whatsapp-image-2016-12-04-at-11-57-00-am-ಕೃಷ್ಣಪ್ರಕಾಶ ಉಳಿತ್ತಾಯ
ಗಾಯಕನ, ವಾದಕನ ಮತ್ತು ನರ್ತಕನ ಗಾನಾನುಸಂಧಾನ
ಕಲೆ ಮತ್ತು ಕಲಾವಿದನ ವ್ಯಕ್ತಿತ್ವದ ಕುರಿತಾಗಿ ಯೊಚಿಸುತ್ತಿದ್ದಾಗ ಹೊಳೆಯುವುದಿಷ್ಟು. ಕಲಾವಿದನ ವ್ಯಕ್ತಿತ್ವವೇ ಕಲೆಯಲ್ಲಿ ಅಭಿವ್ಯಕ್ತವಾಗುವುದು. ಇದಕ್ಕೆ ಕಲಾವಿದನ ಸಂಸ್ಕಾರ,ಇಲ್ಲಿಯವರೆಗಿನ ಅನುಭವಗಳ ಪ್ರಭಾವೆಲ್ಲವಿವೆ. ಇದು ಜೀವನಕ್ಕೂ ಒಪ್ಪುವ ಮಾತು ಹೌದಷ್ಟೆ? ಅಂತೆಯೇ, ಕಲಾವಿದನಾದವ ಕಲೆಯಲ್ಲಿ ಏನನ್ನು ಹೇಳುತ್ತಾನೆಯೋ ಅವೆಲ್ಲ ಅವನ ಒಟ್ಟು ಜೀವನಾನುಭವಗಳನ್ನು ಸಮಪಾಕದ ಪ್ರತಿಬಿಂಬ. ಇದು ವಾದನದಲ್ಲೂ, ಗಾಯನದಲ್ಲಿ, ನರ್ತನದಲ್ಲಿ ಮತ್ತು ಇನ್ನಿತರ ಯಾವುದೇ ಕಲೆಗಳಲ್ಲೂ ಕೂಡ ಸತ್ಯಕ್ಕೆ ಹತ್ತಿರವಾದ ವಿಚಾರ. ವ್ಯಕ್ತಿಯ ಜೀವನ ಧೀರತೆಯಿಂದ ಕೂಡಿದ್ದರೆ ಮತ್ತು ನೇರಾ ನೇರವಾಗಿದ್ದರೆ ಕಲೆಯಲ್ಲಿ ಕೂಡ ಯಾವುದೇ ರೀತಿಯ ಅಧೀರತೆ, ವಕ್ರಗತಿಗಳಿರುವ ಸಂಭವವಿರುವುದಿಲ್ಲ. ಕಲಾವಿದ ಎಷ್ಟೇ ಬಿಗಿಹಿಡಿತದಿಂದ ಕಲಾಭಿವ್ಯಕ್ತಿಯನ್ನು ಮಾಡಿದರೂಎಲ್ಲೋ ಒಂದು ಕಡೆ ಆತನ ಪೂರ್ವ ಸಂಸ್ಕಾರದ ವಾಸನೆ ಕಲೆಯಲ್ಲಿ ಬಾರದೇ ಇರದು. ಇದರ ನೆರಳಿನ ಆಸು ಪಾಸಲ್ಲೇ ಸಾಗುವ ಚಿಂತನೆ ವಾಚಕರ ಮುಂದಿದೆ.
ಗಾಯಕನ ಗಾನಾನುಸಂಧಾನ ಮತ್ತು ವಾದಕನ ಗಾನಾನುಸಂಧಾನ.
ಈ ಲೇಖನದ ಕೇಂದ್ರ ವಸ್ತು ಯಕ್ಷಗಾನವೇ. ಅದನ್ನು ವಸ್ತುವಾಗಿರಿಸಿಕೊಂಡು ಭಾಗವತ ಮತ್ತು ವಾದಕ ಗಾನದ ಅಂತರ್ಯವನ್ನು ಹೇಗೆ  ವೀಕ್ಷಿಸುತ್ತಾನೆ ಮತ್ತು ಅದರಿಂದ ಹೊರಹೊಮ್ಮುವ ಪರಿಣಾಮ ರಮಣೀಯತೆಯ ನೆಲೆ ಏನು? ಎತ್ತ ಎಂಬುದರ ಬಗೆಗಿನ ವಿಶ್ಲೇಷಣೆ. ಒಂದೇ ಹಾಡು, ಒಂದೇ ರಾಗ, ಅದೇ ತಾಳ ಹೀಗಿದ್ದರೂ ಒಬ್ಬ ಗಾಯಕ ಹಾಡಿದ ಗಾನದ ಸ್ತರಕ್ಕಿಂತ ಇನ್ನೊಬ್ಬ ಗಾಯಕ ಹಾಡಿದ ಅದೇ ಗಾನದ ಸ್ತರ ಭಿನ್ನವಾಗಿರುತ್ತದೆ. ಇದು ಭಾವದಲ್ಲಾಗಿರಬಹುದು ಅಥವಾ ರಾಗ ತೀವ್ರತೆಯಲ್ಲಾಗಿರಬಹುದು. ಯಾಕೆ ಹೀಗೆ? ಅದಕ್ಕೆ ಕಾರಣ ಈ ರೀತಿಯೆಂದು ಕಂಡುಕೊಳ್ಳಬಹುದೇನೋ? ಗಾಯಕನ ಗಾನದ ಬಗೆಗಿರುವ ಅರ್ಥಾನುಸಂಧಾನ ಮತ್ತು ಭಾವಾನುಸಂಧಾನ. ಇವೆರಡರ ಮೇಲೆ ಕಲಾವಿದನ ಒಟ್ಟು ವ್ಯಕ್ತಿತ್ವದ ಆವೇಶವೂ ಇಲ್ಲದಿಲ್ಲ.  ಉದಾಹರಣೆಗೆ ಪಾರ್ತಿಸುಬ್ಬನ ಚೂಡಾಮಣಿ ಪ್ರಸಂಗದ “ಕ್ಷೇಮವೇನೈ ಹನುಮಾ” ಎಂಬ ಪದವನ್ನು ಹಾಡುವಾಗ ಭಾಗವತನಾದವನಿಗೆ ಸೀತೆಗೆ ರಾಮನ ಮೇಲಿರುವ ಪ್ರೇಮ-  ಭಕ್ತಿ, ಹನುಮನ ಮೇಲೆ ದಿಢೀರನೆ ಹುಟ್ಟುವ ಮಾತೃವಾತ್ಸಲ್ಯ ಮತ್ತು ತಾನು ಅಯೋಧ್ಯೆಯ ಮಹಾರಾಜ್ಞಿಯೆಂಬ ಜಾಗೃತಾವಸ್ತೆ ಇವೆಲ್ಲದರ ಅನುಸಂಧಾನ ಮತ್ತು ಗಾಯಕನ ಮನದಲ್ಲಿ ಇದೇ ಇದ್ದರಂತೂ ಈ ಗಾನದ ಮಟ್ಟವನ್ನು ವಿವರಿಸಲು ಪದಗಳ ದೌರ್ಬಲ್ಯವನ್ನು ಅನುಭವಿಸಬೇಕಾಗುತ್ತದೆ.
ವಾದಕನಾದವನಿಗೂ ಇದೇ ರೀತಿಯ ಸ್ಪಂದನಾ ಸಾಮರ್ಥ್ಯವಿದ್ದರೆ ಅಂತಹದ್ದೇ ಮೇಲ್ಮಟ್ಟದ ಪದ್ಯದ ಭಾವವನ್ನು ವಾದನದ ಮೂಲಕ ಪ್ರತಿಫಲಿಸುವಂತಹಾ ವಾದನ ಸೌಂದರ್ಯವನ್ನು ಅನುಭವಿಸಬಹುದು. ಮದ್ದಳೆಯ ಬಲ ಬದಿಯ ಸೌಮ್ಯ ನುಡಿಗಳಾದ ‘ನಂ’, ‘ತಿಂ’, ‘ತೊಂ’, ‘ತ’ ‘ತಾಂ’ ಇತ್ಯಾದಿ ಮತ್ತು ಮದ್ದಳೆಯ ಎಡ ಬದಿಯ ಸೌಶೀಲ್ಯಭರಿತ ನುಡಿಗಳಾದ ‘ಧಿಂ’, ‘ಗುಂ’,’ಗು’,’ಗ್’, ‘ತ್’ ಇತ್ಯಾದಿಗಳ ಭಾವಪೂರ್ವಕ ಮಿಶ್ರಣಗಳಿಂದ ಮದ್ದಳೆಯಲ್ಲೂ ಗಾನಕ್ಕೆ ಸಂವಾದಿಯಾಗಿ ಸೊಲ್ಕಟ್ಟುಗಳ ಮಹಾಕಾವ್ಯವನ್ನೇ ಕಟ್ಟಬಹುದು. ಅಷ್ಟುಮಾತ್ರವಲ್ಲ ದಿ. ಹಿರಿಯ ಕುದುರೆಕೋಡ್ಲು ರಾಮಭಟ್ಟರು ಬಲಿಪ (ಹಿರಿಯ) ನಾರಾಯಣ ಭಾಗವತರ ಸಂಸ್ಮರಣಾ ಗ್ರಂಥದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಂತೆ:”ಯಾವುದೇ ಪದ್ಯವನ್ನಾದರೂ ಭಾಗವತರು ಹಾಡುತ್ತಿರುವಾಗ ತಾನೂ ಅದನ್ನು ಹಾಗೆಯೇ ಮನಸ್ಸಿನಲ್ಲೇ ಆವರ್ತಿಸುತ್ತಾ ಮೃದಂಗ ನುಡಿಸಿದರೆ ಸರಿಯಾದ ಹೊಂದಾಣಿಕೆಯಾಗುತ್ತದೆ. ರಸ ಭಾವಗಳಿಗೆ ಪುಷ್ಟಿ ದೊರೆಯುತ್ತದೆ. ತಾಳದ ಆವರ್ತಗಳನ್ನು ಮೃದಂಗದಲ್ಲಿ ನುಡಿಸುವುದಕ್ಕೆ ಬದಲಾಗಿ ಪದ್ಯವನ್ನೇ ನುಡಿಸಿದಂತಾಗುತ್ತದೆ. ಇಂತಹಾ ಸಹಕಾರ ಮೃದಂಗವಾದಕನಿಂದ ದೊರೆತಾಗ ಭಾಗವತನ ಹಾಡುಗಾರಿಕೆಗೂ ಕಳೆ ಏರುತ್ತದೆ”. ಅಂದರೆ ಇಲ್ಲಿ ಆಗುವ ಕ್ರಿಯೆ ವಾದನವೂ ಗಾಯನವಾಗುವುದು.
ಒಟ್ಟಿನಲ್ಲಿ ಕಲೆ ಬಯಸುವುದು ಗಾಯಕ-ವಾದಕರಲ್ಲಿರಬೇಕಾದ ಆತ್ಮಸಂವಾದ.
ಇಂತಹಾ ಪರಸ್ಪರ ಸಂವಾದದ ಪೂರ್ವಸೂಚನೆಯೂ ವಾದಕ-ಗಾಯಕರಿಗೆ ಇರುವುದಿಲ್ಲ. ಅದು ಅ ಕ್ಷಣಕ್ಕೆ ಸಿದ್ಧಿಸುವುದು ಬಗೆ. ಪರಸ್ಪರರ ಬಾವಸಂಸ್ಕಾರ ಬೇರೆ ಬೇರೆಯಾಗಿದ್ದರಂತೂ ಆಗುವ ಅನರ್ಥವೇ ಬೇರೆಯದು. ಇದನ್ನೇ ನಾನೆಂದದ್ದು ಗಾಯನ, ವಾದನ, ನರ್ತನ ಇವುಗಳ ಸಾಂಗತ್ಯ ಬೇರೆಯಲ್ಲ ಜೀವನದಲ್ಲೊದಗುವ ಸ್ನೇಹ, ಪ್ರೇಮ, ವಾತ್ಸಲ್ಯಗಳನ್ನು ಸಾಂಗತ್ಯ ಬೇರೆಯಲ್ಲ ಎಂದು. ಇದನ್ನು ಯಾವಾಗಲೂ ನಿರೀಕ್ಷಿಸಿದರೆ ಅದು ಒದಗಿ ಬಾರದು. ಒದಗಿ ಬಾರದೇ ಇರಲು ಕಾರಣಗಳನೇಕ ಇರಬಹುದು-ಮಾನಸಿಕ ತುಮುಲಗಳು, ದೈಹಿಕ ಶ್ರಮ ಇತ್ಯಾದಿ. ಆದುದರಿಂದ ಗಾಯಕನ ಗಾನಾನುಸಂಧಾನತೆಯಂತೆಯೇ ವಾದಕನ ಗಾನಾನುಸಂಧಾನತೆ ಒಟ್ಟು ರಸೋದ್ದೀಪನಕ್ಕೆ ಕಾರಣವಾಗಿರುತ್ತದೆ. ಗಾಯಕರಲ್ಲಿ ಅಥವಾ ಗಾಯನದಲ್ಲಿ ಹುಟ್ಟಿದ ಸಂಗೀತ ವಾದಕನಲ್ಲಿ ಅಥವಾ ವಾದನದೊಂದಿಗೆ ಮಿಳಿತಹೊಂದಿ ಮುಂದುವರಿದು ರಸಿಕರ ಮನದಲ್ಲಿ ಮರುಹುಟ್ಟನ್ನೋ-ಯಾವುದೋ ಬಗೆಯ ಸಂಸ್ಕಾರವನ್ನೋ ಪಡೆದು ಇನ್ನಾವುದೋ ರೀತಿಯಲ್ಲಿ ಮರು ಅಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತದೆ. ವಿಳಂಬಗತಿಯ ನರ್ತನದಲ್ಲಾಗಲೀ ಗಾಯನದಲ್ಲಾಗಲೀ ಮತ್ತಿವುಗಳಿಗೆ ಪೂರಕವಾದ ವಾದನದಲ್ಲಿ ಹುಟ್ಟುವ ಸಂಗೀತಕ್ಕಿರುವ ಸಾತ್ವಿಕ ಭಾವವನ್ನು, ಸತ್ ಸಂಸ್ಕಾರವನ್ನು ಸೃಜಿಸುವ ಶಕ್ತಿ ಧ್ರುತ ಗತಿಯ ಸಂಗೀತಕ್ಕಿಲ್ಲವೆಂದೇ ನನ್ನ ಸದ್ಯದ ನಂಬಿಕೆ. ಇದಕ್ಕೆ ಉದಾಹರಣೆಯಾಗಿ ನೆಬ್ಬೂರು ನಾರಾಯಣ ಭಾಗವತರು ೧೯೯೨ರಲ್ಲಿ ಮಂಗಳೂರಲ್ಲಿ ನಡೆದ ನನ್ನ ಊಹೆಯಂತೆ ಸರ್ವ ಪ್ರಥಮ ಯಕ್ಷಗಾಯನ ಕಾರ್ಯಕ್ರಮದಲ್ಲಿ ಹಾಡಿದ ವಿಳಂಬಗತಿಯ ‘ಆವಲ್ಲಿಗೆ ಪಯಣವಯ್ಯ’ ಎಂಬ ಸುಧನ್ವ ಮೋಕ್ಷದ ರೂಪಕ ತಾಳದಲ್ಲಿ ಪ್ರಸ್ತುತ ಪಡಿಸಿದ ಗಾನ ಪ್ರಭಾವಯುತವಾಗಿ ಮನಸ್ಸಿನಲ್ಲಾಗುತ್ತಿದ್ದ ಆಂದೋಳನದ ಮೂರ್ತ ರೂಪದಂತಿತ್ತು. ಮಾತು ದೀರ್ಘವಾದ ಆಲಾಪನೆ ಮತ್ತು ಮುಖ್ಯವಾದ ಸಾಹಿತ್ಯಿಕ ಅಂಶಗಳಿಗೆ ಭಾಗವತರು ಗಮನವಿರಿಸಿ ಕೊಡುತ್ತಿದ್ದ ಪಲುಕುಗಳು ಇಡೀ ಕಾರ್ಯಕ್ರಮದ ಮುಖ್ಯ ಗಾನವಾಗಿ ಮಂಡಿತವಾಯಿತು. ಈ ಗಾನಕ್ಕೆ ಸೂಕ್ತವಾದ ಹಿನ್ನೆಲೆಯನ್ನು ಒದಗಿಸಿದ ಕೀರ್ತಿ ಸುಬ್ರಹ್ಮಣ್ಯ ಧಾರೇಶ್ವರರಿಗೆ(೨೦ರ ಹರೆಯ) ಸಿಗಬೇಕು. ಯಾಕೆಂದರೆ, ಅವರು ಪ್ರಸ್ತುತ ಪಡಿಸಿದ ‘ಅನಿತೊರಳಾಗ ಪ್ರಭಾವತಿಯು…’ ಎಂಬ ತಾಳರಹಿತ ಗಾನ ಚುರುಕಲ್ಲಿ ಆರಂಭವಾಗಿ ಕೊನೆಗೆ ಬಾಯಿತಾಳದಲ್ಲಿ ಮುಕ್ತಾಯವಾದುದು ಪ್ರಭಾವತಿಯ ಮನದ ಬಯಕೆ ಪ್ರತಿಬಿಂಬಿತವಾಗುತ್ತಿತ್ತು. ಆದರೆ ಸುಧನ್ವನ ಯುದ್ಧಕ್ಕೆ ಅಣಿಯಾದ ರೂಪ ಕಂಡೊಡನೆಯೇ ಮನಸ್ಸಿನಲ್ಲಿ ಆಂದೋಳನ ಏರ್ಪಟ್ಟು ಒಮ್ಮೆಲೇ ನಿಧಾನವಾಗಿ ಗಂಡನನ್ನು ವಿಚಾರಿಸುವ, ರಮಿಸುವ ಮಡದಿಯಾಗಿ ಮಾರ್ಪಾಟಾಗುವುದು ರೀತಿ ನೆಬ್ಬೂರರ ಪ್ರಸ್ತುತಿಯಲ್ಲಿ ಕಂಡುಬಂತು.  ಇಡೀ ರಂಗವನ್ನು ಕೆತ್ತಿಕೊಡುವಲ್ಲಿ ಯಶಸ್ವಿಯಾಯಿತೆನ್ನಬಹುದು. ಇದೇ ಗಾಯಕನ ಗಾನಾನುಸಂಧಾನಕ್ಕಿರುವ ಮಹತ್ವ. ವಾದಕನ ಗಾನಾನುಸಂಧಾನತೆಯ ವಿಚಾರದಲ್ಲಿ ನೋಡಿದಾಗ ನನಗೆ ಮತ್ತೆ ಮತ್ತೆ ನೆನಪಿಗೆ ಬರುವುದು ದಿವಂಗತ ಪಾಲ್ಘಾಟ್ ಮಣಿ ಅಯ್ಯರ್ ಮಹಾಶಯರು. ಅದ್ಯಾವ ಮಾಟದಿಂದ ಅವರಿಗೆ ಕೀರ್ತನೆಯ ಗರ್ಭದ ಒಳಹೊಕ್ಕು ಅದರ ನಾಡಿಮಿಡಿತಕ್ಕೆ ತನ್ನ ಮೃದಂಗದಲ್ಲಿ ಸ್ಪಂದಿಸಲಾಗುತ್ತಿತ್ತೋ? ಎಲ್ಲಿ ಬಿಗು ನೀಡಿರಬೇಕು? ಎಲ್ಲಿ ಮೃದು ಛಾಪು, ಮೀಟು ಛಾಪು,ಬಿಗು ಉರುಳಿಕೆ, ಮೃದು ಸುನಾದ ಭರಿತ ಉರುಳಿಕೆ, ಗುಮ್ಕಿ ಇತ್ಯಾದಿಗಳು ಬೇಕೋ ಎಂಬ ಪ್ರಜ್ಞೆ ಅವರಲ್ಲಿದ್ದ ಗಾನಾನುಸಂಧಾನತೆಗೆ ಹಿಡಿದ ಕೈ ಕನ್ನಡಿ.
೨೦೧೬ರ ಎಪ್ರಿಲ್ ತಿಂಗಳಲ್ಲಿ ಮಧುರಿನಲ್ಲಿ ನಡೆದ ಯಕ್ಷಗಾನ  ಗಾನವೈಭವದ ಅನುಭವ ಇಲ್ಲಿ ಪೂರಕ ಎಂದು ವಿವೇಚಿಸುತ್ತೇನೆ. ಕೃಷ್ಣಸಂಧಾನದ’ ಈತೆರಳೊದಸುರಾರಿ…..’ಎಂಬ ಪದವನ್ನು ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರು ನಿಧಾನಗತಿಯಲ್ಲಿ ಆರಂಭಿಸಿ ಇದೇ ಹಾಡಲ್ಲಿ ಬರುವ ‘ನಿನದ’ ಎಂಬ ಕಡೆ ಚೆಂಡೆ ಮದ್ದಳೆಗೆ ಎಡೆ ಬಿಡಿತ ನುಡಿಸಲು ಅನುವು ಮಾಡಿಕೊಟ್ಟರು. ನಿನದ ಎಂಬ ಶಬ್ದವನ್ನೇ ಪ್ರಧಾನವಾಗಿಟ್ಟುಕೊಂಡು ‘ ನನಧೀಂ’ ಎಂಬ ಸೊಲ್ಕಟ್ಟನ್ನು ಕೇಂದ್ರೀಕರಿಸಿ ಬಿಡ್ತಿಗೆ/ತನಿ ನಾನು ಮದ್ದಳೆಯಲ್ಲಿ ಆರಂಭಿಸಿದೆ. ಒಂದಾವರ್ತಿ ನುಡಿಸಿ ಚೆಂಡೆಯಲ್ಲಿದ್ದ ಪ್ರತಿಭಾನ್ವಿತ ಯುವಮದ್ದಳೆಗಾರ ಚೈತನ್ಯಕೃಷ್ಣ ಪದ್ಯಾಣರಿಗೆ ಬಿಟ್ಟುಕೊಟ್ಟೆ. ಚೈತನ್ಯರಾದರೋ ಚೆಂಡೆಕೊಲಿನ ತುದಿಯಿಂದ ಮೃದುವಾಗಿ ಯಾವುದೇ ಉದ್ವೇಗವಿಲ್ಲದೆ ಚೆಂಡೆಗೆ ತಾಡಿಸುತ್ತಾ ‘ನಿನದ’ ಶಬ್ದಕ್ಕೆ ಸಂವಾದಿಯಾಗಿ ತನ್ನ ಎಂದಿನ ಕಲ್ಪನಾ ಸಾಮರ್ಥ್ಯದಿಂದ ಒಂದಾವರ್ತಿ ನುಡಿಸಿ ನನಗೆ ಬಿಟ್ಟುಕೊಟ್ಟರು. ಅದೇ ಲಹರಿಯಲ್ಲಿ ತನಿ ಮುಗಿಸಿದ ನನಗೆ ಯಾವತ್ತೂ ಮರೆಯದೆ ಆಹ್ಲಾದಾನುಭವವನ್ನು ಕೊಟ್ಟಿದೆ. ತನಿ ಎಂದರೆ ಸಂತೋಷದಿಂದ, ಲಾಸ್ಯದಿಂದ ನುಡಿಸುವುದೆಂದರ್ಥ. ಇದರರ್ಥ ಅಲ್ಲಿ ಸಾರ್ಥಕವಾಗಿದೆ ಎಂದು ಭಾವನೆ. ಅಲ್ಲಿ ಯಾವುದೇ ರೀತಿಯ ಗಿಮಿಕ್ಸ್ಗೆಹೋಗಿಲ್ಲವೆಂಬುದೂ ಗಮನಾರ್ಹ ವಿಚಾರ. ಕಲಾವಿದನ ಕಲೆ ಆಳವಾದಷ್ಟೂ, ವಿಸ್ತಾರವಾದಷ್ಟೂ ಗಿಮಿಕ್ಸ್ ಗಳನ್ನು ಮೆಚ್ಚಿಕೊಳ್ಳುವ ಅಗತ್ಯ ಬೀಳುವುದಿಲ್ಲ.
ನರ್ತಕನಲ್ಲಾಗುವ ಗಾನದ ಅನುಸಂಧಾನಕ್ಕೆ ಒಂದು ಉದಾಹರಣೆ: ಉಡುಪಿಯ ಯಕ್ಷಗಾನ ಕಲಾರಂಗದವರು ಏರ್ಪಡಿಸಿದ ವಿಶ್ವಾಮಿತ್ರ ಮೇನಕೆ ಆಖ್ಯಾನದಲ್ಲಿ ನನಗಾದ ಅನುಭವ ಇದು. ಶ್ರೀ ದಿನೇಶ ಅಮ್ಮಣ್ಣಾಯರು ಮಲಯಮಾರುತ ರಾಗದಲ್ಲಿ ಪ್ರಸ್ತುತ ಪಡಿಸಿದ “ಮಂದ ಮಾರುತ ಬೀಸಿ….” ಎಂಬ ಹಾಡಿಗೆ “ಮಂದ ಮಾರುತ”  ಎಂಬಲ್ಲಿ ಮಂದ್ರ ಸ್ಥಾಯಿಯಲ್ಲಿ ವಿಳಂಬಗತಿಯಲ್ಲಿ ಹಾಡುವಾಗ ಮೇನಕೆ ಪಾತ್ರಧಾರಿ ದೀಪಕ್ ರಾವ್ ಪೇಜಾವರ ತೋರಿದ ಸೃಜನಶೀಲ ಅಭಿನಯ (ಇಡೀ ದೇಹ ಮಂದವಾದ ಗಾಳಿಗೆ ಮೃದುವಾಗಿ ಕಂಪಿಸುವಂತೆ) ಅತ್ಯಂತ ಭಾವಪೂರ್ಣವಾಗಿ ಮೂಡಿಬಂದಿದೆ. ಮಂದಮಾರುತ ಎಂಬ ಶಬ್ದಕ್ಕೂ ಮಂದ್ರ ಸ್ಥಾಯಿಯಲ್ಲಿ ಮೂಡಿದ ಮಲಯಮಾರುತ ಎಂಬ ರಾಗಕ್ಕೂ ಅಮ್ಮಣ್ಣಾಯರು ಕೊಟ್ಟ ಶಕ್ತಿ ಮೂರ್ತ ಸ್ವರೂಪ ತಾಳಿದ್ದು ದೀಪಕ್ ರಾವ್ ಪೇಜಾವರರ ಅಭಿನಯದಲ್ಲಿ. ಇದು ಸಣ್ಣ ಸಂಗತಿಯಲ್ಲ. ರಂಗ ಪ್ರಕ್ರಿಯೆಯನ್ನು ಗಮನವಿಟ್ಟು ನೋಡಿದರೆ ಇಂತಹಾ ಅನೇಕ ಸಂಗತಿಗಳು ನಮ್ಮ ಕಣ್ಣ ಮುಂದೆ ನಡೆಯುತ್ತವೆ. ಈ ಹಾಡಿಗೆ ಪೇಜಾವರರು ಸಣ್ಣ ಚಾಲಿತ ಕುಣಿತವನ್ನೂ ಕುಣಿದಿದ್ದಾರೆ. ಅದು ಹೇಗಿತ್ತೆಂದರೆ- ಮಂದ ಮಾರುತಕ್ಕೆ ಸಣ್ಣಗೆ ತೊಯ್ದಾಡುವ ತಲೆಗೆರೆಯಂತೆ ಪುಟ್ಟ ಪುಟ್ಟ ಹೆಜ್ಜೆಗಾರಿಕೆಯ ಚುಟುಕಾದ-ಅಭಿನಯ ಪ್ರಧಾನವಾದ- ಚಾಲು ಕುಣಿತ.
ನಮ್ಮ ಸುತ್ತಲಿನ ಪ್ರಕೃತಿಯೇ ಆ ಕ್ಷಣದ ರಸ ಪ್ರತಿಪಾದನೆಗೆ, ರಸ ರಸಗ್ರಹಣಕ್ಕೆ , ಧ್ವನಿಯ ಅನುಸಂಧಾನಕ್ಕೆ ಪ್ರಧಾನ ಕಾರಣವಾದರೂ, ಕಲಾವಿದನ ಮೂಲಕ ರಸದ ಹೊರಹೊಮ್ಮುವಿಕೆ ಇದೆಯಲ್ಲಾ ಅದು ಕಲಾವಿದನಿಂದ ಕಲಾವಿದನಿಗೆ ಭಿನ್ನತರವಾಗಿ ಇರುತ್ತದೆ. ಬಣ್ಣ ಬಣ್ಣದ ಗಾಜಿನಿಂದ ಆಯಾಯಾ ಬಣ್ಣದ ಬೆಳಕು ಹೊಮ್ಮುವಂತೆ-ಬೆಳಕು ಒಂದೇ ಆದರೂ. ಇಲ್ಲಿ ಮುಖ್ಯವಾಗುವುದು ಕಲಾವಿದನ ವಸ್ತು ಧಾರಣ ಸಾಮರ್ಥ್ಯ,  ಅನುಸಂಧಾನದ ಮಟ್ಟ ಇತ್ಯಾದಿ. ಕಲಾವಿದನ ಬಾಲ್ಯದ ಅನುಭವಗಳು, ಕಷ್ಟ ಸಹಿಷ್ಣುತೆ, ಸಂತೋಷಪಡುವ ಸಾಮರ್ಥ್ಯ,  ದುಃಖವನ್ನು ಭರಿಸುವ ಸಾಮರ್ಥ್ಯ ಇತ್ಯಾದಿ ಇವೆಲ್ಲವೂ ರಸ ಪ್ರತಿಪಾದನೆಯಲ್ಲಿ ಪರಿಗಣನೆಗೆ ಬರುತ್ತದೆ. ಹೀಗೆ ರೂಪುಗೊಂಡ ವ್ಯಕ್ತಿತ್ವವೇ ಕಲೆಗೆ ಬಣ್ಣವನ್ನೂ ಕೊಟ್ಟು ಕಲಾವಿದನ ಮೂಲಕ ಬಿಂಬಿಸಲ್ಪಡುತ್ತದೆ. ಸೂಕ್ಷ್ಮ ಒಳನೋಟದ ಕಲಾವಿದನ ಮೂಲಕವೇ ಜಡ ಚೇತನ ಪ್ರಕೃತಿಯು ಕಲೆಯ ರೂಪದಲ್ಲಿ ಹೊರಬರುವುದು. ಒಳ್ಳೆಯ ಕತೆಯ ರೀತಿಯ ಬಳುಕನ್ನು ನಾಟ್ಯದಲ್ಲಿ ಕಂಡಂತೆ, ನದಿಯ ಅಥವಾ ತೆರೆಗಳ ಹರಿವು ಸಂಗೀತದಆಲಾಪನೆಯಲ್ಲಿ ಪರಿಭಾವಿಸಿದಂತೆ. ಭರತನ ನಾಟ್ಯಶಾಸ್ತ್ರದಲ್ಲಂದಂತೆ “ಲೋಕಾನುಕೃತಿ”ಯ ನೆನಪಾಗುತ್ತದೆ. ಪ್ರಕೃತಿಯನ್ನು ಅನುಸರಿಸಿ ಅಭಿನಯಿಸುವುದು.