asnotikar-ಪಿಎಸ್‌ಕೆ
ಬಿಜೆಪಿ ಹೈ ಕಮಾಂಡ್‌ ವಿರೋಧದ ನಡುವೆಯೂ ತಮ್ಮ ರಾಯಣ್ಣ ಬ್ರಿಗೇಡ್‌ನ್ನು ಮುಂದುವುರೆಸುವುದಾಗಿ ಸವಾಲೆಸೆದ ಈಶ್ವರಪ್ಪ, ಬಿಜೆಪಿಯಲ್ಲಿ ಯಡಿಯೂರಪ್ಪ ವಿರುದ್ಧ ಸೆಡ್ಡುಹೊಡೆಯಲು ತಮ್ಮದೇ ಒಂದು ಪ್ರಭಾವಿ ಗುಂಪು ಕಟ್ಟಿಕೊಳ್ಳಲು ಯತ್ನಿಸುತ್ತಿರುವ ವಿಷಯ ಈಗ ಜಗಜ್ಜಾಹೀರು.
ಈ ಹಿಂದೆ ಸಿದ್ದರಾಮಯ್ಯ ಅಹಿಂದ ಸವಾವೇಶಗಳನ್ನು ಏರ್ಪಡಿಸುವ ಮೂಲಕ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಗದ್ದುಗೆ ಏರಿದ ಮಾದರಿಯಲ್ಲಿಯೇ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹೆಸರಿನಲ್ಲಿ ರಾಯಣ್ಣ ಬ್ರಿಗೇಡ್‌ ಹುಟ್ಟು ಹಾಕಿ ಯಡಿಯೂರಪ್ಪ ವರ್ಚಸ್ಸಿಗೆ ಸವಾಲೆಸೆಯುತ್ತಿದ್ದಾರೆ ಎನ್ನುವ ಆರೋಪವೂ ಕೂಡ ಹಳೆಯದೇ. ಆದರೆ ಜಿಲ್ಲೆಯ ಮಟ್ಟಿಗೆ ಇದನ್ನೇ ಬಂಡವಾಳವಾಗಿಸಿಕೊಳ್ಳಲು ಅನೇಕ ಮುಖಂಡರು ಹರಸಾಹಸ ಪಡುತ್ತಿದ್ದಾರೆ.
ಹೌದು,, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಸಕ್ರೀಯ ರಾಜಕೀಯದಿಂದಲೇ ನಾಪತ್ತೆಯಾಗಿದ್ದ ಆನಂದ ಅಸ್ನೋಟಿಕರ್ ಪಾಲಿಗೆ ಇದು ಸುವರ್ಣಾವಕಾಶವಾಗಿ ಪರಿಣಮಿಸಿದೆ. ಆನಂದ ಅಸ್ನೋಟಿಕರ್ ಈಶ್ವರಪ್ಪನವರ ರಾಯಣ್ಣ ಬ್ರಿಗೇಡ್‌ ಸಮಾವೇಶಕ್ಕೆ ತೆರಳಿದ್ದು ಇದಕ್ಕೆ ಪುಷ್ಠೀಕರಿಸಿದೆ. ಈ ಹಿಂದೆ ಕೂಡ ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವಾಗಲೂ ಕೂಡ ಇಂಥದ್ದೇ ಅವಕಾಶ ಉಪಯೋಗಿಸಿಕೊಂಡು ಮಂತ್ರಿ ಪಟ್ಟ ದಕ್ಕಿಸಿಕೊಂಡಿದ್ದರು. ಇತ್ತೀಚೆಗೆ ಈಗ ಸ್ಥಳೀಯ ಬಿಜೆಪಿ ಸಂಪರ್ಕದಲ್ಲಿಯೂ ಇಲ್ಲದೇ ಕ್ಷೇತ್ರದ ಜನರ ಸಂಪರ್ಕದಲ್ಲಿಯೂ ಇಲ್ಲದೇ ಸಕ್ರೀಯ ರಾಜಕೀಯದಿಂದಲೇ ದೂರವಾಗಿದ್ದರು. ಆದರೆ ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್‌ ಬಿಜೆಪಿಗೆ ಮರಳಲು ಹಾಗೂ ಸಕ್ರೀಯ ರಾಜಕೀಯಕ್ಕೆ ಮರಳಲು ಅಂಥದ್ದೇ ಅವಕಾಶ ಒದಗಿಸಿಕೊಟ್ಟಿದೆ ಎನ್ನುವ ಮಾತು ಕೇಳಿಬರತೊಡಗಿದೆ.
ಬಿಜೆಪಿಯಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ರಾಯಣ್ಣ ಬ್ರಿಗೇಡ್‌ ಮೂಲಕ ಈಶ್ವರಪ್ಪ ಅವರು ತಮ್ಮ ಆಪ್ತ ಗುಂಪಿನ ನಾಯಕರ ಹುಡುಕಾಟದಲ್ಲಿದ್ದಾಗ, ಕಾರವಾರ ಕ್ಷೇತ್ರದಲ್ಲಿ ತಟ್ಟನೆ ನೆನಪಾಗಿದ್ದು ಆನಂದ ಅಸ್ನೋಟಿಕರ್‌. ಆನಂದ ಅಸ್ನೋಟಿಕರ್‌ಗೂ ರಾಜಕೀಯಕ್ಕೆ ಹಿಂದಿರುಗಲು ಒಂದಲ್ಲಾ ಒಂದು ವೇದಿಕೆ ಬೇಕಿತ್ತು. ಅದು ರಾಯಣ್ಣ ಬ್ರಿಗೇಡ್‌ ಮೂಲಕ ಸಿಕ್ಕಿದೆ ಎನ್ನಲಾಗುತ್ತಿದೆ. ಈಶ್ವರಪ್ಪನವರಿಗೂ ಅಸ್ನೋಟಿಕರ್‌ ಅವರಂಥ ನಾಯಕರ ಅತೀ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಅಸ್ನೋಟಿಕರ್‌, ಸಿಕ್ಕ ಅವಕಾಶ ಉಪಯೋಗಿಸಿ ತಾವು ಬಿಜೆಪಿ ಹಾಗೂ ರಾಜಕಾರಣಕ್ಕೆ ಮರಳಿ ಎಂಟ್ರಿಕೊಡುವುದಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಸ್ನೋಟಿಕರ್‌ ಅವರನ್ನು ಕೇಳಿದಾಗ, ರಾಯಣ್ಣ ಬ್ರಿಗೇಡ್ ಎಂದು ಈಶ್ವರಪ್ಪ ಅವರ ಕಾರ್ಯಕ್ರಮಕ್ಕೆ ಹೊಗಿರಲಿಲ್ಲ. ಈಶ್ವರಪ್ವ ಹಿಂದುಳಿದ ನಾಯಕರು. ಅವರಾಗಿಯೇ ಕರೆದಿದ್ದರಿಂದ ಅದು ನಮ್ಮ ಕ್ಷೇತ್ರಕ್ಕೆ ಬಂದು ಕರೆ ಮಾಡಿದ್ದರಿಂದ ನಾನು ತಕ್ಷಣ ಅವರನ್ನು ಭೇಟಿಯಾಗಿದ್ದೇನೆ. ನಾನು ಒಬ್ಬ ಹಿಂದುಳಿದ ವರ್ಗಗಳ ಶಾಸಕ, ಮಂತ್ರಿಯಾಗಿದ್ದರಿಂದ ನನಗೆ ಈಶ್ವರಪ್ಪ ಅವರು ಸಹಕರಿಸುತ್ತಾ ಬಂದಿದ್ದಾರೆ. ಹೀಗಾಗಿ ನನಗೆ ಅವರ ಮೇಲೆ ಅತೀವ ಗೌವರವಿದೆ ಎಂದರು.
ಒಬ್ಬ ಹಿಂದುಳಿದ ನಾಯಕರು ಇಂದು ರಾಜ್ಯದಲ್ಲಿ ಬಿಜೆಪಿಯ ಸಂಸ್ಥೆಯಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪನೆ ಮಾಡಿ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅದರ ಮೂಲಕ ಇಡೀ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸುವ ಕಾರ್ಯಕ್ಕೆ ಸಮಸ್ತ ಹಿಂದುಳಿದ ವರ್ಗದವರು ಸಹಕಾರ ನೀಡಬೇಕು ಎಂದು ಕೋರಿದರು ಹೀಗಾಗಿ ತಾವು ಈಶ್ವರಪ್ಪ ಸಮಾವೇಶಕ್ಕೆ ತೆರಳಿದ್ದಾರೆ ಹೇಳಿದ್ದಾರೆ.
ಯಡಿಯೂರಪ್ಪ ಅವರು ಬಿಜೆಪಿಯ ರಾಜ್ಯ ನಾಯಕರಾಗಿದ್ದು ಅವರೇ ನಮ್ಮ ನಾಯಕರು ಎಂದು ಈಶವರಪ್ಪ ಅವರು ಸಹ ಪ್ರಸ್ತಾಪಿಸಿದ್ದಾರೆ. ಬಿಜೆಪಿ ಹಾಗೂ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಇವೆರಡು ಬೇರೆ ಬೇರೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು ಬ್ರಿಗೆಡ್ ಹಿಂದುಳಿದ ವರ್ಗಗಳ ಎಳಿಗೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಕೆಲವು ನಾಯಕರು ಈ ಸಂಘಟನೆಯನ್ನು ವಿರೋಧಿಸಿ ಹೇಳಿಕೆ ನೀಡುತ್ತಿರಬಹುದು ಆದರೆ ಈ ಸಂಸ್ಥೆಯ ಉದ್ದೇಶ ಹಿಂದುಳಿದವರ ಏಳ್ಗೆ ಮಾತ್ರ. ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್‌ಗೆ ಬೆಂಬಲಿಸುವುದಾಗಿ ತಿಳಿಸಿದರು.
ಆದರೆ ಈ ಹಿಂದಿನಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಪಕ್ಷದ ಅನೇಕ ಹಿರಿಯ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅಸ್ನೋಟಿಕರ್‌ಗೆ ಬಿಜೆಪಿಯಲ್ಲಿ ಸುಲಭವಿಲ್ಲ ಎನ್ನವು ಮಾತೂ ಕೇಳಿಬಂದಿದೆ. ಜೊತೆಗೆ ಬಿಜೆಪಿಯ ಹೈ ಕಮಾಂಡ್‌ ವಿರೋಧದ ಹಿನ್ನೆಲೆಯಲ್ಲಿ ಈಶ್ವರಪ್ಪ ರಾಯಣ್ಣ ಬ್ರಿಗೇಡ್‌ನ ಅಸ್ಥಿತ್ವದ ಬಗ್ಗೆಯೇ ಅನುಮಾನವಿದೆ. ಈಶ್ವರಪ್ಪ ಅವರನ್ನೇ ನಂಬಿದರೆ ಅಸ್ನೋಟಿಕರ್‌ಗೆ ಕಷ್ಟವಾಗಬಹುದು ಎನ್ನುವ ಮಾತೂ ಕೇಳಿಬಂದಿದೆ. ಒಟ್ಟಾರೆ ಆನಂದ ಅಸ್ನೋಟಿಕರ್‌ ಮರಳಿ ಸಕ್ರೀಯ ರಾಜಕಾರಣಕ್ಕೆ ಮರಳಲು ಈ ಅವಕಾಶವನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳುತ್ತಾವರೋ ಎನ್ನುವುದನ್ನು ಕಾದು ನೋಡಬೇಕಿದೆ.