asnotikarಕಾರವಾರ: ಬಿಜೆಪಿ ಆಡಳಿತದಲ್ಲಿ ಸಚಿವರಾಗಿದ್ದ ಇಡೀ ರಾಜ್ಯವೇ ರೆಸಾರ್ಟ್ ರಾಜಕಾರಣದ ಬಗ್ಗೆ ಕುತೂಹಲ ಸೃಷ್ಟಿಯಾಗುವಂತೆ ಮಾಡಿ ಅಷ್ಟೇ ಬೇಗನೆ ರಾಜಕೀಯದಿಂದಲೇ ನಾಪತ್ತೆಯಾಗಿದ್ದ ಕಾರವಾರ ಕ್ಷೇತ್ರದ ಮಾಜಿ ಸಚಿವರು ಮತ್ತೆ ರಾಜಕಾರಣಕ್ಕೆ ಇಳಿಯುವ ಸಿದ್ದತೆಯಲ್ಲಿದ್ದಾರೆ.
ಅವರು ಯಾರು ಅಂತ ಗೊತ್ತಾ,,? ಆನಂದ ಅಸ್ನೋಟಿಕರ್, ಹೆಸರು ನೆನಪಿರಬೇಕಲ್ಲವೇ..? ಯಸ್,, ಅವರೇ,,,ಕಾಂಗ್ರೆಸ್‌ನಿಂದ ಮೊದಲಬಾರಿಗೆ ಶಾಸಕನಾಗಿ ಆಯ್ಕೆಯಾಗಿ, ತಕ್ಷಣವೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಪರೇಶನ್‌ ಕಮಲದ ಅಡಿಯಲ್ಲಿ ಬಿಜೆಪಿಗೆ ಬಂದು ಚುನಾವಣೆಯಲ್ಲಿ ಗೆದ್ದು ಮಂತ್ರಿಯೂ ಆಗಿದ್ದ ಆನಂದ ಅಸ್ನೋಟಿಕರ್, ಈಗ ಮತ್ತೆ ರಾಜಕೀಯ ಪ್ರವೇಶ ಮಾಡಲಿದ್ದಾರೆ.
ಹೌದು,,ತಮ್ಮ ಸ್ವಗೃಹದಲ್ಲಿಯೇ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಆನಂದ, ನಮ್ಮ ಮುಂದಿನ ರಾಜಕೀಯ ನಡೆಯನ್ನು ಬಿಚ್ಚಿಟ್ಟಿದ್ದಾರೆ. ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಒತ್ತಡಕ್ಕೆ ಮಣಿದು ಏಪ್ರಿಲ್‍ನಿಂದ ಮತ್ತೆ ರಾಜಕೀಯಕ್ಕೆ ಮರು ಪ್ರವೇಶ ಮಾಡಲು ಸಿದ್ದತೆ ನಡೆಸಿರುವುದಾಗಿ ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸತೀಶ ಸೈಲ್‌ ವಿರುದ್ಧ ಸೋತು, ಚುನಾವಣೆಯ ನಂತರ ಏಕಾಏಕಿ ನಾಪತ್ತೆಯಾಗಿದ್ದ ಅಸ್ನೋಟಿಕರ್, ಮತ್ತೆ ಬಿಜೆಪಿಯಿಂದಲೇ ಚುನಾವಣಾ ಕಣಕ್ಕೆ ಇಳಿಯುವ ಸಿದ್ಧತೆ ನಡೆಸಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಳ್ಳದೇ ನಾಪತ್ತೆಯಾಗಿದ್ದರು. ಅಲ್ಲದೇ ಕಾಂಗ್ರೆಸ್ ಅಥವಾ ಜೆಡಿಎಸ್‌ ಪಕ್ಷಕ್ಕೆ ಹೋಗುವ ಕಸರತ್ತನ್ನೂ ನಡೆಸಿದ್ದರು. ಆದರೆ ಸ್ವತಂತ್ರ ಅಭ್ಯರ್ಥಯಾಗಿದ್ದ ಸೈಲ್‌ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾದ ನಂತರ ಅಸ್ನೋಟಿಕರ್‌ಗೆ ಕಾಂಗ್ರೆಸ್‌ ಬಾಗಿಲು ಮುಚ್ಚಿದ್ದರಿಂದ ಮತ್ತೆ ಬಿಜೆಪಿಯಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಜೆಡಿಎಸ್‌ಗೆ ಕ್ಷೇತ್ರದಲ್ಲಿ ಭವಿಷ್ಯ ಇಲ್ಲ ಎಂದು ಭಾವಿಸಿ ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನುವ ಮಾತು ಕೇಳಿಬರಲಾರಂಭಿಸಿದೆ.
ಈ ಹಿನ್ನೆಲೆಯಲ್ಲಿ ಸಕ್ರೀಯ ರಾಜಕಾರಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿಕೊಂಡಿದ್ದು, ಪ್ರತಿಯೊಂದು ಹಂತದಲ್ಲೂ ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಕ್ಷೇತ್ರಕ್ಕೆ ಅಭಿವೃದ್ಧಿಗೆ ಒಬ್ಬ ಸಮರ್ಥ ನಾಯಕನ ಅವಶ್ಯಕತೆ ಇದೆ ಎನ್ನುವ ಮೂಲಕ ಹಾಲಿ ಶಾಸಕ ಸತೀಶ ಸೈಲ್‌ಗೆ ಅಸ್ನೋಟಿಕರ್ ಟಾಂಗ್‌ ಕೊಟ್ಟಿದ್ದಾರೆ. ಈಗಿನ ಶಾಸಕರು ಒಂದುವರೆ ವರ್ಷ ಜೈಲಿನಲ್ಲಿದ್ದವರು. ಅಲ್ಲದೇ ಅವರ ಮೇಲಿರುವ ಚಾರ್ಜ್‍ಶೀಟ್ ನೋಡಿದರೆ ಮತ್ತೇ ಯಾವಾಗ ಜೈಲಿಗೆ ಹೋಗುತ್ತಾರೆಂದು ಹೇಳಲು ಸಾಧ್ಯವಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳವರಿಂದ ಕ್ಷೇತ್ರದ ಅಭಿವೃದ್ಧಿಯಾಗದೆ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಟೀಕಿಸಿದರು.
ಶಾಸಕರಿಗೆ ಇನ್ನು ಪ್ರತಿಯೊಂದು ಕ್ಷೇತ್ರದ ಜನಾಂಗಕ್ಕೆ ನ್ಯಾಯ ಕಲ್ಪಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಜನರಿಗೆ ಈ ಸಂದರ್ಭದಲ್ಲಿ ಒಬ್ಬ ಉತ್ತಮ ನಾಯಕನ ಅವಶ್ಯಕತೆ ಎನ್ನುವುದು ಜನರ ಅಪೇಕ್ಷೆಯಾಗಿದೆ. ಹಾಗಾಗಿ ಕ್ಷೇತ್ರದ ಜನರಿಗೆ ಸ್ಪಂದಿಸಬೇಕು, ಕ್ಷೇತ್ರಕ್ಕೆ ನ್ಯಾಯ ಕಲ್ಪಿಸಬೇಕು ಎಂದು ಮತ್ತೇ ಸಕ್ರಿಯ ರಾಜಕೀಯಕ್ಕೆ ಧುಮುಕುವ ವಿಚಾರದಲ್ಲಿದ್ದೇನೆ ಎನ್ನುವ ಮೂಲಕ ತಾವೇ ಕಾರವಾರ-ಅಂಕೋಲಾ ಕ್ಷೇತ್ರದ ಮುಂದಿನ ನಾಯಕ ಎಂದು ಪರೋಕ್ಷವಾಗಿ ಹೇಳಿರುವುದು ಸಾಕಷ್ಟು ಕುತೂಹಲಕ್ಕೆಡೆಮಾಡಿಕೊಟ್ಟಿದೆ.
ನಾನು ಬಿಜೆಪಿಯ ಕಾರ್ಯಕರ್ತನಾಗಿದ್ದು ಶಾಸಕ ಅಥವಾ ಮಂತ್ರಿಯಾಗಬೇಕೆಂಬ ಆಕಾಂಕ್ಷೆಯನ್ನಿಟ್ಟುಕೊಂಡು ರಾಜಕೀಯಕ್ಕೆ ಬರುತ್ತಿಲ್ಲ. ನನ್ನ ತಂದೆಯವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯದಂತೆ ಪುನಃ ಕಣಕ್ಕಿಯುವ ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಸ್ನೋಟಿಕರ್‌ಗೆ ಸಾಡೇಸಾತಿಯಂತೆ :
ಕಳೆದ ಏಳುವರೆ ವರ್ಷದಿಂದ ತಮಗೆ ಸಾಡೇಸಾತಿ ಇತ್ತು. ನಮ್ಮ ಪುರೋಹಿತರು ಕ್ಷೇತ್ರಕ್ಕೆ ತೆರಳಬೇಡಿ ಎಂದು ತಿಳಿಸಿ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ದೂರ ಉಳಿದಿದ್ದೇನೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಸೋತ ನಂತರ ಕ್ಷೇತ್ರದಲ್ಲಿದ ಜನತೆ ಮುಂದೆ ಬಂದಿಲ್ಲ. ತಮ್ಮ ತಂದೆ ಆಕಸ್ಮಿಕವಾಗಿ ಅಗಲುವಿಕೆಯ ನಂತರ ತಾವು ಅತೀ ಚಿಕ್ಕ ವಯಸ್ಸಿನಲ್ಲಿ ಸಕ್ರಿಯ ರಾಜಕೀಯ ಕ್ಷೇತ್ರಕ್ಕೆ ಬಂದೆ. ಸೋತ ಬಳಿಕ. ಕಳೆದ ಮೂರುವರೆ ವರ್ಷದಲ್ಲಿ ರಾಜಕೀಯವಾಗಿ ಹೇಗೆ ಶಸಕ್ತವಾಗಬೇಕು ಎನ್ನುವುದನ್ನು ತಾನು ಕಲಿತ್ತಿದ್ದೇನೆ. ಅಲ್ಲದೆ ನನ್ನ ವೈಯಕ್ತಿಕ ಕಾರಣಗಳಿಂದ ಆ ಅವಧಿಯಲ್ಲಿ ರಾಜಕೀಯವಾಗಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದರು.
ಕ್ಷೇತ್ರದಲ್ಲಿ ಪ್ರತಿಯೊಂದು ಸಮಾಜದವರಿಗೆ ಅನ್ಯಾಯವಾಗುತ್ತಿದೆ. ಅವರೆಲ್ಲರಿಗೂ ನ್ಯಾಯಬೇಕಾಗಿದೆ. ನಾನೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕನಾಗಿ ರಾಜಕಾರಣಕ್ಕೆ ಬಂದೆ. ಜನರಿಗೆ ನನ್ನ ಬಗ್ಗೆ ಹಿನ್ನೆಲೆ ಗೊತ್ತಿದೆ. ಮುಂದಿನ ಎಪ್ರಿಲ್‍ವರೆಗೆ ನಾನು ಸ್ವಲ್ಪ ವೈಯಕ್ತಿಕ ಕಾರಣಗಳಿಂದ ಸಾರ್ವಜನಿಕರಿಂದ ದೂರವಿರುತ್ತಿದ್ದೇನೆ. ತದನಂತರ ಸಾರ್ವಜನಿಕರ ವಲಯದಲ್ಲಿ ಕಾಣಿಸಿಕೊಂಡು. ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬಂದ ಮೇಲೆ ಸಂಪೂರ್ಣವಾಗಿ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.