Sasikala Natarajan, Jayaram Jayalalithaaಚೆನ್ನೈ : ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯರಾಮನ್ ಜಯಲಲಿತಾ ‘ಅಮ್ಮ’ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.30ಕ್ಕೆ ವಿಧಿವಶರಾಗಿದ್ದಾರೆ.
ಅವರಿಗೆ 68 ವರ್ಷ ವಯಸ್ಸಾಗಿತ್ತು. ತೀವ್ರ ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದ 68 ವರ್ಷದ ಜಯಲಲಿತಾ ಅವರನ್ನು ಕಳೆದ ಸೆಪ್ಟೆಂಬರ್ 22ರಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುದೀರ್ಘ ಎರಡು ತಿಂಗಳ ಚಿಕಿತ್ಸೆಯ ನಂತರವೂ ಚೇತರಿಸಿಕೊಳ್ಳದ ಅಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಮಾತನಾಡುತ್ತಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್ ಸಿ.ರೆಡ್ಡಿ ಅವರು ಹೇಳಿದ್ದರು. ಆದರೆ ಭಾನುವಾರ ಸಂಜೆ ಹೃದಯ ಸ್ತಂಭನಕ್ಕೆ ತುತ್ತಾದ ಅವರು ಚಿಂತಾಜನಕ ಸ್ಥಿತಿ ತಲುಪಿದ್ದರು. ನಿನ್ನೆ ಬೆಳಗ್ಗೆ ಇಸಿಎಂಒ ಉಪಕರಣದ ನೆರವಿನ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆದರೆ ರಾತ್ರಿ ವೇಳೆಗೆ ಅವರ ದೇಹ ಯಾವುದೇ ಚಿಕಿತ್ಸೆಗೆ ಫಲಿಸದೆ ನಿಧನರಾಗಿದ್ದಾರೆ.
ಸತತ ಎರಡನೇ ಬಾರಿ ಹಾಗೂ ಒಟ್ಟು ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಮೂಲತ ಕನ್ನಡದವರಾದರೂ ಕೋಟ್ಯಾಂತರ ತಮಿಳರ ಹೃದಯಗಳಲ್ಲಿ ಪ್ರೀತಿಯ ‘ಅಮ್ಮ’ನಾಗಿ ಹಾಗೂ ಎಐಎಡಿಎಂಕೆ ಕಾರ್ಯಕರ್ತರ ಪುರಚ್ಚಿ ತಲೈವಿಯಾಗಿ ಸ್ಥಾನ ಪಡೆದಿದ್ದರು. ದಕ್ಷಿಣ ಭಾರತದ ಅತಿ ಪ್ರಭಾವಿ ನಾಯಕಿ ಹಾಗೂ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಅಕಾಲಿಕ ನಿಧನದಿಂದಾಗಿ ಇಡೀ ತಮಿಳುನಾಡು ಶೋಕ ಸಾಗರದಲ್ಲಿ ಮುಳುಗಿದೆ. ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಚೆನೈನ ರಾಜಾಜಿ ಹಾಲ್’ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಮರೀನಾ ಬೀಚ್ ಬಳಿ ಅಂತ್ಯಕ್ರಿಯೆ ನಡೆಯಲಿದೆ. ಅಭಿಮಾನಿಗಳ ಆಕೃಂದನ ಮುಗಿಲುಮುಟ್ಟಿದ್ದು, ತಮಿಳುನಾಡಿನಾಧ್ಯಂತ ಭಾರೀ ಬಿಗಿ ಭದ್ರತೆ ಏರ್ಪಡಿಲಾಗಿದೆ.