paintings_yakshaganaಯಕ್ಷಗಾನ ಒಂದು ಸುಂದರ ಕಲ್ಪನೆಯುಳ್ಳ, ಎಲ್ಲ ರಸಗಳನ್ನು ಹೊಂದಿರುವ ಪರಿಪೂರ್ಣ ಕಲಾ ಪ್ರಕಾರಗಳಲ್ಲಿ ಒಂದು.
ಆದರೆ ಯಕ್ಷಗಾನ ಯಾವಾಗ ಹುಟ್ಟಿಕೊಂಡಿತು.? ಯಾರು ಹುಟ್ಟು ಹಾಕಿದರು..? ಹೇಗೆ ಬೆಳೆಯಿತು ಎನ್ನುವುದು ಕೂಡ ಕುತೂಹಲವೇ ಆಗಿದೆ.
ನಿಜ,, ಯಕ್ಷಗಾನ ಆಟವೆಂಬುದು ಯಾವ ಕಾಲದಲ್ಲಿ ಪ್ರಸಿದ್ಧಿಗೆ ಬಂದಿತು, ಎಂಬ ಪ್ರಶ್ನೆಗೆ ನಿಖರವಾಗಿ ಕೊಡಬಹುದಾದ ಉತ್ತರವೆಂದರೆ ವಿಜಯ ನಗರದ ಅವಸಾನದ ನಂತರದಲ್ಲಿ.
ಅಂದರೆ ಕ್ರಿ.ಶ. 1614ರಲ್ಲಿ ತಂಜಾವರದ ಅರಸು ಸಂಗೀತ ಪ್ರೇಮಿ ರಘುನಾಥ ನಾಯಕನು ಬರೆದ ರುಕ್ಮಿಣಿ ಕೃಷ್ಣ ವಿವಾಹವೆಂಬ ಯಕ್ಷಗಾನ ಪ್ರಬಂಧವೆಂಬ ಕೃತಿ ಮೊದಲು ಪ್ರದರ್ಶನ ಕಂಡಿತು ಎನ್ನುವ ಪ್ರತೀತಿ ಇದೆ. ಈ ಯಕ್ಷಗಾನದಲ್ಲಿ ಭಾಗವತನೇ ಪ್ರಧಾನ. ವಿದ್ಯಾರಣ್ಯರ ಕಾಲದಲ್ಲೇ ಭಾಗವತ ವಾಙ್ಮಯವು ವಿಫುಲವಾಗಿ ಬೆಳೆದಿದ್ದು, ಇದರ ಒಂದು ಶಾಖೆಯಾಗಿ ದಾಸ ಸಾಹಿತ್ಯ ಪ್ರಚಲಿತಗೊಂಡು ವಿಷಯ ಸರ್ವವಿಧಿತ. ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾಗುತ್ತಿದೆ. ಅವರ ಮಗ ಮಧ್ವಪತಿದಾಸರು ಆಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ಉದ್ದಾಳೀಕನ ಕಥೆ, ಐರಾವತ, ಕಂಸವಧೆ ಎಂಬ ಯಕ್ಷಗಾನ ಪ್ರಬಂಧಗಳನ್ನು ರಚಿಸಿದ್ದನೆಂಬ ಊಹೆಗಳೂ ಇವೆ. ಅಂದರೆ `ಯಕ್ಷಗಾನ ಆಟವೆಂಬುದು 15ನೇ ಶತಮಾನದಲ್ಲಿ ರೂಪುಗೊಂಡು 19ನೇ ಶತಮಾನದಲ್ಲಿ ಬೆಳೆದು ಪೂರ್ಣ ಪರಿಣತಿ ಹೊಂದಿತು` ಎಂದು ಡಾ.ಭೀಮರಾವ್ ಚಿಟಗುಪ್ಪಿ ಬರೆದಿದ್ದಾರೆ.