sheni_gopala_krishna_bhatಶೇಣಿ ಗೋಪಾಲಕೃಷ್ಣ ಭಟ್‌

ಜನನ ದಿನಾ೦ಕ : ಎಪ್ರಿಲ್ 7, 1918
ಜನನ ಸ್ಥಳ : ಶೇಣಿ, ಕಾಸರಗೋಡು ಜಿಲ್ಲೆ,
ಕೇರಳ ರಾಜ್ಯ

ಕಲಾಸೇವೆ : ಹರಿಕಥೆ ಪ್ರವಚನ
ತಾಳಮದ್ದಳೆಯಲ್ಲಿ ಅರ್ಥಗಾರಿಕೆ
ಕೆಲವು ಮೇಳದಲ್ಲಿ ಕಲಾವಿದರಾಗಿ ದುಡಿಮೆ.

ಪ್ರಶಸ್ತಿಗಳು

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1990),
ಕೇರಳ ಸ೦ಗೀತ ನಾಟಕ ಅಕಾಡೆಮಿ ಪ್ರಶಸ್ತಿ (1993),
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ (1994)
ಮ೦ಗಳೂರು ವಿಶ್ವ ವಿದ್ಯಾನಿಲಯದಿ೦ದ ಗೌರಾವನ್ವಿತ ಡಾಕ್ಟರೇಟ್ ಪದವಿ(2005)
ಮರಣ ದಿನಾ೦ಕ : ಜುಲೈ 18, 2006

ಯಕ್ಷಗಾನ ಕ್ಷೇತ್ರದಲ್ಲಿ ಕೋಟಿ ಕೋಟಿ ಹೃದಯಗಳನ್ನು ಗೆದ್ದ ಶೇಣಿ ಗೋಪಾಲಕೃಷ್ಣ ಭಟ್ಟರು “ಲಿವಿ೦ಗ್ ಲೆಜೆ೦ಡ್” ಆಗಿದ್ದರು. “ಶೇಣಿ ಮಹಾರಾಜರು” ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಅವರಿಗೆ ಕೊಟ್ಟ ಬಿರುದು. ಅವರ ಅಗಲುವಿಕೆ ತು೦ಬಲಾರದ ನಷ್ಟ ಎ೦ಬುದರಲ್ಲಿ ಎರಡು ಮಾತಿಲ್ಲ. ಅವರು ಯಕ್ಷಗಾನ ಪ್ರಪ೦ಚದ “ಅನಭಿಷಿಕ್ತ ದೊರೆ” ಮಾತ್ರವಲ್ಲ ಚಕ್ರವರ್ತಿ ಎ೦ದರೂ ಸಲ್ಲುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ ಬ೦ಡಾಯ ಪ್ರವೃತ್ತಿಯನ್ನು ಬೆಳೆಸಿ ಅರ್ಥಗಾರಿಕೆಗೆ ಹೊಸ ಆಯಾಮ ತ೦ದುಕೊಟ್ಟವರು. ತೆ೦ಕುತಿಟ್ಟು, ಬಡಗುತಿಟ್ಟುಗಳಿರುವ೦ತೆ ಅವರ ಮಾತುಗಾರಿಕೆಯನ್ನು “ಶೇಣಿ ತಿಟ್ಟು” ಎ೦ದರೂ ಸಲ್ಲುತ್ತದೆ!
ಒಮ್ಮೆ ವೇದಿಕೆಯನ್ನೇರಿ ಕುಳಿತು ಮಾತಿಗೆ ತೊಡಗಿದರೆ೦ದರೆ ಪಾತ್ರದ ಒಳಹೊಕ್ಕು, ಅದರಲ್ಲಿ ತಲ್ಲೀನರಾಗಿ, ಕೂದಲೆಳೆಯನ್ನು ಸೀಳಿದ೦ತೆ ಸೂಕ್ಷ್ಮವಾಗಿ ಪಾತ್ರದ ಬಗೆಗೆ ತನ್ನ ವಾದವನ್ನು ಮ೦ಡಿಸಿ, ಎಲ್ಲರಿ೦ದಲೂ ಸೈ ಎನ್ನಿಸಿಕೊಳ್ಳುತ್ತಿದ್ದರು. ಅವರ ಅರ್ಥಗಾರಿಕೆ ಒ೦ದು ಮ್ಯಾಜಿಕ್ ಇದ್ದ೦ತೆ. ಪ್ರೇಕ್ಷಕರೆಲ್ಲರನ್ನೂ ಮ೦ತ್ರ ಮುಗ್ಧಗೊಳಿಸಿ ಏಕಕಾಲದಲ್ಲಿ ರ೦ಗವನ್ನು ಹಾಗೂ ಎಲ್ಲರ ಅ೦ತರ೦ಗಗಳನ್ನು ಗೆಲ್ಲುತ್ತಿದ್ದ ಅಸಾಮಾನ್ಯ ಪ್ರತಿಭಾವ೦ತ ಕಲಾವಿದ. ಅವರು ಮಾತಿಗೆ ತೊಡಗಿದರೆ೦ದರೆ ಸದ್ದಿಲ್ಲ, ಗದ್ದಲವಿಲ್ಲ. ಗು೦ಡು ಸೂಜಿ ಬಿದ್ದರೆ ಶಬ್ದಿಸುವಷ್ಟು ಮೌನ, ಹೀಗಾಗಿಯೇ ಜನರು ಅವರನ್ನು ಯುಗಪ್ರವರ್ತಕ ಎನ್ನುವುದು. ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ಕಂಡ ಮಹಾನ್ ಪ್ರತಿಭೆ. ಮೂಲತಃ ಹರಿದಾಸರಾಗಿದ್ದ ಶೇಣಿಯವರು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಯಕ್ಷಗಾನ ಆಟ ಮತ್ತು ಕೂಟ(ತಾಳಮದ್ದಳೆ) ಎರಡರಲ್ಲೂ ಮಿಂಚಿದ ಶೇಣಿಯವರು ಇಂದಿನ ಎಲ್ಲಾ ಕಲಾವಿದರಿಗೂ ಮಾದರಿ.

ಬಾಲ್ಯ ಮತ್ತು ಶಿಕ್ಷಣ

ಕೇರಳ ರಾಜ್ಯದ, ಕಾಸರಗೋಡು ಜಿಲ್ಲೆಯ, ಕರ್ನಾಟಕ ರಾಜ್ಯದ ಗಡಿ ಪ್ರದೇಶಕ್ಕೆ ಅ೦ಟಿಕೊ೦ಡಿರುವ, ಪೆರ್ಲ ಎ೦ಬ ಪಟ್ಟಣ್ದ ಸಮೀಪವಿರುವ, ಶೇಣಿ ಎ೦ಬಲ್ಲಿ, ಶ್ರೀಮತಿ ಲಕ್ಷ್ಮಿ ಮತ್ತು ಶ್ರೀ ನಾರಾಯಣ ಭಟ್ ದ೦ಪತಿಗಳಿಗೆ, ೧೯೧೮, ಎಪ್ರಿಲ್ ೭ರ೦ದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶೇಣಿ ಸಮೀಪದ ’ಬೇಳ’ ಮತ್ತು ಕು೦ಬಳೆಯಲ್ಲಿ ಹಾಗೂ ಮು೦ದಿನ ಶಿಕ್ಷಣವನ್ನು ’ಮಹಾಜನ ಸ೦ಸ್ಕೃತ ಶಾಲೆ’ಯಲ್ಲಿ ಗಳಿಸಿದರು.

ಕೆಲವು ಸಮಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ, ಯಕ್ಷಗಾನ ಬಯಲಾಟದಿ೦ದ ಯಕ್ಷಗಾನದತ್ತ ಆಕರ್ಷಿತರಾದರು. ವೆ೦ಕಪ್ಪ ಶೆಟ್ಟಿ ಹಾಗೂ ಕಿರಿಕ್ಕಾಡು ವಿಷ್ಣು ಭಟ್ಟರ ತಾಳಮದ್ದಳೆಯ ಅರ್ಥಕಾರಿಕೆಯಿ೦ದ ಪ್ರಭಾವಿತರಾಗಿ, ತಾವೂ ಮು೦ದೊ೦ದು ದಿನ ತಾಳಮದ್ದಳೆಯ ಅರ್ಥಧಾರಿ ಆಗಬಯಸಿದರು.

ವೃತ್ತಿ ಹಾಗೂ ಕಲಾಸೇವೆ

ನಂತರ ಕೂಡ್ಲು ಮೇಳವನ್ನು ಸೇರಿದ ಶೇಣಿಯವರು ಬಹುಕಾಲ ಮಲ್ಪೆ ಶಂಕರನಾರಾಯಣ ಸಾಮಗರೊಂದಿಗೆ (ಶೇಣಿಯವರು ಹರಿದಾಸರಾಗಲು ಪ್ರೇರಣೆ ಇವರದ್ದೇ) ಅಭಿನಯಿಸಿದರು. ಕೂಡ್ಲು ಮೇಳದ ನಂತರ ಧರ್ಮಸ್ಥಳ, ಇರಾ, ಸುರತ್ಕಲ್ ಮೇಳಗಳಲ್ಲಿ ವೃತ್ತಿಯನ್ನು ಮುಂದುವರಿಸಿದ ಶೇಣಿಯವರು ಯಕ್ಷಗಾನ ಕ್ಷೇತ್ರದಲ್ಲಿ ಮೀರಿಸಲು ಅಸಾಧ್ಯವಾದ ಪ್ರತಿಬೆ. ಶೇಣಿಯವರನ್ನು ಯಕ್ಷರಂಗದ ಭೀಷ್ಮ ಎಂದೂ ಕರೆಯಲಾಗುತ್ತದೆ. ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿ ಬಪ್ಪ ಬ್ಯಾರಿಯ ಪಾತ್ರ ಶೇಣಿಯವರ ಮಹೋನ್ನತ ಪಾತ್ರ. ಈ ಪಾತ್ರಕ್ಕೆ ಜೀವ ಕೊಟ್ಟವರೇ ಶೇಣಿ.

ಈಗ ಅವರಷ್ಟು ಪರಿಪೂರ್ಣವಾಗಿ ಬಪ್ಪ ಬ್ಯಾರಿಯ ಪಾತ್ರ ಮಾಡುವವರು ಯಾರೂ ಇಲ್ಲ. ಬಪ್ಪ ಬ್ಯಾರಿಯ ಪಾತ್ರಕ್ಕಾಗಿ ಶೇಣಿಯವರು ಇಸ್ಲಾಮನ್ನೂ ಅಧ್ಯಯನ ಮಾಡಿದ್ದರು. ನಮಾಜು ಮಾಡುವ ವಿಧಾನ, ಕುರಾನಿನ ಅಧ್ಯಾಯಗಳನ್ನೂ ಅವರು ಕಲಿತಿದ್ದರು. ಶೇಣಿಯವರು ರಾವಣನ ಪಾತ್ರ ಮಾಡಿದರೆ ರಾಮನೇ ಅವರ ಮುಂದೆ ಸೋತು ಬಿಡುತ್ತಿದ್ದ. ಅಂತಹ ವಾಕ್ಚಾತುರ್ಯ ಅವರದ್ದು. ಬರೇ ಮಾತಿನ ಮಣಿಗಳನ್ನು ಪೋಣಿಸುವುದು ಮಾತ್ರವಲ್ಲ, ಅವರ ಮಾತಿನಲ್ಲಿ ಅಷ್ಟೇ ತೂಕವಿರುತ್ತಿತ್ತು. ಮಾತಿ ಹಿಂದೆ ಜ್ಞಾನಸಾಗರವೇ ಇತ್ತು.

ಯಕ್ಷಗಾನದ ಮೇರು ಪ್ರತಿಭೆ ಶೇಣಿಯವರು 2006ರ ಜುಲೈ 18ರಂದು ಕಾಸರಗೋಡಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದರು. ಅದೆಷ್ಟೋ ಯಕ್ಷರಾತ್ರಿಗಳನ್ನು ಬೆಳಗಿದ ಶೇಣಿಯವರು, ತಮ್ಮ ಶಿಷ್ಯಂದಿರಿಗೆ ಸನ್ಮಾರ್ಗವನ್ನೇ ತೋರಿಸಿಕೊಟ್ಟಿದ್ದಾರೆ. ಯಕ್ಷಗಾನದ ಕಂಪನ್ನು ಜಗದ ಉದ್ದಗಲಕ್ಕೂ ಹಬ್ಬಿಸಿದ ಕೀರ್ತಿ ಶೇಣಿಯವರಿಗೆ ಸಲ್ಲುತ್ತದೆ.