ksrtcಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದಿಂದಾಗಿ ಸ್ಥಗಿತಗೊಂಡಿದ್ದ ಬೆಂಗಳೂರು ತಮಿಳುನಾಡು ನಡುವಿನ ಬಸ್ ಸಂಚಾರವನ್ನು ಕೆ.ಎಸ್.ಆರ್.ಟಿ.ಸಿ ಪ್ರಾರಂಭಿಸಿದೆ. ಬೆಳಗ್ಗೆ ಹತ್ತು ಗಂಟೆಯಿಂದ ಬಸ್ ಗಳು ತಮಿಳುನಾಡಿನತ್ತಾ ಪ್ರಯಾಣ ಆರಂಭಿಸಿದವು.
ಜಯಲಲಿತಾ ಅವತ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ವದಂತಿ ಹರಡುತ್ತಿದ್ದಂತೆ ಕೆಲವೆಡೆ ಸಾರಿಗೆ ಸಂಸ್ಥೆ ಬಸ್ ಗಳ ಮೇಲೆ ಬಾಟಲಿ, ಕಲ್ಲು ತೂರಾಟ ನಡೆದಿತ್ತು. ಇದರಿಂದಾಗಿ ಎರಡು ದಿನಗಳ ಹಿಂದೆ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿಗೆ ಬಸ್ ಸಂಚಾರವನ್ನು ಕೆ.ಎಸ್.ಆರ್.ಟಿ.ಸಿ ಸ್ಥಗಿತಗೊಳಿಸಿತ್ತು. ತಮಿಳುನಾಡು ಸಾರಿಗೆ ಸಂಸ್ಥೆ ಕೂಡ ತನ್ನ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದರಿಂದಾಗಿ ಉಭಯ ರಾಜ್ಯಗಳ ನಡುವಿನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ಇದೀಗ ಜಯಲಲಿತಾ ಅಂತ್ಯಸಂಸ್ಕಾರ ಪೂರ್ಣಗೊಂಡಿದ್ದು ಪರಿಸ್ಥಿತಿ ಶಾಂತವಾಗಿರುವುದರಿಂದ ಮತ್ತೆ ಬಸ್ ಸಂಚಾರವನ್ನು ಕೆ.ಎಸ್.ಆರ್.ಟಿ.ಸಿ ಆರಂಭಿಸಿದೆ. ನಗರದ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣದಿಂದ ಬೆಳಗ್ಗೆ ಹತ್ತು ಗಂಟೆಯಿಂದ ಬಸ್ ಗಳು ತಮಿಳುನಾಡಿಗೆ ಸಂಚಾರ ಆರಂಭಿಸಿವೆ. ನಿತ್ಯ 470 ಬಸ್ ಗಳು ತಮಿಳುನಾಡಿಗೆ ಸಂಚರಿಸುತ್ತಿದ್ದು ಪೂರ್ಣಪ್ರಮಾಣದಲ್ಲಿ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ.
ಒಂದೂವರೆ ಕೋಟಿ ಆದಾಯ ಖೋತಾ:
ತಮಿಳುನಾಡು ಸಿಎಂ ಜಯಲಲಿತ ನಿಧನ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿ ಸಿ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದದೆ.ಎರಡು ದಿನ 400 ಕ್ಕೂ ಹೆಚ್ಚಿನ ಬಸ್ ಗಳ ಸಂಚಾರವನ್ನು ನಿಲ್ಲಿಸಿದಕ್ಕೆ ಬರೋಬ್ಬರಿ1.5 ಕೋಟಿ ರೂ.ಗಳ ಆದಾಯ ಖೋತಾ ಆಗಿದೆ. ಸಾಲು ಸಾಲು ಮುಷ್ಕರದಿಂದಾಗಿರುವ ನಷ್ಟದ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೆಎಸ್ ಆರ್ ಟಿಸಿಗೆ 1.5 ಕೋಟಿ ಆದಾಯ ನಷ್ಟದಿಂದ ಹೆಚ್ಚಿನ ಆರ್ಥಿಕ ಹೊರೆ ಎದುರಿಸುವಂತಾಗಿದೆ.