sheni_gopala_krishna_bhat🔹ಪಿ.ಎಸ್.ನಾಯಕ್
ಸಭ್ಯತೆಯ ಎಲ್ಲೆ ಮೀರಿದ ಅನುಚಿತ ನೃತ್ತ ನರ್ತನಗಳನ್ನು ಬಿಂಬಿಸುವ ಸನ್ನಿವೇಶಗಳನ್ನು ಒಳಗೊಂಡ ಯಕ್ಷಪ್ರಸಂಗವನ್ನು ಪ್ರದರ್ಶನಕ್ಕೆ ಆಯ್ದುಕೊಂಡಿದೆ ಎಂದು ಹೇಳಲಾದ ಮೇಳವೊಂದರ ವಿಷಯದಲ್ಲಿ ಈ ವೇದಿಕೆಯಲ್ಲಿ ಪ್ರಸಾರಗೊಂಡ ಸಂದೇಶದ ಹಿನ್ನೆಲೆಯಲ್ಲಿ ಈ ಕಿರು ಪ್ರತಿಕ್ರಿಯೆ.

ಮೇಲೆ ಉಲ್ಲೀಖಿಸಿದ ನೃತ್ತಾಭಿನಯದ ಋಜುತ್ವವನ್ನು ಸ್ಥಾಪಿಸುವುದಾಗಲೀ ಯಕ್ಷರಂಗಮಂಚದಲ್ಲಿ ಅದರ ಔಚಿತ್ಯದ ಕುರಿತಾಗಿ ಚರ್ಚಿಸುವುದಾಗಲೀ ಈ ಬರೆಹದ ಉದ್ದೇಶ ಅಲ್ಲ. ಆದರೆ, ಸುಮಾರು ನಾಲ್ಕು ದಶಕಗಳ ಹಿಂದೆ, ಪ್ರಣಯ ಸನ್ನಿವೇಶ/ಸಂದರ್ಭಗಳಲ್ಲಿ, ಸ್ತ್ರೀ ಮತ್ತು ಪುರುಷ ಪಾತ್ರಧಾರಿಗಳ ನಡುವೆ ಕಂಡುಬರುತ್ತಿದ್ದ ಸಂಯಮದ ಸೂಕ್ಷ್ಮ ಎಳೆಯನ್ನು ತೋರಿಸುವುದ್ದಷ್ಟಕ್ಕೇ ಸೀಮಿತಗೊಂಡ ಒಂದು ಅವಲೋಕನ.

2003 ರಲ್ಲಿ ಬಿಡುಗಡೆಗೊಂಡ, ಶೇಣಿಯವರ ಯಕ್ಷಚಿಂತನದ ಸಿಂಚನವನ್ನು ಒಳಗೊಂಡ, ಶ್ರೀಯುತ ನಾ.ಕಾರಂತ ಪೆರಾಜೆ ಸಂಪಾದಿತ ಶೇಣಿ ಚಿಂತನದ ಆಯ್ದ ಭಾಗದಲ್ಲಿ ಗತಕಾಲದ ಪ್ರಸಿದ್ಧ ಸ್ತ್ರೀಪಾತ್ರಧಾರಿ ಕಟೀಲು ಪುರುಷೋತ್ತಮ ಭಟ್ಟರ ಬಗೆಗೆ ಶೇಣಿಯವರ ಮೆಚ್ಚುಗೆಯ ಮಾತುಗಳನ್ನು ನೋಡಿರಿ.

*ಕಟೀಲು ಪುರುಷೋತ್ತಮ ಭಟ್ಟರ ಬಗ್ಗೆ ನಾನು ಏನು ಹೇಳಿದರೂ ಹೆಚ್ಚಾದೀತು. ಹಾಗಂತ ಕಡಿಮೆ ಹೇಳಬಾರದು. ಪುರುಷೋತ್ತಮ ಭಟ್ಟರು ಉತ್ತಮ ಸ್ತ್ರೀ ಪಾತ್ರಧಾರಿ. ಅವರದು ಯಕ್ಷಗಾನದ ಗೌರವಯುತವಾದ ಪಾತ್ರ.

ನಾವೆಲ್ಲಾ ಹಳ್ಳಿಯ ಜನಗಳು. ನಮಗೆ ಹೆಂಗಸರು ಅಂದರೆ ಯಾರು? ನಮ್ಮ ಮನೆಯಲ್ಲಿದ್ದಂತಹ ಹೆಂಗಸರು ಅಥವಾ ನಮ್ಮ ನೆಂಟರಿಷ್ಟರ ಮನೆಯಲ್ಲಿದ್ದ ಹೆಂಗಸರು.ಅವರೆಲ್ಲ ಕುಲವತಿಯರು, ಗಾಂಭೀರ್ಯವುಳ್ಳವರು. ಕಾಣುವವರಿಗೆ ಏನೋ ಒಂದು ತರಹದ ಗೌರವವನ್ನು ಉಂಟುಮಾಡತಕ್ಕ ವ್ಯಕ್ತಿತ್ವವುಳ್ಳವರು. ಒಂದೇ ಮಾತಿನಲ್ಲಿ ಹೇಳುವುದಾದರೆ, ಅವರೆಲ್ಲಾ ಮನೆತನದ ಹೆಣ್ಣುಮಕ್ಕಳು.

ರಂಗಸ್ಥಳದಲ್ಲಿ ಮನೆತನದ ಹೆಣ್ಣು ಮಕ್ಕಳ ಮೊದಲ ಸ್ವರೂಪವನ್ನು ನಾವೆಲ್ಲಾ ಕಂಡದ್ದು ಪುರುಷೋತ್ತಮ ಭಟ್ಟರಲ್ಲಿ.

ಅವರು ಶಕುಂತಳೆಯನ್ನೇ ಮಾಡಲಿ, ಪ್ರಭಾವತಿಯನ್ನೇ ಮಾಡಲಿ, ಗಂಡನ ಪಾತ್ರ ಮೈಮುಟ್ಟಿದರೆ ಅವರು ಸಹಿಸುತ್ತಿರಲಿಲ್ಲ.ಅಷ್ಟು ಗಾಂಭೀರ್ಯದ ಅಭಿವ್ಯಕ್ತಿ.

ಅಂದು ಶಕುಂತಳಾ ಪರಿಣಯ ಪ್ರಸಂಗ. ಪುರುಷೋತ್ತಮ ಭಟ್ಟರ ಶಕುಂತಳೆ, ಅಳಿಕೆ ರಾಮಯ್ಯ ರೈಗಳ ದುಶ್ಯಂತ…. ಬೆಳಗ್ಗಿನ ತನಕ ಮಂಜಯ್ಯ ಹೆಗ್ಗಡೆಯವರು ಆಟ ನೋಡಿದರು. ಮೆಚ್ಚಿದರು. ಕಣ್ವಮುನಿಯ ಪಾಲಿತಪುತ್ರಿಯಾದಂತಹ ಶಕುಂತಳೆಯನ್ನು ಪುರುಷೋತ್ತಮ ಭಟ್ಟರಲ್ಲಿ ಅಂದು ಕಾಣುವುದಕ್ಕೆ ಸಾಧ್ಯವಾದದ್ದು.

ನಮ್ಮ ಯಕ್ಷಗಾನ ಪ್ರಸಂಗದ ಒಳಗಿನ ಸೂತ್ರವೂ ಇದೇ. ಯಾವುದೇ ಪ್ರಸಂಗದಲ್ಲಿ ಕುಲೀನೆಯಾದ ಹೆಣ್ಣು ಗಂಡನನ್ನು ಕೂಡಾ ಎದೆಯುಬ್ಬಿಸಿ ಪ್ರಶ್ನಿಸುವವಳೇ. ಅಂತಹ ಮಾತೃಸ್ಥಾನ. ಪುರುಷೋತ್ತಮ ಭಟ್ಟರು ಇದನ್ನು ಜೀವಂತಗೊಳಿಸಿದರು.

ಈಗೆಲ್ಲಾ ಶೃಂಗಾರ ಎಂಬುದು ರಂಗದಲ್ಲಿ ಎಲ್ಲಿಯವರೆಗೆ ಮುಟ್ಟಿದೆ ಅಂದರೆ, ಮೈಮುಟ್ಟುವುದು ಮಾತ್ರವಲ್ಲ, ಅದರಿಂದಾಚೆಗೆ ದಾಟಿದೆ! ಸಿನೇಮದವರೊಂದಿಗೆ ನಮ್ಮ ಆಟದವರು ಪೈಪೋಟಿ ಮಾಡಹೊರಟಂತಿದೆ.

ಯಾವ ಗಂಡನೂ ಮೈಮೇಲೆ ಬೀಳುವ ಹೆಂಡತಿಯನ್ನು ನಂಬುವುದಿಲ್ಲ. ಆ ಪ್ರಜ್ಞೆ ವೇಷಧಾರಿಗೆ ಇರಬೇಕು.

ಇಂತಹ ಹಲವು ವಿರೋಧಾಭಾಸಗಳು ರಂಗದಲ್ಲಿ ನಡೆಯುತ್ತಲೇ ಇದೆ. ಆದರೆ, ಪುರುಷೋತ್ತಮ ಭಟ್ಟರ ವೇಷದಲ್ಲಿ ಇದಿಲ್ಲ. ಆದ್ದರಿಂದಲೇ ಅವರು “ಯಕ್ಷಕನ್ಯೆ” ಎಂಬ ಪುರಸ್ಕಾರಕ್ಕೆ ಯೋಗ್ಯರು. ಹೊಸ ಸ್ತ್ರೀವೇಷಧಾರಿಗಳಿಗೊಂದು ಆದರ್ಶ.

ಯಕ್ಷಗಾನದ ಅದರಲ್ಲೂ ದಿ.ಶೇಣಿ ಗೋಪಾಲಕೃಷ್ಣ ಭಟ್ಟರ ಅಭಿಮಾನಿಗಳು ಓದಲೇ ಬೇಕಾದ ವಿವಿಧ ಸಂದರ್ಭಗಳಲ್ಲಿ ಅವರು ಮಾಡಿದ ಉಪನ್ಯಾಸಗಳ ಬರೆಹ ರೂಪ, ನಾ.ಕಾರಂತರ ಪ್ರಯತ್ನದ ಸಾರ್ಥಕ ರೂಪ, ಶೇಣಿ ಚಿಂತನ.

 

source- whatsapp