ರಾಯಚೂರು: ನಮ್ಮ ದೇಶದಲ್ಲಿ ಓದು ಒಂದು ಹೋರಾಟ; ಅರಿವು ಒಂದು ಆಂದೋಲನ ಎಂದು ಬರಗೂರು ರಾಮಚಂದ್ರ ತಿಳಿಸಿದರು.
ಅನೇಕ ಸುಧಾರಕರ ಪರಿಶ್ರಮದಿಂದ ಶಿಕ್ಷಣವು ಹಟ್ಟಿಗಳಿಗೆ, ಗುಡಿಸಲುಗಳಿಗೆ, ಕೊಳಗೇರಿಗಳಿಗೆ, ಬಡವರಿಗೆ, ಮಹಿಳೆಯರಿಗೆ ಬಂದು ಸೇರಿದೆ. ಶತಮಾನಗಳಿಂದ ಸೆರೆವಾಸಿಯಾಗಿದ್ದ ಶಿಕ್ಷಣದ ವಿಮೋಚನೆಯಾಗಿದೆ. ಹೀಗೆ ವಿಮೋಚನೆಗೊಂಡ ಶಿಕ್ಷಣದಿಂದ ಜನರು ವಿಮೋಚನಾ ಶಕ್ತಿಯನ್ನು ಪಡೆಯಬೇಕಾಗಿದೆ. ಶಿಕ್ಷಣವನ್ನು ಸೆರೆಯಲ್ಲಿಟ್ಟ ಶಕ್ತಿಗಳು ಸಹ ಬದಲಾಗಬೇಕಾದ ಮತ್ತು ಬದಲಾಗುತ್ತ ಬಂದ ಇತಿಹಾಸವನ್ನುಳ್ಳ ನಮ್ಮ ಸಮಾಜದಲ್ಲಿ ಓದು ಒಂದು ಹೋರಾಟದ ಫಲವಾಗಿದ್ದು ಅದರಿಂದ ಹೊಸ ಅರಿವು ಮೂಡುತ್ತಾ ಬಂದಿದೆ ಎಂದರು.
ಕನ್ನಡ ತಾಯೀಕರಣವಾಗಬೇಕು
ಕನ್ನಡದ ತಾಯೀಕರಣವಾಗಬೇಕು. ಆಗ ಕರ್ನಾಟಕದ ಏಕೀಕರಣಕ್ಕೆ ಅರ್ಥಬರುತ್ತದೆ ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕನ್ನಡ ಎಂದಿಗೂ ಜೀವಂತವಾಗಿರುತ್ತದೆ. ಆದರೆ ಕನ್ನಡ ಮತ್ತು ಕನ್ನಡಿಗರ ಮುಂದೆ ಅನೇಕ ಸವಾಲುಗಳಿವೆ. ಶ್ರೀಮಂತ ಕನ್ನಡಿಗನ ಎದುರು ಬಡ ಕನ್ನಡಿಗನಿದ್ದಾನೆ. ಉದ್ಯಮಿ ಕನ್ನಡಿಗನ ಎದುರು ಕಾರ್ಮಿಕ ಕನ್ನಡಿಗನಿದ್ದಾನೆ. ಧಾರ್ಮಿಕ ಮತಾಂಧನ ಎದುರು ಸೌಹಾರ್ದತೆ ಸಾರುವ ಕನ್ನಡಿಗನಿದ್ದಾನೆ. ಅಸ್ಪೃಶ್ಯತೆ ಆಚರಿಸುವ ಕನ್ನಡಿಗನ ಎದುರು ಅಸ್ಪೃಶ್ಯತೆ ಆಚರಿಸದ ಕನ್ನಡಿಗರಿದ್ದಾರೆ. ಸಾಮಾಜಿಕ ಮತ್ತು ಜಾತಿಕಾರಣಕ್ಕಾಗಿ ಸರ್ಜಿಕಲ್ ದಾಳಿ ನಡೆಯುತ್ತಿವೆ. ಇದನ್ನು ಎದುರಿಸುವ ಸವಾಲು ನಮ್ಮ ಮುಂದಿದೆ ಎಂದರು.
ಭಾರತ ಭಿನ್ನಾಭಿಪ್ರಾಯಗಳ ಬಲಿಪೀಠವಾಗಬಾರದು ಎಂದ ಅವರು ಡಾ.ಕಲಬುರ್ಗಿ ಅವರ ಹತ್ಯೆಯಂಥ ಹೀನ ಕೃತ್ಯವನ್ನು ಪ್ರಸ್ತಾಪಿಸಿದ ಅವರು, ಕಲಬುರ್ಗಿ ಅವರ ಹತ್ಯೆಯ ಆರೋಪಿಗಳು ಇನ್ನು ಪತ್ತೆಯಾಗಿಲ್ಲ. ಇಂಥ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವಿದ್ವಾಂಸರ ಹತ್ಯೆಗಳು ಮುಂದೆ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದ ಯಾವ ರಾಜ್ಯಗಳಲ್ಲೂ ನಡೆಯದಿರಲಿ ಎಂದರು.
ಐಕ್ಯತೆ ಮತ್ತು ವೈವಿಧ್ಯತೆ;
ನಾನು ಶಾಲೆ ಕಲಿಯುವಾಗ ನನ್ನ ಕಣ್ಣೆದುರು ಕಾವೇರಿ ,ಗಂಧದ ನಾಡು ಇರಲಿಲ್ಲ.ಕುವೆಂಪು ಕಂಡ ಮಲೆನಾಡು ಇರಲಿಲ್ಲ. ಕಾರಂತರು ಕಂಡ ಕಡಲು ಇರಲಿಲ್ಲ. ಪು.ತಿ.ನ.ಕಂಡ ಮೇಲುಕೋಟೆಯೂ ಇರಲಿಲ್ಲ. ನರಸಿಂಹ ಸ್ವಾಮಿ ಕಂಡ ಮಲ್ಲಿಗೆಯೂ ಇರಲಿಲ್ಲ. ನನ್ನೆದುರು ಜಾಲಿ ಮರಗಳಿದ್ದವು. ಬತ್ತಿದ ಕೆರೆಗಳಿದ್ದವು, ಹಳ್ಳ ಕೊಳ್ಳಗಳಿದ್ದವು. ನಮಗೆ ಕಲಿಸಿದ ಮೇಷ್ಟ್ರು ಸಹ ಕರ್ನಾಟಕ ವರ್ಣಿಸುವ ಹಾಡುಗಳನ್ನು ಅಕ್ಷರಗಳಲ್ಲಿ ಕಂಡವರು ಎಂದರು.
ಕಾಗೆ ಸೌಹಾರ್ದತೆಗೆ ಮಮತೆ ಉದಾಹರಣೆ. ಕೋಗಿಲೆಯ ಮೊಟ್ಟೆಗೆ ಕಾವುಕೊಟ್ಟು ಮರಿ ಮಾಡುತ್ತದೆ. ಕೋಗಿಲೆಯ ಪೋಷಿಸುವ ಕಾಗೆ ಮನಸು ದೊಡ್ಡದು.ಕಾಗೆ ಸೌಹಾರ್ದತೆಗೆ ಸಂಕೇತ ಎಂದರು. ರಾಯಚೂರು ಮತ್ತು ಬರಗೂರು ಒಂದಾಗುವುದೇ ಕರ್ನಾಟಕದ ಏಕೀಕರಣಕ್ಕೆ ಉತ್ತಮ ಉದಾಹರಣೆ. ಸಾಹಿತಿಯಾದವನು ತನ್ನೆದುರಿನ ಜನಕ್ಕೆ ಜವಾವ್ದಾರಿಯಾಗಿರಬೇಕು.
ವಿಶ್ವಾಸಾರ್ಹತೆ ಬೇಕು;
ಇವತ್ತು ರಾಜಕಾರಣ, ಧಾರ್ಮಿಕ ಕ್ಷೇತ್ರ,ನ್ಯಾಯಾಂಗ ಮತ್ತು ಮಾದ್ಯಮ ಜನರ ವಿಶ್ವಾಸಾರ್ಹತೆ ಪಡೆದು ಕೆಲಸ ಮಾಡಬೇಕಿದೆ. ಕನ್ನಡ ಮಾದ್ಯಮದ ವಿಷಯದಲ್ಲಿ ನ್ಯಾಯಾಧೀಶರೇ ನ್ಯಾಯಾಂಗ ನಿಂದನೆ ಮಾಡಿದರು ಎಂದು ಬರಗೂರು ಹೇಳಿದರು. ಕನ್ನಡ ಮಾದ್ಯಮ ವಿಷಯದಲ್ಲಿ ೨೦೦೨ ಮತ್ತು ೨೦೦೮ ರಲ್ಲಿ ಸುಪ್ರೀಂಕೋರ್ಟ್ ನೀಡಿದ ಕನ್ನಡ ಮಾದ್ಯಮ ಆ ರಾಜ್ಯದ ಮಾತೃ ಭಾಷೆ ಪ್ರಾಥಮಿಕ ಶಿಕ್ಷಣದ ಭಾಷೆ ಎಂಬ ಆದೇಶವನ್ನು ,೨೦೧೪ ರಲ್ಲಿ ಬಂದ ನ್ಯಾಯಾಧೀಶರು ನಿರ್ಧರಿಸಿದ್ದೇ ಮಾದ್ಯಮ ಭಾಷೆ ಎಂದರು ನ್ಯಾಯಾಧೀಶರು. ನ್ಯಾಯಾಧೀಶರು ಬದಲಾದಂತೆ ನ್ಯಾಯ ಬದಲಾಗಬೇಕೇ? ಎಂದು ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು.