kagodu-timmappaಬೆಂಗಳೂರು: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಭೀಕರ ಬರಗಾಲವನ್ನು ಪರಿಹರಿಸಲು ನಾಲ್ಕರಿಂದ ಐದು ಸಾವಿರ ಕೋಟಿ ರೂಗಳ ಅಗತ್ಯವಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಕಾಲಕ್ಕೆ ಬರಗಾಲವನ್ನು ನಿರ್ವಹಿಸುವ ಸಲುವಾಗಿ ರಾಜ್ಯದ ಎಲ್ಲ ವಿಭಾಗ ಮಟ್ಟಗಳಲ್ಲಿ ತಲಾ ಒಂದೊಂದು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ. ಹಿಂಗಾರು, ಮುಂಗಾರುಚ ಮಳೆ ವೈಫಲ್ಯದಿಂದ ರಾಜ್ಯ ಕಂಡರಿಯದಂತಹ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದ ಅವರು,ಬರನಿರ್ವಹಣೆಗಾಗಿ ಹಣ ಹೊಂದಿಸಲು ಕೆಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಕ್ ನೀಡುವುದು ಅನಿವಾರ್ಯ ಎಂದರು.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಇದನ್ನರಿತು ಮುನ್ನೆಚ್ಚರಿಕೆಯಾಗಿ ಕುಡಿಯುವ ನೀರು, ರಾಸುಗಳಿಗೆ ಮೇವು, ಗುಳೇ ಹೋಗುವುದನ್ನು ತಪ್ಪಿಸಲು ಉದ್ಯೊಗ ಸೃಷ್ಟಿ, ಬೆಲೆ ಪರಿಹಾರ ನೀಡಲು ಈ ಬೃಹತ್ ಮೊತ್ತದ ಹಣದ ಸೌಲಭ್ಯ ಅಗತ್ಯವಿದೆ ಎಂದರು.
ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರ ಮತ್ತು ಕಾಮಗಾರಿಗಾಗಿ ೪೭೦೦ ಕೋಟಿ ರೂ. ಕೋರಿದ್ದೇವೆ. ನೆರವಿನ ನಿರೀಕ್ಷೆ ಇದೆ. ಇದರ ಜೊತೆಗೆ ರಾಜ್ಯ ಸರ್ಕಾರವು ಒಂದಿಷ್ಟು ಹಣವನ್ನು ತೊಡಗಿಸಿ, ತುರ್ತು ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.
ಬರ ಪರಿಹಾರಕ್ಕಾಗಿ ಈ ದೊಡ್ಡ ಮೊತ್ತದ ಹಣವನ್ನು ಕ್ರೋಢಿಕರಿಸುವುದು, ರಾಜ್ಯ ಸರ್ಕಾರಕ್ಕೂ ಕ್ಲಿಷ್ಟಕರವಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುಂಠಿತಗೊಳಿಸಿ, ಬರ ನಿರ್ವಹಣೆ ಮಾಡಲಾಗುವುದು ಎಂದರು.
ಬರ ಪ್ರದೇಶಗಳ ಅಧ್ಯಾಯನ ಮತ್ತು ನಿರ್ವಹಣೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿಪರಿಶೀಲನೆಯನ್ನು ವಿಭಾಗವಾರು ಮಟ್ಟದಲ್ಲಿ ಸಂಪುಟದ ಉಪ ಸಮಿತಿಗಳು ಇದೇ ೫ ರಿಂದ ೨೦ ರವರೆಗೂ ನಡೆಸಲಿವೆ.
ಸಮಿತಿಯು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ, ಅಲ್ಲಿಯೇ ಪ್ರದೇಶಗಳಲ್ಲಿನ ಸ್ಥಳ ಪರಿಶೀಲನೆ, ಜನತೆ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು, ಮಾಹಿತಿ ಸಂಗ್ರಹಿಸಿ, ವಸ್ತು ಸ್ಥಿತಿ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದರು