ರಾಮಚಂದ್ರಾಪುರ ಮಠದ ದಂತ ಸಿಂಹಾಸನ

ರಾಮಚಂದ್ರಾಪುರ ಮಠದ ದಂತ ಸಿಂಹಾಸನ

ಶ್ರೀ ರಾಮಚಂದ್ರಾಪುರ ಮಠ ಎಂದಾಕ್ಷಣ ಶಂಕರಾಚಾರ್ಯರ ನೆನಪಾಗುತ್ತದೆ. ಶಂಕರರು ಸ್ಥಾಪಿಸಿದ ರಾಜಪೀಠದಲ್ಲಿ ರಾಮಚಂದ್ರಾಪುರ ಮಠವೂ ಒಂದು. ಇತ್ತೀಚೆಗೆ ರಾಮಚಂದ್ರಾಪುರ ಮಠದ ಪೀಠದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಪೀಠಾಧಿಪತಿಗಳ ಪೀಠತ್ಯಾಗದ ಬಗ್ಗೆಯೂ ಬಿಸಿ ಬಿಸಿ ಚರ್ಚೆ ನಡೆದಿದೆ. ಆರೋಪಗಳು ಕೇಳಿ ಬಂದಾಗ ಪೀಠ ತ್ಯಜಿಸಿ ನಿರಪರಾಧಿ ಎಂದು ತೀರ್ಪು ಬಂದ ಮೇಲೆ ಪೀಠ ಏರಬಹುದಿತ್ತಲ್ಲ ಎನ್ನುವ ಚರ್ಚೆಗಳು ನಡೆದಿರುವಾಗ ಅಲ್ಲಿನ ಒಂದು ಪೀಠದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಶ್ರೀ ರಾಮಚಂದ್ರಾಪುರ ಮಠದ ಸಂಗ್ರಹದಲ್ಲಿರುವ ಈ ಅತ್ಯಪೂರ್ವ ದಂತ ಸಿಂಹಾಸನವನ್ನು 19ನೇ ಶತಮಾನದಲ್ಲಿ ರಾಮಚಂದ್ರಾಪುರ ಮಠದಲ್ಲಿ ಸೇವೆಯಲ್ಲಿದ್ದ ರಾಮಭದ್ರ ಎಂಬ ಆನೆಯ ದಂತದಿಂದ ತಯಾರಿಸಲಾಗಿದೆ.
ಶ್ರೀ ಮಠದ 33ನೇ ಯತಿಗಳಾಗಿದ್ದ ರಾಘವೇಶ್ವರ ಶ್ರೀಗಳ ಸವಾರಿಯಲ್ಲಿ ರಾಮಭದ್ರ ಎಂಬ ಸಲಗ ಇತ್ತು. ಕಾಂಚೀ ರಾಜರು ಆ ಕಾಲದಲ್ಲಿ ಶ್ರೀಗಳಿಗೆ ಆನೆಯನ್ನು ಉಡುಗೊರೆಯಾಗಿ ನೀಡಿದ್ದರು. ಶ್ರೀಮಠದಲ್ಲಿ ರಾಮಭದ್ರ ಆನೆ ವಿಧೇಯತೆಗೆ ಮತ್ತು ಸೈನಿಕನ ಶಕ್ತಿಗೆ ಹೆಸರುವಾಸಿಯಾಗಿತ್ತು. 1909ರಲ್ಲಿ ಶ್ರೀಗಳು ಬ್ರಹ್ಮೈಕ್ಯರಾದ ಬಳಿಕ ರಾಮಭದ್ರ ಆನೆ ತಾನೂ ಉಪವಾಸ ಕುಳಿತು ದೇಹ ತ್ಯಾಗ ಮಾಡಿತು. ಅದೇ ಆನೆಯ ದಂತವನ್ನು ಸಂರಕ್ಷಿಸಿ 34ನೇ ಯತಿಗಳಾದ ಶ್ರೀ ರಾಮಚಂದ್ರ ಭಾರತೀ ಅವರು ದಂತ ಸಿಂಹಾಸನವನ್ನು ಸಿದ್ಧಪಡಿಸಿದ್ದರು. ಮೈಸೂರು ಅರಮನೆ ಯ ಶಿಲ್ಪಿಯಾಗಿದ್ದ ಮೂಡುಕೋಡು ಹಿರಣ್ಯಪ್ಪ ಎಂಬ ಶಿಲ್ಪಿ ತನ್ನ 20 ಮಂದಿ ಕುಶಲಕರ್ಮಿಗಳ ಜತೆ 18 ವರ್ಷಗಳ ಕಾಲ ದುಡಿದು ಈ ಸಿಂಹಾಸನವನ್ನು ಸಿದ್ಧಪಡಿಸಿದ್ದಾರೆ. ರಾಮಾಯಣ ಮತ್ತು ಮಹಾಭಾರತದ ಅನನ್ಯ ಕೆತ್ತನೆಗಳು ಸಿಂಹಾಸನದಲ್ಲಿ ಕಾಣಿಸುತ್ತಿವೆ. ಕಲಾ ವೈಭವಕ್ಕೆ ಮತ್ತೊಂದು ಹೆಸರು ಎಂಬಂತೆ ಸಿಂಹಾಸನವಿದೆ.