eshwarappaರಾಜ್ಯದ ಹಿಂದುಳಿದ ಹಾಗೂ ದಲಿತ ಸಮುದಾಯದ ಉದ್ದಾರಕ್ಕಾಗಿ ಸ್ಥಾಪನೆಯಾದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ಯಾವ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ,ಈ ಸಮುದಾಯಕ್ಕೆ ನ್ಯಾಯ ಸಲ್ಲಿಸಲು ಬ್ರಿಗೇಡ್ ಮುಂದುವರಿಯುತ್ತದೆ ಎಂದು ತಮ್ಮ ವಿರೋಧಿಗಳಿಗೆ ಸೆಡ್ಡು ಹೊಡೆದಿದ್ದಾರೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ,ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.ಬ್ರಿಗೇಡ್ ಸಮಾರಂಭಗಳಲ್ಲಿ ಪಾಲ್ಗೊಂಡರೆ ಸುಮ್ಮನಿರುವುದಿಲ್ಲ ಎಂದು ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿರುವ ಮುರುಳೀಧರರಾವ್ ನೀಡಿದ ಎಚ್ಚರಿಕೆಯನ್ನು ಲೆಕ್ಕಿಸದ ಈಶ್ವರಪ್ಪ ಇದೀಗ ಬಹಿರಂಗವಾಗಿಯೇ ಆ ಸವಾಲನ್ನು ಸ್ವೀಕರಿಸಿದಂತಾಗಿದೆ.
ಆ ಮೂಲಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಬ್ರೇಕ್ ಹಾಕಲು ಹೊರಟ ಮಾಜಿ ಮುಖ್ಯಮಂತ್ರಿ,ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೂ ಈಶ್ವರಪ್ಪ ಟಾಂಗ್ ನೀಡಿದಂತಾಗಿದ್ದು,ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮುಂದೆ ಕೈಗೊಳ್ಳಲಿರುವ ಕ್ರಮದ ಬಗ್ಗೆ ಎಲ್ಲರ ಗಮನ ಹರಿಯುವಂತಾಗಿದೆ.
ಇಂದು ಬೆಳಗಾವಿ ಜಿಲ್ಲೆಯ ನಂದಘಡದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಪ್ರತಿe ವಿಧಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಈಶ್ವರಪ್ಪ,ಯಾವ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲುವುದಿಲ್ಲ ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಜಾತಿ, ಧರ್ಮ ಭೇಧವಿಲ್ಲದೆ ಎಲ್ಲಾ ಹಿಂದುಳಿದವರಿಗೂ ನ್ಯಾಯ ದೊರಕಿಸಿ ಕೊಡುವುದಕ್ಕಾಗಿ ಈ ಬ್ರಿಗೇಡ್ ಸ್ಥಾಪಿಸಿದ್ದು. ಇದು ನಿಲ್ಲುವ ಪ್ರಶ್ನೆಯೇ ಇಲ್ಲ ಎಂದರು.
ಸಂಗೊಳ್ಳಿ ರಾಯಣ್ಣ ನೇಣಿಗೇರಿಸಲ್ಪಟ್ಟ ಕೂಡಲಸಂಗಮದಲ್ಲಿ ಜನವರಿ ೨೬ರಂದೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಬೃಹತ್ ಸಮಾವೇಶ ನಡೆಯಲಿದ್ದು, ಇದರಲ್ಲಿ ೧ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಪಟ್ಟಂತೆ ಯಾವುದೇ ಗೊಂದಲವಿಲ್ಲ. ಬಿಜೆಪಿ ರಾಷ್ಟ್ರೀಯ ಮುಖಂಡರಾದ ರಾಮ್‌ಲಾಲ್ ಜೀ ಅವರೊಂದಿಗೆ ಬೆಂಗಳೂರಿನಲ್ಲಿ ತಡರಾತ್ರಿವರೆಗೂ ಸುದೀರ್ಘ ಚರ್ಚೆ ನಡೆದಿದೆ. ಆಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಧ್ಯೇಯೋದ್ದೇಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಆದಾಗ್ಯೂ ಆಗ ನಡೆಯಬೇಕಿದ್ದ ತುಮಕೂರಿನ ಸಮಾವೇಶದಲ್ಲಿ ಪಾಲ್ಗೊಳ್ಳದಿರುವಂತೆ ಸೂಚಿಸಲಾಗಿತ್ತು.
ಆ ಪ್ರಕಾರ ನಾನು ತುಮಕೂರು ಸಮಾವೇಶದಿಂದ ದೂರ ಉಳಿದು ಪಕ್ಷದ ಹಿರಿಯರ ಸೂಚನೆಯನ್ನು ಪರಿಪಾಲಿಸಿದ್ದೆ. ಅದನ್ನು ಹೊರತುಪಡಿಸಿ ನಂತರದಲ್ಲಿ ನನಗೆ ಬ್ರಿಗೇಡ್‌ನ ಚಟುವಟಿಕೆಗಳಿಂದ ದೂರ ಇರುವಂತೆ ಯಾವುದೇ ಸೂಚನೆ ಪಕ್ಷದಿಂದ ಬಂದಿಲ್ಲ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ನಾನೊಬ್ಬ ಆರ್‌ಎಸ್ಸೆಸ್‌ನ ನಿಷ್ಠಾವಂತ ಕಾರ್ಯಕರ್ತ. ಸಂಘದ ಹಿರಿಯರು ಕೂಡಾ ಬ್ರಿಗೇಡ್ ಬಗ್ಗೆ ಕರೆಸಿ ಮಾತನಾಡಿದ್ದರು. ಅವರಿಗೂ ಎಲ್ಲವನ್ನೂ ಮನದಟ್ಟು ಮಾಡಿಕೊಟ್ಟಿದ್ದೇನೆ ಎಂದ ಅವರು, ಬ್ರಿಗೇಡ್‌ನೊಂದಿಗೆ ಗುರುತಿಸಿಕೊಂಡು ಇದರಲ್ಲಿ ಪಾಲ್ಗೊಳ್ಳಲು ಯಾವುದೇ ಕಾರ್ಯಕರ್ತರಿಗೂ ಬಲವಂತ ಮಾಡುವುದಿಲ್ಲ. ಸ್ವ ಇಚ್ಛೆಯಿಂದ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದರು.
ಈ ಬ್ರಿಗೇಡ್ ಕೇವಲ ಚುನಾವಣೆಗಷ್ಟೇ ಸೀಮಿತವಾಗುವುದಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ದಲಿತರು, ಹಿಂದುಳಿದವರ ಅಭಿವೃದ್ಧಿಗಾಗಿ ಕನಿಷ್ಟ ೧೦ಸಾವಿರ ಕೋಟಿ ಅನುದಾನ ಒದಗಿಸಲು ಪಣ ತೊಡುತ್ತೇವೆ ಎಂದು ಹೇಳಿದರು .
ನಾಳೆಯಿಂದಲೇ ಜ.೨೬ರ ಬೃಹತ್ ಸಮಾವೇಶಕ್ಕೆ ಪೂರಕವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬ್ರಿಗೇಡ್‌ನ ಸಮಾವೇಶಗಳನ್ನು ನಡೆಸಬೇಕೆಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.