mysore-paperಬೆಂಗಳೂರು : ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಎಂಪಿಎಂ (ಮೈಸೂರು ಪೇಪರ್ ಮಿಲ್ಸ್ ) ಕಾರ್ಖಾನೆಯ 2 ಸಾವಿರ ಕಾರ್ಮಿಕರಿಗೆ ಸ್ವಯಂ ನಿವೃತ್ತಿ, ಶಿವನಸಮುದ್ರದಲ್ಲಿ 200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಯಾಗಿದ್ದು, ಅದರಲ್ಲಿ ಕೆಲ ವಿಷಯಗಳಿಗೆ ಒಪ್ಪಿಗೆ ದೊರೆತಿದೆ.
ಸಚಿವ ಸಂಪುಟ ಸಭೆ ಮುಗಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತುಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು, ಭದ್ರಾವತಿಯ ಎಂಪಿಎಂ ನಲ್ಲಿರುವ 2000 ಕಾರ್ಮಿಕರಿಗೆ ಸ್ವಯಂ ನಿವೃತ್ತಿ ನೀಡಲು ತೀರ್ಮಾನಿಸಲಾಗಿದೆ. ಸ್ವಯಂ ನಿವೃತ್ತಿ ನೀಡಲು 396 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಎಂಪಿಎಂ ಕಾರ್ಖಾನೆ ಸುಮಾರು 700 ಕೋಟಿ ರೂ. ನಷ್ಟದಲ್ಲಿರುವುದರಿಂದ ಕಾರ್ಮಿಕರ ಸ್ವಯಂನಿವೃತ್ತಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯುತ್ ಘಟಕ ಸ್ಥಾಪನೆ : ಶಿವನಸಮುದ್ರದಲ್ಲಿ 200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯರು 60 ವರ್ಷಕ್ಕೆ ನಿವೃತ್ತರಾಗಿದ್ದರು. ಆದರೆ, ಈಗ ಅವರ ಸೇವೆ 5 ವರ್ಷಕ್ಕೆ ವಿಸ್ತರಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಅವರ ಸೇವೆಯನ್ನು ಮುಂದುವರಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ಹಾಗೂ ಖಾಸಗಿ ಲೇಔಟ್ ಗಳಲ್ಲಿ ಪಾರ್ಕ್ ನಿರ್ಮಾಣದ ತಿದ್ದುಪಡಿ ವಿಧೇಯಕ ಮತ್ತೆ ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಖಾಸಗಿ ಲೇಔಟ್ ನಲ್ಲಿ ಶೇ.10 ರಷ್ಟು ಭೂಮಿ ಮೀಸಲು ಹಾಗೂ ಸರ್ಕಾರಿ ಲೇಔಟ್ ನಲ್ಲಿ ಶೇ.15 ರಷ್ಟು ಭೂಮಿ ಮೀಸಲಾಗಿತ್ತು. ಆದರೆ, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ರಾಜ್ಯಪಾಲರು ಆ ವಿಧೇಯಕವನ್ನು ವಾಪಸ್ ಕಳುಹಿಸಿದ್ದರು. ಆದರೆ ಈಗ ತಿದ್ದುಪಡಿ ವಿಧೇಯಕವನ್ನು ಮತ್ತೆ ಅನುಮತಿಗಾಗಿ ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ ಎಂದರು.
ಲೋಕಾಯುಕ್ತ ವರದಿ ಬಗ್ಗೆ ಚರ್ಚೆ : ಮೈಸೂರು ಮಿನರಲ್ಸ್ ನಲ್ಲಿ ಅಕ್ರಮ ನಡೆದಿರುವ ಲೋಕಾಯಯಕ್ತ ವರದಿ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆದಿದ್ದು, ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.
ಪ್ರಭಾವಿ ಸಚಿವರು ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಈ ವರದಿ ಮರುಪರಿಶೀಲಿಸಲು ಗಣಿ ಇಲಾಖೆಗೆ ವರದಿ ವಾಪಸ್ ಕಳುಹಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.