vidhan-soudhaಬೆಂಗಳೂರು: ಮೂಲತ: ಕನ್ನಡ ನಾಡಿನವರಾದ ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧ ಬಹುತೇಕ ಸ್ತಬ್ದವಾಗಿತ್ತು.
ಮುಖ್ಯಮಂತ್ರಿ ಸಿದ್ಧರಾಮಯ್ಯ,ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ಹಲ ಪ್ರಮುಖರು ಜಯಲಲಿತಾ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆಂದು ತೆರಳಿದರೆ ಇತ್ತ ಜೆಡಿಎಸ್ ನಾಯಕ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಹಲವರು ಚೆನ್ನೈಗೆ ತೆರಳಿದ್ದರು.
ಇಷ್ಟೆಲ್ಲದರ ನಡುವೆ ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆ ಘೋಷಿಸಲಾಗಿತ್ತಾದ್ದರಿಂದ ಆಡಳಿತ ಕೇಂದ್ರ ವಿಧಾನಸೌಧ ಬಹುತೇಕ ಬಣಗುಟ್ಟುವಂತಾಗಿತ್ತು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಒಂದಿಬ್ಬರು ಮಂತ್ರಿಗಳು ಮಾತ್ರ ವಿಧಾನಸೌಧದಲ್ಲಿ ಹಾಜರಿದ್ದರಾದರೂ ಆಡಳಿತ ಕೇಂದ್ರದಲ್ಲಿ ಬಹುತೇಕ ಅಧಿಕಾರಿಗಳು ಗೈರು ಹಾಜರಾಗಿದ್ದರಿಂದ ಜನಸಂದಣಿ ನಗಣ್ಯವೆನಿಸುವಂತಿತ್ತು.
ಕೆಲವೇ ದಿನಗಳ ಹಿಂದೆ ಕಾವೇರಿ ನದಿ ನೀರಿನ ಹಂಚಿಕೆ ವಿವಾದದ ಸಂದರ್ಭದಲ್ಲಿ ಜಯಲಲಿತಾ ಧೋರಣೆ ವಿರುದ್ಧ ಕೆಂಡ ಕಾರಿದ್ದ ನಾಡಿನ ಜನರೂ,ಜಯಾ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದುದರಿಂದ ಇಡೀ ದಿನ ಜಯಾ ಮಂತ್ರವೇ ಅನುರಣಿಸುತ್ತಿತ್ತು.
ಅಂದ ಹಾಗೆ ಜಯಲಲಿತಾ ಸಾವಿಗೂ ಮುನ್ನ ಮುಖ್ಯಮಂತ್ರಿಗಳು ಸೇರಿದಂತೆ ಬಹುತೇಕ ಸಚಿವರು ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿಂದು ಸಭೆಗಳನ್ನು ನಿಗದಿ ಮಾಡಿಕೊಂಡಿದ್ದರಾದರೂ ಇದ್ದಕ್ಕಿದ್ದಂತೆ ಜಯಾ ಸಾವಿನ ಸುದ್ದಿ ಬಂದು ಅಪ್ಪಳಿಸುತ್ತಿದ್ದಂತೆಯೇ ಆಡಳಿತ ಕೇಂದ್ರ ಬಹುತೇಕ ಸ್ತಬ್ಧವಾಯಿತು.
ಹೀಗಾಗಿ ಪೂರ್ವ ನಿಗದಿತ ಸಭೆ,ಸಮಾರಂಭಗಳೂ ನಡೆಯಲಿಲ್ಲ.ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಒಂದಿಬ್ಬರು ಸಚಿವರನ್ನು ಹೊರತುಪಡಿಸಿ ಉಳಿದವರು ಇತ್ತ ಕಡೆ ಸುಳಿಯಲೂ ಇಲ್ಲ.
ಹೀಗೆ ಜಯಲಲಿತಾ ಸಾವು ಕರ್ನಾಟಕದ ಪಾಲಿಗೂ ನೋವಿನ ವಿಷಯವಾಗಿ ಇಡೀ ದಿನ ಮಂಕು ಕವಿದಂತಾಗಿತ್ತು.