ಭೂಪಾಲ್: ನಾಯಿ, ಬೆಕ್ಕು ಸಾಕುವುದನ್ನು ಕೇಳಿದ್ದೀರಿ. ಕೆಲವೊಂದು ದೇಶಗಳಲ್ಲಿ ಹುಲಿಗಳನ್ನೂ ಸಾಕುತ್ತಿದ್ದು, ಭಾರತದಲ್ಲೂ ಮನೆಗಳಲ್ಲಿ ಹುಲಿ ಸಾಕಲು ಅನುಮತಿ ನೀಡುವಂತೆ ಸಚಿವರೊಬ್ಬರು ಕೋರಿದ್ದನ್ನೂ ನೋಡಿದ್ದೇವೆ.

ಆದರೆ ಇಲ್ಲೊಬ್ಬ ಮಹಿಳೆ ಹಾವೊಂದನ್ನು ತನ್ನ ಸ್ವಂತ ಮಗುವಿನಂತೆ ಜತನದಿಂದ ಕಾಪಾಡುತ್ತಿದ್ದಾರೆ. ಹಾವೆಂದರೆ ಮಾರು ದೂರ ಓಡುವ ಮಂದಿಗೆ ಈ ಮಹಿಳೆ ಅದನ್ನು ತನ್ನ ತೊಡೆ ಮೇಲಿರಿಸಿಕೊಂಡು ಮುದ್ದು ಮಾಡುವುದನ್ನು ಕಂಡು ಭಯಮಿಶ್ರಿತ ಮೆಚ್ಚುಗೆಯಿಂದ ನೋಡುತ್ತಾರೆ.

ಭೂಪಾಲ್ ಅರಣ್ಯ ಇಲಾಖೆಯಲ್ಲಿ ಕಳೆದ 24 ವರ್ಷಗಳಿಂದ ಕೆಲಸ ಮಾಡುತ್ತಿರುವ ಉಮಾ ದೇವಿ ಶರ್ಮಾ ಪಾರ್ಕಿನಲ್ಲಿ ಹೋಗುತ್ತಿರುವ ವೇಳೆ ಗಾಯಗೊಂಡು ಬಿದ್ದಿದ್ದ ಹಾವೊಂದನ್ನು ನೋಡಿದ್ದಾರೆ. ಅಲ್ಲಿ ಹೋಗುತ್ತಿದ್ದವರೆಲ್ಲ ಭಯದಿಂದ ಹಿಂದೆ ಸರಿಯುತ್ತಿದ್ದರೆ ಉಮಾದೇವಿ ಮಾತ್ರ ಆ ಹಾವಿಗೆ ಶುಶ್ರೂಷೆ ಮಾಡಿದ್ದಾರೆ.

ಬಳಿಕ ಅಲ್ಲಿಯೇ ಒಂದು ಗುಂಡಿಯನ್ನು ತೋಡಿ ಆ ಹಾವಿಗೆ ನೆಲೆಯನ್ನೂ ಕಲ್ಪಿಸಿದ್ದಾರೆ. ಅಂದಿನಿಂದಲೂ ಆ ಹಾವಿನೊಂದಿಗೆ ಒಡನಾಟ ಬೆಳೆಸಿಕೊಂಡಿರುವ ಉಮಾದೇವಿ, ಪ್ರತಿ ನಿತ್ಯ ಪಾರ್ಕಿಗೆ ಭೇಟಿ ನೀಡಿ ಅದರೊಂದಿಗೆ ಕಾಲ ಕಳೆಯುತ್ತಾರೆ. ಅವರಿಗೆ ಇದೊಂದು ಪ್ರತಿ ನಿತ್ಯದ ಕಾಯಕದಂತಾಗಿಬಿಟ್ಟಿದೆ.