೋಗ್ಯ ಸಮಯದಲ್ಲಿ ಸಾಲ ಅಥವಾ ಬಂಡವಾಳದ ಕೊರತೆ, ಕಾರ್ಮಿಕರ ಕೊರತೆ, ನೀರಾವರಿ ಸೌಲಭ್ಯದ ಕೊರತೆ, ಇವೆಲ್ಲ ಕೃಷಿಯ ಹಿನ್ನಡೆಗೆ ಕಾರಣವೆಂದು ಹಲವು ದಶಕಗಳಿಂದ ಚರ್ಚೆಯ ವಿಷಯವಾಗಿದ್ದರೂ, ಇದರ ಶಾಶ್ವತ ಪರಿಹಾರಕ್ಕೆ ಯೋಚಿಸದೆ ಇರುವದು ಸಮಸ್ಯೆಗಳು ಇನ್ನೂ ಚರ್ಚೆಯ ವಿಷಯವಾಗೇ ಇರಲು ಕಾರಣವಾಗಿದೆ. ಸಾಲ ಮನ್ನಾದಂತಹ ಯೋಜನೆ ಕೇವಲ ರಾಜಕೀಯ ಲಾಭ ಹಾಗೂ ತಾತ್ಕಾಲಿಕ ಪರಿಹಾರ ಒದಗಿಸಬಹುದೇ ಹೊರತು ಶಾಶ್ವತ ಪರಿಹಾರವಾಗಲಾರದು. ಈ ಋಣಾತ್ಮಕ ಪ್ರಪಂಚದಲ್ಲಿ 60% ಜನರನ್ನು ಒಗ್ಗೂಡಿಸಿ ಸಕಾರಾತ್ಮಕ ಯೋಚನೆ ಮೂಡುವಂತೆ ಮಾಡುವುದು ಒಂದು ಸವಾಲಾಗಬಹುದೇ ಹೊರತು ಸಮಸ್ಯೆಗಳಿಗೆ ಪರಿಹಾರ ಇಲ್ಲ ಅಂತಲ್ಲ.
ನಮ್ಮ ಇಂದಿನ ಪಠ್ಯಪುಸ್ತಕಗಳಲ್ಲಿಯೇ ಕೃಷಿಯ ಬಗ್ಗೆ ಸಕಾರಾತ್ಮಕ ಅಂಶಗಳ ಕೊರತೆ ಇದೆ. ಕೃಷಿ ಮಳೆ ಜೊತೆಯಲ್ಲಿನ ಜೂಜಾಟ, ರೈತರು ಬಡವರು, ಅನಕ್ಷರಸ್ಥರು, ಸಾಲದ ವಿಷವರ್ತುಲದಲ್ಲಿ ಸಿಲುಕಿರುವವರು ಎನ್ನುವುದನ್ನೇ ಬಿಂಬಿಸುವದು ಯುವಕರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳಲು ಪ್ರಮುಖ ಕಾರಣ. ವಾಸ್ತವದಲ್ಲಿ ಇಂದಿಗೂ ಕೃಷಿ 60ಕ್ಕಿಂತಲೂ ಅಧಿಕ ಜನರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆಯನ್ನು ಹೊಂದಿದೆ. ಯಾವುದೇ ಸರ್ಟಿಫಿಕೇಟ್, ಡಿಗ್ರಿ ಇಲ್ಲದವರಿಗೂ ಜೀವನಪೂರ್ತಿ ಉದ್ಯೋಗ ನೀಡಿ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾಗಿರುವ ಎಕೈಕ ವೃತ್ತಿ ಎಂದರೆ ಅದು ಕೃಷಿ ಮಾತ್ರ.
ಕೃಷಿ ಕೂಡ ಒಂದು ಉದ್ಯಮ:
ಮನೆ ಬಾಡಿಗೆಗೆ ಕೊಡಿಸುವುದು, ಜಾಗ ಕೊಡಿಸುವುದು ಹೀಗೆ ಎಲ್ಲವೂ ಉದ್ಯಮವಾಗಿರುವ ಈ ದಿನಗಳಲ್ಲಿ ರೈತರು ಉದ್ಯಮಶೀಲತೆ ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇದೆ. ಆರ್ಥಿಕವಾಗಿ ಲಾಭದಾಯಕವಾದ ಕೆಲಸಗಳನ್ನು ಮಾತ್ರ ಮಾಡುವದರಿಂದ ಉತ್ಪಾದನಾ ವೆಚ್ಚ ಕಡಿಮೆಮಾಡಿ ಅಧಿಕ ಲಾಭ ಗಳಿಸಬಹುದು. ಇದಕ್ಕೆ ರೈತರಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಪ್ರತಿ ಹಳ್ಳಿಯಲ್ಲಿ ಸರಕಾರಿ ಶಾಲೆ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳಗಳಲ್ಲಿ ರೈತರಿಗೆ ಆರ್ಥಿಕ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಪ್ರತಿ ರೈತರಲ್ಲಿಯು ಉದ್ಯಮಶೀಲತೆ ಬೆಳೆಸಬಹುದಾಗಿದೆ. ಪ್ರತಿ ರೂಪಾಯಿ ವೆಚ್ಚಕ್ಕೆ ರೂಪಾಯಿಗಿಂತಲೂ ಅಧಿಕ ಇಳುವರಿ/ಆದಾಯ ಬಂದಾಗ ಮಾತ್ರ ಯಾವುದೇ ಉದ್ಯಮ ಲಾಭದಾಯಕವಾಗಬಹುದು. ಇದಕ್ಕೆ ಅತ್ಯುತ್ತಮ ಉದಾಹರಣೆ ಇಸ್ರೇಲ್‌ ಕೃಷಿ. ಕೃಷಿಗೆ ಉತ್ತೇಜನ ನೀಡಲು ಹಾಗೂ ಕೃಷಿಯನ್ನು ಒಂದು ಉದ್ಯಮವಾಗಿ ಬೆಳೆಸಲೆಂದೇ ಭಾರತದಲ್ಲಿ ಇಸ್ರೇಲ್‌ ತಂತ್ರಜ್ಞಾನ ಬಳಸಲು ಸಿದ್ದತೆ ನಡೆಸಲಾಗುತ್ತದೆ. ನೀರಿನ ಕೊರತೆ ಮತ್ತು ಪ್ರತಿಕೂಲ ಹವಾಮಾನ ಇದ್ದರೂ ಇಸ್ರೇಲ್‌ನಲ್ಲಿ ಇಳುವರಿ ಗರಿಷ್ಠ ಮಟ್ಟದಲ್ಲಿದ್ದು, ಕೃಷಿ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕ ಎನಿಸಿಕೊಂಡಿದೆ. ಇಸ್ರೇಲ್‌ ದೇಶದ ಜೀವ ವಿಜ್ಞಾನ ಮತ್ತು ಕೃಷಿ ತಂತ್ರಗಳನ್ನು ಭಾರತಕ್ಕೆ ತಂದಲ್ಲಿ ಕೃಷಿ ಒಂದು ಉದ್ಯಮವಾಗುವುದರಲ್ಲಿ ಸಂದೇಹವಿಲ್ಲ.ಆದರೆ ಪದವಿದರರು ಉದ್ಯೋಗ ಅರಸಿ ಬೇರೆಡೆಗೆ ವಲಸೆ ಹೋಗುವ ಬದಲು ತಂತ್ರಜ್ಞಾನ ಉಪಯೋಗಿಸಿ ಕೃಷಿಯನ್ನು ಉದ್ಯಮವಾಗಿ ಬೆಳೆಸಬೇಕಿದೆ.
ಸಹಕಾರ ಕೃಷಿ ಎಲ್ಲದಕ್ಕೂ ಪರಿಹಾರ:
ಕರ್ನಾಟಕ ಹಾಲು ಒಕ್ಕೂಟ ಒಂದು ಸಹಕಾರಿ ಸಂಘ. ದಿನನಿತ್ಯ ಎಲ್ಲಾ ರೈತರಿಂದ ಹಾಲು ಸಂಗ್ರಹಿಸಿ, ಸಂಸ್ಕರಿಸಿ ಗ್ರಾಹಕರಿಗೆ ತಲುಪಿಸಿ ಒಂದು ಯಶಸ್ವಿ ಸಂಸ್ಥೆಯಾಗಿದೆ. ಶೀಘ್ರವಾಗಿ ಕೆಡುವ ಪದಾರ್ಥವಾದ ಹಾಲಿನಲ್ಲಿ ಇಂತಹ ಮಾರುಕಟ್ಟೆ ಸ್ಥಾಪಿಸಿರುವ ನಮಗೆ ಇತರ ಕೃಷಿ ಉತ್ಪನ್ನಗಳಲ್ಲೂ ಇಂತಹ ಸಂಸ್ಥೆ ಸ್ಥಾಪಿಸುವುದು ಕಷ್ಟವೇನಲ್ಲ. ಇದರಿಂದ ರೈತರಿಗೆ ಉತ್ತಮ ಧಾರಣೆ ದೊರೆಯುವದರ ಜೊತೆಗೆ ಗ್ರಾಹಕರಿಗೂ ಉತ್ತಮ ಬೆಲೆಯಲ್ಲಿ ಉತ್ಪನ್ನಗಳು ಸಿಗಲು ಸಹಕಾರಿಯಾಗಬಹುದು. ಯಂತ್ರಗಳ ಬಳಕೆ ಕಾರ್ಮಿಕರ ಸಮಸ್ಯೆಗೆ ಪರಿಹಾರವಾದರೂ ತುಂಡು ಹಿಡುವಳಿ ಯಂತ್ರಗಳ ಬಳಕೆಗೆ ಹಿನ್ನಡೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ಪರಿಹಾರ ಸಹಕಾರ ಕೃಷಿ. ನಬಾರ್ಡ ಸಂಸ್ಥೆ ಹಾಗೂ ಸರಕಾರ ಸ್ವಸಹಾಯ ಸಂಘಗಳ ರಚನೆ ಹಾಗೂ ಈ ಸಂಘಗಳು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕುಗಳ ಮುಖಾಂತರ ಸಾಲ ಸೌಲಭ್ಯ ಒದಗಿಸುತ್ತವೆ. ಪ್ರತಿ ಹಳ್ಳಿಗಳಲ್ಲಿ ಸ್ವಸಹಾಯ ಸಂಘಗಳಿವೆ. ಎಲ್ಲಾ ಸಂಘಗಳಿಗೂ ಬ್ಯಾಂಕುಗಳು ಸಾಲ ಸೌಲಬ್ಯ ಒದಗಿಸುತ್ತಿದ್ದರೂ ಸಂಘಗಳು ಆರ್ಥಿಕ ಚಟುವಟಿಕೆ ಯಲ್ಲಿ ತುಡಗಿಸಿಕೊಳ್ಳುವುದು ತುಂಬಾ ವಿರಳ. ಪ್ರತಿ ಹಳ್ಳಿಗಳಲ್ಲಿ ರೈತ ಸ್ವಸಹಾಯ ಸಂಘಗಳನ್ನು ರಚಿಸಿ ಸಂಘಗಳ ಹೆಸರಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸವುದರಿಂದ ಕೃಷಿ ಯಾಂತ್ರಿಕತೆ ಸಾಧ್ಯ. ಇದರಿಂದ ಸ್ವಸಹಾಯ ಸಂಘಗಳ ಆದಾಯವು ವೃದ್ಧಿಯಾಗಲು ಸಹಕಾರಿ ಹಾಗೂ ಕಾರ್ಮಿಕರ ಸಮಸ್ಯೆಗಳಿಗೂ ಪರಿಹಾರವಾಗಿದೆ. ರೈತ ಸಹಕಾರಿ ಸಂಘಗಳು ಒಗ್ಗೂಡಿ ಪರಸ್ಪರ ಸಹಕಾರದಿಂದ ಯಂತ್ರಗಳ ಖರೀದಿಸಿ ಯಾಂತ್ರಿಕ ಕೃಷಿ, ಉತ್ಪನ್ನವನ್ನು ಕೆಡೆದಂತೆ ಬಹಳ ದಿನ ಸಂಗ್ರಹಿಸಿ ಇಡಲು ಶೀತಲ ಘಟಕಗಳ ಸ್ಥಾಪನೆಯಂತಹ ಕೆಲಸಗಳಿಂದ ಕೃಷಿಕರ ಹಲವು ಸಮಸ್ಯೆಗಳಿಗೆ ಪರಿಹಾರವಾಗುತ್ತದೆ. ಇದರಿಂದ ರೈತರ ಉತ್ಪನ್ನಗಳು ಒಂದೇ ಸಮಯದಲ್ಲಿ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಬಹುದಲ್ಲದೇ ಬೆಲೆಯ ಸ್ಥಿರತೆ ಸಾಧ್ಯ. ಇದಲ್ಲದೆ ಸರಿಯಾದ ಬೆಲೆ ಸಿಗಲಿಲ್ಲ ಎಂದು ಉತ್ಪನ್ನಗಳನ್ನು ರಸ್ತೆಗೆ ಎಸೆದು ಪ್ರತಿಬಟಿಸುವುದನ್ನು ತಡೆಯಬಹುದು. ಒಗ್ಗಟ್ಟಿನಿಂದ ಉತ್ಪನ್ನಗಳಿಗೆ ಯೋಗ್ಯ ಬೆಲೆ ಪಡೆಯಲು ಸಾಧ್ಯ. ಸಹಕಾರ ಕ್ಷೇತ್ರದಿಂದ ಇವೆಲ್ಲವೂ ಸಾಧ್ಯವಾಗುತ್ತದೆ. ಸರಕಾರ ಸಹಕಾರಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಕೃಷಿ ಅಭಿವೃದ್ಧಿ ಸಾಧ್ಯವಿದೆ.
ಕೃಷಿ ಪದವೀಧರರು ಕೃಷಿಯಲ್ಲಿ ತೊಡಗಿಕೊಂಡಾಗ ಇನ್ನಷ್ಟು ಅಭಿವೃದ್ಧಿ:
ನಮ್ಮ ಮಕ್ಕಳು ದೊಡ್ಡವರಾದ ಮೇಲೆ ಇಂಜಿನಿಯರ್ ಆಗಬೇಕು, ಒಳ್ಳೆಯ ಹುದ್ದೆ ಪಡೆದು ಕೈತಂಬ ಸಂಪಾದಿಸಬೇಕೆಂದು ಎಲ್ಲಾ ಷೋಷಕರು ಆಸೆ ಪಡುತ್ತಾರೆ. ಈತರಹದ ಯೋಚನೆಗಳಿಂದ ಎಲ್ಲರೂ ನೌಕರಿಗಾಗಿ ಮಾತ್ರ ಓದುವಂತಾಗಿದೆ. ಇದು ಕೃಷಿ ಕ್ಷೇತ್ರದಲ್ಲೂ ಬಿನ್ನವಾಗಿಲ್ಲ. ಕೃಷಿ ವಿಶ್ವವಿದ್ಯಾನಿಲಯಗಳು ಕೃಷಿ ಪದವಿದರರಲ್ಲಿ ಕೃಷಿಯೆಡೆಗೆ ಹೆಚ್ಚಿನ ಒಲವು ಮೂಡಿಸುವ ಅಗತ್ಯತೆ ಇದೆ. ಕೃಷಿಯಲ್ಲಿಯೇ ತೊಡಗಿಕೊಳ್ಳುವ ಕೃಷಿ ಪದವಿದರರಿಗೆ ವಿಶೇಷ ಅನುದಾನ, ಕಡಿಮೆ ಶುಲ್ಕ ಹೀಗೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವುದರಿಂದ ಹೆಚ್ಚಿನ ಕೃಷಿ ಪದವೀಧರರು ಕೃಷಿಯಲ್ಲಿ ತೊಡಗಿಕೊಳ್ಳಲು ಉತ್ತೇಜಿಸಬಹುದು. ಕೃಷಿಯಲ್ಲಿ ಕೌಶಲ್ಯ ಇರುವವರು ಕೃಷಿಯಲ್ಲಿ ತೊಡಗಿಕೊಳ್ಳುವಂತಾಗಿ ಹೆಚ್ಚಿನ ಇಳುವರಿ ಪಡೆಯುವಂತಾಗುವುದಲ್ಲದೆ, ಲಾಭವನ್ನು ಮಾಡಲೂ ಸಾಧ್ಯವಿದೆ. ಇದರಿಂದ ದೇಶದ ಪ್ರಗತಿಗೂ ಸಹಕಾರಿ ಆಗುವುದು. ಪರಸ್ಪರ ಹೊಂದಾಣಿಕೆ, ಸಹಕಾರ, ಸಕಾರಾತ್ಮಕ ಯೋಚನೆಗಳಿಂದ ಕೃಷಿಯಲ್ಲಿ ಅದ್ಬುಗಳನ್ನು ಸಾಧಿಸಬಹುದು.