vipamಈ ಹಿಂದೆ ‘ಗರ್ಭದಗುಡಿ’ ಮತ್ತು ‘೧೪೧ ಐಲವ್ ಯೂ’ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ವೇಂಪಲ್ಲಿ ಬಾವಾಜಿ ಇದೀಗ ಮತ್ತೊಂದು ಚಿತ್ರದ ಮೂಲಕ ಮರಳಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ವಿವಾದಾತ್ಮಕ ಕಥಾ ವಸ್ತುಗಳ ಮೂಲಕ ವಿವಾದ ಮತ್ತು ಒಂದಷ್ಟು ಚರ್ಚೆಗಳನ್ನು ಹುಟ್ಟು ಹಾಕಿದ್ದ ಇವರೀಗ ‘ಅಕ್ಕ ಭಾವ ಓ ಭಾಮೈದ’ ಎಂಬ ಸಂಪೂರ್ಣ ಕಾಮಿಡಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.
ಅಪ್ಸರಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಇದೀಗ ಶೇ ಎಪ್ಪತ್ತರಷ್ಟು ಚಿತ್ರೀಕರಣ ಮುಗಿದಿದೆ. ಈ ಚಿತ್ರದಲ್ಲಿ ಫಾರು ಎಂಬ ಇಪ್ಪತ್ತು ವರ್ಷದ ಹುಡುಗ ನಾಯಕರಾಗಿ ನಟಿಸಿದ್ದಾರೆ. ತೆಲುಗಿನ ಒಂದಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಬಿಂದು ಈ ಚಿತ್ರದ ನಾಯಕಿ. ಈಕೆ ಈಗಾಗಲೇ ತೆಲುಗಿನಲ್ಲಿ ಬಸ್ಸ್ಟಾಪ್, ಈ ರೋಜುಲೋ, ಮನಸಂತಾ ಮುಂತಾದ ಚಿತ್ರಗಳಲ್ಲಿ ನಟಿಸಿರುವಾಕೆ.
ಈ ಚಿತ್ರದ ನಿರ್ದೇಶಕ ವೇಂಪಲ್ಲಿ ಬಾವಾಜಿ ತೆಲುಗಿ ಚಿತ್ರರಂಗದಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಬರಹಗಾರರಾಗಿ ಗುರುತಿಸಿ ಕೊಂಡಿರುವವರು. ಆದರೆ ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಈ ಹಿಂದೆ ಇವರು ನಿರ್ದೇಶಿಸಿದ್ದ ‘೧೪೧ ಐಲವ್ಯೂ’ ಎಂಬ ಲೆಸ್ಬಿಯನ್ಸ್ ಲವ್ ಸ್ಟೋರಿ ಹೊಂದಿದ್ದ ಚಿತ್ರ ಭಾರೀ ವಿವಾದ ಮತ್ತು ಚರ್ಚೆ ಹುಟ್ಟು ಹಾಕಿತ್ತು. ಸೆನ್ಸಾರ್ ಮಂಡಳಿಯೂ ಈ ಬಗ್ಗೆ ಹಗ್ಗ ಜಗ್ಗಾಟ ನಡೆಸಿತ್ತು. ಈ ಬಾರಿ ವೇಂಪಲ್ಲಿಯವರು ‘ಅಕ್ಕ ಭಾವ ಓ ಭಾಮೈದ’ ಎಂಬ ಕಾಮಿಡಿ ಸಬ್ಜೆಕ್ಟಿನ ಮೂಲಕ ಸದ್ದು ಮಾಡುತ್ತಿದ್ದಾರೆ.
ಈಗಾಗಲೇ ಹೈದ್ರಾಬಾದ್ ಮತ್ತು ಬೆಂಗಳೂರಿನಲ್ಲಿ ೭೦ ಭಾಗ ಶೂಟಿಂಗ್ ಮುಗಿಸಿಕೊಂಡಿರುವ ಇದು ಪಕ್ಕಾ ಫ್ಯಾಮಿಲಿ ಮೂವಿ. ರಂಗಭೂಮಿ ನಟ ಕುಂಬಳಗೋಡು ನಾಗರಾಜ್ ಇಲ್ಲಿ ಯಡವಟ್ಟು ಭಾವನ ಪಾತ್ರದಲ್ಲಿ ನಟಿಸಿದ್ದಾರಂತೆ. ಈ ಚಿತ್ರದಲ್ಲಿರೋದು ನಾಲ್ಕು ಪಾತ್ರಗಳಷ್ಟೇ. ಆ ಮನೆಯಲ್ಲಿ ಭಾವ ಮಾಡುವ ಮಹಾ ಯಡವಟ್ಟೊಂದು ಮನೆಯಲ್ಲಿ ಪ್ರತೀ ದಿನ ಹೊಸ ಹೊಸಾ ತೊಂದರೆಗಳನ್ನು ತಂದಿಡುತ್ತವೆ. ಅದರ ಸುತ್ತಲೇ ಕಥೆ ಸುತ್ತುತ್ತದಂತೆ. ಇಲ್ಲಿ ಭಾಮೈದನ ಲವರ್ ಆಗಿ ಬಿಂದು ಕಾಣಿಸಿಕೊಂಡಿದ್ದಾರೆ.
ಹೈದ್ರಾಬಾದಿನ ಚಾರ್ಮಿನಾರ್, ನೆಕ್ಲೇಸ್ ರೋಡು, ಹುಸೇನ್ ಸಾಗರ್ ಸೇರಿದಂತೆ ಅದ್ಭುತ ಲೊಕೇಷನ್ನುಗಳಲ್ಲಿ ಶೇ. ೩೦ರಷ್ಟು ಚಿತ್ರೀಕರಣ ನಡೆಸಲಾಗಿದೆ. ಎರಡು ಹಾಡು ಮತ್ತು ಸ್ವಲ್ಪ ಮಾತಿನ ಭಾಗವಷ್ಟೇ ಬಾಕಿ ಉಳಿದಿದೆ. ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಈ ಚಿತ್ರ ಏಕ ಕಾಲದಲ್ಲಿ ತಯಾರಾಗಿದೆ. ಆದರೆ ತೆಲುಗಿನಲ್ಲಿ ಭಾವನ ಪಾತ್ರ ಬದಲಾಗಿದೆಯಂತೆ.
ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ೨ ಹಾಡುಗಳು ಈಗಾಗಲೇ ಚಿತ್ರೀಕರಣಗೊಂಡಿವೆ. ಹೆಣ್ಣುಮಕ್ಕಳ ವಿಶೇಷ ಫ್ಯಾಮಿಲಿ ಸಾಂಗ್ ಕೂಡಾ ಇದೆ. ಗಂಡ-ಹೆಂಡತಿಯ ನಡುವಿನ ಹಾಡಿನ ಭಾಗ ಪಬ್ ನಲ್ಲಿ ಶೂಟ್ ಆಗುತ್ತೆ. ಈ ಹಾಡಿನಲ್ಲಿ ‘೧೪೧’ ಚಿತ್ರದ ಹೀರೋಯಿನ್ ಕಾವ್ಯ ಗೆಸ್ಟ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಹಂಡ್ರೆಡ್ ಪರ್ಸೆಂಟ್ ಕಾಮಿಡಿ ಚಿತ್ರವಾಗಿರುವ ಅಕ್ಕ ಭಾವ ಓ ಭಾಮೈದ ಚಿತ್ರಕ್ಕೆ ತೆಲುಗಿನಲ್ಲಿ ಸರಿಸುಮಾರು ೮೦ ಚಿತ್ರಗಳಿಗೆ ಕೆಲಸ ಮಾಡಿರುವ ರಮೇಶ್ ಗೌಡ ಕ್ಯಾಮೆರಾ, ಯುವ ಪ್ರತಿಭೆ ಅರುಣ್ ಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ.
ಅಂದಹಾಗೆ ಇದೇ ತಿಂಗಳ ಹತ್ತನೇ ತಾರೀಖು ನಾಯಕನಟ ಫಾರು ಅವರ ಹುಟ್ಟಿದ ಹಬ್ಬ. ಅಷ್ಟೊತ್ತಿಗೆ ಚಿತ್ರೀಕರಣ ಮುಗಿಸಿ, ಜನವರಿ ೨ನೇ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ‘ಅಕ್ಕ ಭಾವ ಓ ಭಾಮೈದ’ರನ್ನು ತೆರೆಗೆ ತರಲು ಕೆಲಸ-ಕಾರ್ಯಗಳು ನಡೆಯುತ್ತಿದೆ.