kattale forest2

ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಉದ್ದೇಶಿಸಿರುವ ಗ್ರೇಟ್ ಕೆನರಾ ಟ್ರೇಲ್ಸ್ ಚಾರಣ ಪಥವನ್ನು ಪುನರ್ವಿಮರ್ಶಿಸಿ ಕತ್ತಲೆಕಾನಿನ ಅಪೂರ್ವ ಅರಣ್ಯ ಪ್ರಭೇದವಾದ ಮಿರಿಸ್ಟಿಕಾ ಸ್ವಾಂಪ್ಗಳನ್ನು ಪ್ರಸ್ತಾವಿತ ಚಾರಣ ವ್ಯಾಪ್ತಿಯಿಂದ ಸಂಪೂರ್ಣ ಹೊರತುಪಡಿಸುವಂತೆ ಮತ್ತು ತಜ್ಞರ ಸಮಿತಿ ನೇಮಿಸಿ ಈ ಕುರಿತು ಸ್ಪಷ್ಠ ನಿರ್ಧಾರ ಕೈಗೊಳ್ಳಲು ರಾಜ್ಯ ಅರಣ್ಯ ಇಲಾಖೆಗೆ ನಿರ್ದೇಶಿಸಬೇಕೆಂದು ಕೋರಿ ವಿವರವಾದ ಮನವಿಯೊಂದನ್ನು ಪ್ರಾಣಿಶಾಸ್ತ್ರಜ್ಞ ರವಿ ಹೆಗಡೆ ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಗೆ ಸಲ್ಲಿಸಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆ ಉದ್ದೇಶಿಸಿರುವ ಗ್ರೇಟ್ ಕೆನರಾ ಟ್ರೇಲ್ಸ್ ಈ ವರುಷದ ನವೆಂಬರ್‌ನಿಂದ ಆರಂಭವಾಗಲಿದ್ದು, ಜೋಗದಿಂದ ಕ್ಯಾಸಲ್ ರಾಕ್ವರೆಗೆ ಸಾರ್ವಜನಿಕರಿಗೆ ಚಾರಣಕ್ಕೆ ಅವಕಾಶ ಮಾಡಿಕೊಡಲಿದೆ. ದೇಶದಲ್ಲೇ ಅತಿ ಉದ್ದದ ಅರಣ್ಯ ಚಾರಣವೆನಿಸಲಿರುವ ಗ್ರೇಟ್ ಕೆನರಾ ಟ್ರೇಲ್ಸ್, 270ಕಿಮಿ ವ್ಯಾಪ್ತಿಯನ್ನು ಹೊಂದಲಿದೆ.

ತಾವು ಈ ಮೊದಲು ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಕೇಂದ್ರ ಪರಿಸರ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರು ಕರ್ನಾಟಕ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದು, ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಮಧ್ಯೆ ರಾಜ್ಯ ಪರಿಸರ ಸಚಿವರನ್ನೂ ತಾವು ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿರುವುದನ್ನು ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಕರ್ನಾಟಕ ಅರಣ್ಯ ಇಲಾಖೆ ಯಾವುದೇ ನಿರ್ಧಾರಕ್ಕೆ ಬಾರದಿರುವುದು ದುರದೃಷ್ಟಕರ ಎಂದಿರುವ ರವಿ ಹೆಗಡೆ, ಕತ್ತಲೆಕಾನಿನ ಮಿರಿಸ್ಟಿಕಾ ಸ್ವಾಂಪ್ಗಳು ಕೇವಲ ನಮ್ಮದಲ್ಲ, ಅದು ಜಗತ್ತಿಗೇ ಸೇರಿದ ಸಂಪತ್ತು, ಮತ್ತು ಇಂಥ ಅಪೂರ್ವ ಮಳೆಕಾಡನ್ನು, ಅಲ್ಲಿನ ಎಲ್ಲ ತೆರನ ಜೀವಸಂಕುಲಗಳನ್ನು ರಕ್ಷಿಸುವ ನೈತಿಕ ಹೊಣೆಗಾರಿಕೆ ನಮಗಿದೆ ಎಂದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶರಾವತಿ ಕೊಳ್ಳದ ದಟ್ಟ ಮಳೆಕಾಡುಗಳ ವ್ಯಾಪ್ತಿಯಲ್ಲಿರುವ ಕತ್ತಲೆಕಾನು-ಮಲೆಮನೆ ಅರಣ್ಯ ಪ್ರದೇಶವು ಜಗತ್ತಿನಲ್ಲೇ ಅತಿ ಅಪೂರ್ವ ಮಿರಿಸ್ಟಿಕಾ ಸ್ವಾಂಪ್ಗಳನ್ನು ಹೊಂದಿದ್ದು, ಅಳಿವಿನ ಅಂಚಿನಲ್ಲಿರುವ ಅನೇಕ ಸಸ್ಯ ಮತ್ತು ಪ್ರಾಣಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಇತ್ತೀಚೆಗೆ ಸಂಶೋಧಿಸಲ್ಪಟ್ಟಿರುವ ಕುಂಬಾರ ಕಪ್ಪೆ ಮತ್ತು ಮೃದ್ವಂಗಿ ಪ್ರಭೇದವು ಕತ್ತಲೆಕಾನು ಅರಣ್ಯದ ಮಿರಿಸ್ಟಿಕಾ ಸ್ವಾಂಪ್ಗಳನ್ನು ಅವಲಂಬಿಸಿಯೇ ಬದುಕುವಂಥವು. ವಿನಾಶದ ಅಂಚಿನಲ್ಲಿರುವ, ಕೇವಲ ಪಶ್ಚಿಮ ಘಟ್ಟದ ಮಳೆಕಾಡುಗಳಲ್ಲಿ ಮಾತ್ರವೇ ಕಾಣಸಿಗುವ ಸಿಂಗಳೀಕಗಳಿಗೆ ಕತ್ತಲೆಕಾನು ಉತ್ತರದ ತುತ್ತತುದಿಯ ವಾಸತಾಣ.

ಅತಿ ಪುರಾತನ ಗೊಂಡ್ವಾನಾ ಅರಣ್ಯದ ಕೊನೆಯ ಕೊಂಡಿಯಾಗಿರುವ ಕತ್ತಲೆಕಾನು ಮಳೆಕಾಡನ್ನು ಮುಂದಿನ ಯುಗಕ್ಕೂ ಉಳಿಸಿಕೊಳ್ಳಬೇಕಿದ್ದಲ್ಲಿ ಚಾರಣ ಚಟುವಟಿಕೆಯಿಂದ ಸಂಪೂರ್ಣ ಹೊರಗಿಡಬೇಕಾದದ್ದು ಅನಿವಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ರವಿ ಹೆಗಡೆ, ಈ ಕುರಿತು ತಜ್ಞರ ಸಮಿತಿಯನ್ನು ನೇಮಿಸಲು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ನಿರ್ದೇಶಿಸುವಂತೆ ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯನ್ನು ಕೋರಿದ್ದಾರೆ. ಕತ್ತಲೆಕಾನು ಅರಣ್ಯದ ಕುರಿತು ಸಂಶೋಧನೆ ನಡೆಸಿರುವ ತಜ್ಞರಲ್ಲಿ ಡಾ. ಎಂ. ಡಿ. ಸುಭಾಷ್ ಚಂದ್ರನ್, ಡಾ. ಟಿ. ವಿ. ರಾಮಚಂದ್ರ, ಡಾ. ಆರ್. ವಾಸುದೇವ, ಡಾ. ಕೆ. ವಿ. ಗುರುರಾಜ ಮತ್ತು ಡಾ. ಅರವಿಂದ ಮಧ್ಯಸ್ಥ ಪ್ರಮುಖರು. ದಶಕಗಳ ಕಾಲ ಅತಿ ಸಂಕೀರ್ಣವಾದ ಕತ್ತಲೆಕಾನು ಅರಣ್ಯದ ಕುರಿತು ಸಂಶೋಧನೆ ಕೈಗೊಂಡಿರುವ ಇಂಥ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿ ಚಾರಣ ಪಥದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ರವಿ ಹೆಗಡೆ ಆಗ್ರಹಿಸಿದ್ದಾರೆ.

ಮಿರಿಸ್ಟಿಕಾ ಸ್ವಾಂಪ್ ಸಸ್ಯ ಪ್ರಭೇದಗಳ ಬೇರುಗಳು ನೆಲದಾಳದಿಂದ ಹೊರಬಂದು ಪುನಃ ನೆಲದಾಳಕ್ಕೆ ಹುದುಗಿಕೊಳ್ಳುವ ವಿಶಿಷ್ಟ ರಚನೆಯನ್ನು ತೋರ್ಪಡಿಸುತ್ತವೆ. ಇಲ್ಲಿನ ನೆಲ ಅತಿ ಹೆಚ್ಚು ತೇವಾಂಶ ಹೊಂದಿದ್ದು, ಅತಿ ವಿಶಿಷ್ಟ ಜೀವಿಗಳನ್ನು ಲಕ್ಷ ಲಕ್ಷ ವರುಷಗಳಿಂದ ಪೋಷಿಸುತ್ತಿದೆ ಎಂಬುದನ್ನು ರವಿ ಹೆಗಡೆ ತಿಳಿಸಿದ್ದಾರೆ. ಇಂಥ ಅಪೂರ್ವ ಮಳೆಕಾಡಿನ ಮೂಲಕ ಚಾರಣಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ಎದುರಾಗಬಹುದಾದ ಪರಿಣಾಮಗಳು ತೀರಾ ಗಂಭೀರವಾದವುಗಳೇ ಆಗಿವೆ. ಚಾರಣಿಗರ ನಿರಂತರ ದಟ್ಟಣೆಯಿಂದ ಅರಣ್ಯ ಕ್ಷೀಣಿಸಲಾರಂಭಿಸುತ್ತದೆ. ಅತಿ ಎತ್ತರದ ಮರಗಳು ಸಾಯಲಾರಾಂಭಿಸುತ್ತವೆ. ಚಾರಣಿಗರ ನಿರಂತರ ತುಳಿತದಿಂದ ಮಣ್ಣಿನ ಸ್ತರಗಳಲ್ಲಿನ ಬದಲಾವಣೆ, ಕೆಳಸ್ತರದ ಜೀವಿಗಳ ನಶಿಸುವಿಕೆ, ಸಸ್ಯ ನಾಶ, ಜೀವಿಗಳ ಸಂತಾನೋತ್ಪತ್ತಿಯಲ್ಲಿ ಉಂಟಾಗಬಲ್ಲ ತೊಡಕುಗಳು, ಶಬ್ದ ಮಾಲಿನ್ಯದಿಂದ ಅಳಿವಿನ ಅಂಚಿನಲ್ಲಿರುವ ಸಿಂಗಳೀಕಗಳ ಮೇಲೆ ಆಗಬಲ್ಲ ಪರಿಣಾಮಗಳು, ಹೊರಗಿನಿಂದ ಇತರ ಜೀವಿಗಳ ನುಸುಳುವಿಕೆ ಮತ್ತು ಇತರ ಅನೇಕ ತೆರನ ದುಷ್ಪರಿಣಾಮಗಳನ್ನು ಮನವಿಯಲ್ಲಿ ವಿವರವಾಗಿ ಉಲ್ಲೇಖಿಸಿರುವ ರವಿ ಹೆಗಡೆ, ಚಾರಣ ವ್ಯಾಪ್ತಿಯಿಂದ ಕತ್ತಲೆಕಾನು ಅರಣ್ಯವನ್ನು ಸಂಪೂರ್ಣ ಹೊರಗಿಡುವಂತೆ ಆಗ್ರಹಿಸಿದ್ದಾರೆ.