gopal-acharya-thirthahalliಶಶಿಧರ್ ತಲ್ಲೂರಂಗಡಿ.
ತೀರ್ಥಹಳ್ಳಿ ಎಂದಾಕ್ಷಣ ಕಣ್ಣಮುಂದೆ ಹಲವಾರು ವಿಚಾರಗಳು ಹಾದುಹೋಗುತ್ತವೆ. ಮಲೆನಾಡ ಮಡಿಲಲ್ಲಿರುವ ಪ್ರಾಕೃತಿಕ ಸೌಂದರ್ಯದ ನೆಲೆಬೀಡು ಕವಿ ಕಲಾವಿದರ ತವರೂರು.
ಆದರೆ ಉಡುಪಿ ಉತ್ತರಕನ್ನಡ ದಕ್ಷಿಣಕನ್ನಡ ಗಳಲ್ಲಿ ತೀರ್ಥಹಳ್ಳಿ ಊರಿನ ಹೆಸರೆತ್ತಿದರೆ ತಕ್ಷಣಕ್ಕೆ ನೆನಪಿಗೆ ಬರುವುದು ಒಬ್ಬ ಯಕ್ಷಗಾನ ಕಲಾವಿದ. ತಾನು ಬೆಳೆಯುವುದರ ಜೊತೆಗೆ ತನ್ನ ಹುಟ್ಟೂರಿನ ಹೆಸರನ್ನೂ ಉತ್ತುಂಗಕ್ಕೆ ಕೊಂಡೊಯ್ದ ಈ ಕಲಾವಿದನ ಬಗ್ಗೆ ಎಷ್ಟು ಹೇಳಿದರೂ ಎಷ್ಟು ಬರೆದರೂ ಸಾಲದು.
ಹುಟ್ಟುವಾಗ ಬಡವನಾಗಿ ಹುಟ್ಟುವುದು ನಮ್ಮ ತಪ್ಪಲ್ಲ ಆದರೆ ಬಡವನಾಗಿಯೇ ಸಾಯುವುದು ಮಾತ್ರ ಮಹಾಪರಾಧ. ಹಾಗೆಂದು ಜೀವನದಲ್ಲಿ ಏನಾದರೂ ಸಾಧನೆ ಮಾಡುವಲ್ಲಿ ಒಬ್ಬಾತ ತನ್ನ ಧ್ಯೇಯವನ್ನು ಧೃಢವಾಗಿಟ್ಟುಕೊಂಡು ಗುರಿ ತಲುಪುವಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಯಾವಮಟ್ಟಕ್ಕೂ ಏರಬಹುದು ಎನ್ನುವುದಕ್ಕೆ ತೀರ್ಥಹಳ್ಳಿ ಗೋಪಾಲಾಚಾರ್ಯರು  ಜ್ವಲಂತ ಉದಾಹರಣೆ. ಈಗಿನಂತೆ ಒಂದೇ ದಿನದಲ್ಲಿ ಪ್ರಚಾರ ಸಿಗಲು ಆಗಿನ ಕಾಲದಲ್ಲಿ ಮಾಧ್ಯಮಗಳು ಅಷ್ಟು ಬಲವಾಗಿರಲಿಲ್ಲ ಸಾಮಾಜಿಕ ಜಾಲತಾಣಗಳಂತೂ ದೂರದ ವಿಚಾರ ಬಿಡಿ. ಆದರೂ ಯಕ್ಷಗಾನ ರಂಗದಲ್ಲಿ ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೆ ತನ್ನಷ್ಟಕ್ಕೆ ತಾನು ತನ್ನ ಕಲೆಯನ್ನು ಗೌರವಿಸಿ ಪ್ರೀತಿಸಿ ಈ ಮಟ್ಟಕ್ಕೆ ಬೆಳೆದು ಅರವತ್ತರ ಹೊಸ್ತಿಲಲ್ಲಿರುವ ಆಚಾರ್ಯರ ಸಾಧನೆ ಎಲ್ಲರೂ ಮೆಚ್ಚತಕ್ಕದ್ದು ಒಪ್ಪಿಕೊಳ್ಳುವಂತದ್ದು ಹಾಗೂ ಅನುಸರಿಸುವಂತದ್ದು.
ಕಲಾಭಿಮಾನಿಗಳ ಪಾಲಿಗೆ ಪ್ರೀತಿಯ ಗೋಪಾಲಣ್ಣ ರಂಗಸ್ಥಳದಲ್ಲಿ ಎಷ್ಟು ದಕ್ಷರೋ ಚೌಕಿಯಲ್ಲಿ ಅಷ್ಟೇ ನಿಷ್ಟರು. ಚೌಕಿಗೆ ಹೋಗಿ ಅವರ ಬಳಿ ಮಾತನಾಡಲು ಯಾರೇ ಹೋದರೂ ಪ್ರೀತಿಯಿಂದ ಕರೆದು ಮಾತನಾಡಿಸುವ ಗುಣ ಅವರದ್ದು. ಕಲಾವಿದನೊಬ್ಬ ರಂಗದಲ್ಲಿ ಅದ್ವಿತೀಯನಾಗಿದ್ದು ನಿಜ ಜೀವನದಲ್ಲಿ ಅಷ್ಟೇ ಸಭ್ಯನಾಗಿದ್ದರೆ ಆ ಕಲಾವಿದನಿಗೆ ಸಿಗುವ ಗೌರವ  ಕೂಡಾ ದ್ವಿಗುಣವಾಗಿರುತ್ತದೆ ಎಂಬುದಕ್ಕೆ ಆಚಾರ್ಯರ ಜೀವನವೇ ಸಾಕ್ಷಿ.
1956 ಫೆಬ್ರವರಿ 24ರಂದು ಶ್ರೀ ವಾಸುದೇವ ಆಚಾರ್ಯ ಹಾಗೂ ಶ್ರೀಮತಿ ಸುಲೋಚನಾ ದಂಪತಿಗಳ ಎರಡನೆ ಮಗನಾಗಿ ತೀರ್ಥಹಳ್ಳಿಯಲ್ಲಿ ಗೋಪಾಲಾಚಾರ್ಯರ ಜನನವಾಯಿತು. ಅವರ ತಂದೆತಾಯಿಗೆ ಒಟ್ಟು 5ಜನ ಮಕ್ಕಳು. ಚಿಕ್ಕಂದಿನಲ್ಲಿ ಮನೆಯಲ್ಲಿ ಬಡತನ ತಾಂಡವವಾಡುತ್ತಿತ್ತು. ಹಾಗಾಗಿ ಕೇವಲ 3ನೇ ಕಕ್ಷೆಯವರೆಗೆ ಕಲಿಯಲು ಮಾತ್ರ ಸಾಧ್ಯವಾಯಿತು. ಆದರೆ ಒಂದು ವಿಶ್ವವಿದ್ಯಾಲಯದ ಕುಲಪತಿಗಿರಬೇಕಾದಷ್ಟು ಜ್ಞಾನ ಸಂಪಾದನೆಯನ್ನು ಆಚಾರ್ಯರು ತಮ್ಮ ಶ್ರಮದಿಂದ ಗಳಿಸಿಕೊಂಡರು. ಜ್ಞಾನಸಂಪಾದನೆ ಕೇವಲ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದವರಿಗಷ್ಟೇ ಸೀಮಿತವಲ್ಲ ಕಲಿಯುವ ಆಸಕ್ತಿ ಹಾಗೂ ತಕ್ಕ ಪ್ರಯತ್ನವಿದ್ದರೆ ಯಾರೂ ಶಾರದೆಯನ್ನು ಒಲಿಸಿಕೊಳ್ಳಬಹುದೆಂಬುದಕ್ಕೆ ನಿದರ್ಶನವಾದರು. ಹೀಗೆ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ತಮ್ಮ ಆಸಕ್ತಿಯ ಕಲೆಯಾದ ಯಕ್ಷಗಾನದತ್ತ ಮುಖ ಮಾಡಿದರು.
1970ರಲ್ಲಿ ರಂಜದಕಟ್ಟೆ ಮೇಳದೊಂದಿಗೆ ತಮ್ಮ ತಿರುಗಾಟವನ್ನು ಆರಂಭಿಸಿ ಗುರುಗಳಾದ ಶ್ರೀ ಕೃಷ್ಣೋಜಿ ರಾವ್ ರಲ್ಲಿ ಯಕ್ಷ ನಾಟ್ಯಾಭ್ಯಾಸವನ್ನು ಮಾಡಿ ಒಂದು ವರ್ಷ ಮೇಳದ ತಿರುಗಾಟ ಮುಗಿಸಿ ನಾಗರಕೊಡಿಗೆ ಮೇಳ ಸೇರಿ ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ ನಂತರ ಗೋಳಿಗರಡಿ ಮೇಳದಲ್ಲಿ 4 ವರ್ಷ, ಸಾಲಿಗ್ರಾಮ ಮೇಳದಲ್ಲಿ 10 ವರ್ಷ,ಹಾಗೂ ಶಿರಸಿ ಮೇಳದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ 1989ರಲ್ಲಿ ಪೆರ್ಡೂರು ಮೇಳಕ್ಕೆ ಪಾದಾರ್ಪಣೆ ಮಾಡಿದರು.
ಬದುಕಿನ ಹಲವು ಮಜಲುಗಳನ್ನು ದಾಟಿದಂತೆಯೆ ಯಕ್ಷರಂಗದಲ್ಲೂ ಏರಿಳಿತಗಳನ್ನು ಕಂಡವರು. ಖ್ಯಾತ ಭಾಗವತ ಶ್ರೀ ಕಾಳಿಂಗ ನಾವುಡರಿಂದ ಹಿಡಿದು ಹಲವಾರು ಹಿರಿಯ ಶ್ರೇಷ್ಠ ಕಲಾವಿದರೊಡನೆ ರಂಗ ಹಂಚಿಕೊಂಡ ಕೀರ್ತಿ ಗೋಪಾಲಾಚಾರ್ಯರದ್ದು. ಗೋಪಾಲಾಚಾರ್ಯರ ಮಾತಿನಂತೆ ಅವರು ಆ ಕಾಲಕ್ಕೆ ಸಾಲಿಗ್ರಾಮ ಮೇಳದಲ್ಲಿದ್ದಾಗ ಒಂದೇ ಮಾತಿನಲ್ಲಿ ಹಲವು ವಿಚಾರಗಳನ್ನು ಪ್ರಕಟಪಡಿಸಬಲ್ಲ ಗೂಢಾರ್ಥಗಳನ್ನೊಳಗೊಂಡು ಮಾತನಾಡಬಲ್ಲ ವಾಗ್ಮಿ ದಿ! ಶಿರಿಯಾರ ಮಂಜುನಾಥರ ವೇಷವನ್ನು ಕಂಡು ಸ್ಪೂರ್ತಿಗೊಂಡವರು. “ಅಂಥಹವರ ಒಡನಾಟ ಸಿಕ್ಕಿದ್ದು ತನ್ನ ಪುಣ್ಯ.ಈಗಲೂ ಕೆಲವೊಮ್ಮೆ ರಂಗಪ್ರವೇಶ ಮಾಡುವಾಗ ಅವರ ನೆನಪಾಗುತ್ತದೆ” ಎಂದು ಆಚಾರ್ಯರು ಹಿರಿಯರನ್ನು ನೆನೆಯುತ್ತಾರೆ. ಇನ್ನು ನಾಗರಕೊಡಿಗೆ ಮೇಳದಲ್ಲಿದ್ದಾಗ ಪುಂಡುವೇಷ ಮಾಡುತ್ತಿದ್ದ ನಗರ ಜಗನ್ನಾಥ ಶೆಟ್ಟಿಯವರ ಅದ್ಭುತವಾದ ನಾಟ್ಯದಿಂದಲೂ ಆಚಾರ್ಯರು ಬಹು ಪ್ರಭಾವಿತರಾದವರು. ಇನ್ನೊಬ್ಬರು ಕಿನ್ನಿಗೋಳಿ ಮುಖ್ಯಪ್ರಾಣರು.ಹಾಸ್ಯ ಕಲಾವಿದರಾಗಿದ್ದರೂ ಕೂಡಾ ಹಲವಾರು ವಿಷಯಗಳಲ್ಲಿ ಮಾರ್ಗದರ್ಶನ ಮಾಡಿದವರು. ಶ್ರೀ ಕೋಟ ವೈಕುಂಠ ನಾಯಕ್ ರವರು ಪುರಾಣದ ಪ್ರಸಂಗಗಳ ಬಗ್ಗೆ ಗೋಪಾಲಾಚಾರ್ಯರನ್ನು ತಿದ್ದಿ ತೀಡಿದವರು. ಹೀಗೆ ಗೋಪಾಲಾಚಾರ್ಯರನ್ನು ಮಾತನಾಡಿಸಿದಾಗ ಹಿರಿಯರ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು
ಆಚಾರ್ಯರು ಯಕ್ಷರಂಗದ ಎಲ್ಲಾ ರೀತಿಯ ವೇಷಗಳನ್ನೂ ಮಾಡಿ ನಿಪುಣರೆನಿಸಿಕೊಂಡವರು. ಕೆಲವೊಮ್ಮೆ ಅಪರೂಪದ ಪ್ರಸಂಗಳಲ್ಲಿ ಅವರನ್ನು ಸ್ತ್ರೀವೇಷದಲ್ಲೂ ಕಂಡ ನೆನಪಿದೆ. ಹೆಚ್ಚಾಗಿ ಪುಂಡುವೇಷಗಳಲ್ಲಿ ಕಾಣಿಸಿಕೊಳ್ಳುವ ಆಚಾರ್ಯರು ಕಳೆದ ಹಲವು ವರ್ಷಗಳಿಂದ ಪೆರ್ಡೂರು ಮೇಳದ ಪ್ರಧಾನ ಕಲಾವಿದರಾಗಿ ಮೆರೆಯುತ್ತಿದ್ದಾರೆ. ಅವರ ಅಭಿಮನ್ಯುವಿನ ಪಾತ್ರ ಅವರಿಗೆ ಬಹಳಷ್ಟು ಕೀರ್ತಿ ತಂದುಕೊಟ್ಟಂತಹ ಪಾತ್ರ.
ಅಭಿಮನ್ಯು ಪಾತ್ರದ ಬಗ್ಗೆ ಗೋಪಾಲಾಚಾರ್ಯರಲ್ಲಿ ಕೇಳಿದಾಗ ಅವರು ಹೇಳಿದ್ದು ಹೀಗೆ, “ಆರಂಭದಲ್ಲಿ ಅಭಿಮನ್ಯು ಪಾತ್ರ ಮಾಡುವ ಉತ್ಸಾಹ ವಿತ್ತು ಆದರೆ ತಲೆಯಲ್ಲಿ ವಿಚಾರಗಳಿರಲಿಲ್ಲ. ಹಾಗಾಗಿ ಆರಂಭದಲ್ಲಿ ವಿಫಲವಾಗಿದ್ದೆ. ನನ್ನಿಂದ ಆ ಪಾತ್ರವನ್ನು ಮಾಡಲು ಯಾಕೆ ಸಾಧ್ಯವಿಲ್ಲವೆಂದು ಛಲ ಹುಟ್ಟಿತು ಸತತ ಅಭ್ಯಾಸ ಮಾಡಿದೆ. ದೇವರು ನನ್ನ ಕೈ ಬಿಡಲಿಲ್ಲ. ಕಲಾಭಿಮಾನಿಗಳಿಗೆ ನನ್ನ ಅಭಿಮನ್ಯು ಪಾತ್ರ ಇಷ್ಟವಾಯಿತು”.
ಹೀಗೆ ಆರಂಭದಲ್ಲಿ ಸಂಕಷ್ಟ ಅನುಭವಿಸಿ ಸ್ವಪ್ರಯತ್ನದಿಂದ ಮುಂದೆ ನಡೆದ ಆಚಾರ್ಯರು  ಮತ್ತೆಂದೂ ಹಿಂತುರಿಗಿ ನೋಡಲಿಲ್ಲ. ಬಹಳಷ್ಟು ಮೇಧಾವಿಗಳ ಎದುರಲ್ಲಿಯೂ ಸೈ ಎನ್ನಿಸಿಕೊಳ್ಳುವ ಅಭಿಮನ್ಯು ಆಚಾರ್ಯರದ್ದಾಗಿತ್ತು. ಮೊದಲು ಕಂಡ ವೈಫಲ್ಯವೇ ನಂತರದ ಸಾಧನೆಗೆ ಕಾರಣವೆಂದರೂ ತಪ್ಪಿಲ್ಲ.
ಯಾವುದೇ ಪಾತ್ರವಾಗಿದ್ದರೂ ಆ ಪಾತ್ರದ ಪರಕಾಯ ಪ್ರವೇಶ ಮಾಡಿ ಅಭಿನಯಿಸುವ ಅವರ ದಕ್ಷತೆಯನ್ನು ಯಾರಾದರೂ ಮೆಚ್ಚಲೇಬೇಕು. ಅಂತೆಯೇ ಚಂದ್ರಹಾಸ ಚರಿತ್ರೆಯ ಆಚಾರ್ಯರ ಚಂದ್ರಹಾಸ ಪಾತ್ರವನ್ನು ಕಣ್ತುಂಬಿ ಸವಿದವರಿಗೇ ಗೊತ್ತು ಅದರ ಪ್ರಾಮುಖ್ಯ.
ಪ್ರತಿಭೆಯಿದ್ದಲ್ಲಿ ಪ್ರಶಸ್ತಿಗಳಿಗೆ ಕೊರತೆಯೇ??  ಗೋಪಾಲಾಚಾರ್ಯರಿಗೆ ಹಲವಾರು ಗೌರವಗಳು  ಸಂದಿವೆ. ಹೆಚ್ಚಿನ ಸನ್ಮಾನಗಳು ಕೂಡಾ ಅವರ ಕಲೆಗೆ ಕಿರೀಟಪ್ರಾಯಗಳಾಗಿವೆ. ಕಳೆದ ವರ್ಷ ಕುಂದಾಪುರ ಗಾಂಧೀ ಮೈದಾನದಲ್ಲಿ ನಡೆದ “ಅರವತ್ತರ ಅಭಿಮನ್ಯುವಿಗೆ ಅಭಿಮಾನಿಗಳಿಂದ ಅಭಿನಂದನೆ” ಕಾರ್ಯಕ್ರಮ ನೆನಪಿನಲ್ಲುಳಿಯುವಂತದ್ದು. ಈಗಲೂ ಕೂಡಾ ಯಕ್ಷಗಾನ ನೋಡಬಂದ ಕಲಾಭಿಮಾನಿಗಳಿಗೆ ಗೋಪಾಲಾಚಾರ್ಯರಿಂದ ನಿರಾಸೆಯಾಗುವ ಪ್ರಶ್ನೆಯೇ ಇಲ್ಲ. ವಯಸ್ಸು ದೇಹಕ್ಕೆ ಆಗಿದೆಯೇ ಹೊರತು ತನ್ನೊಳಗಿನ ಕಲಾವಿದನಿಗಲ್ಲ ಎಂಬಂತೆ ಹೆಜ್ಜೆ ಹಾಕುವ ಆಚಾರ್ಯರ ನಾಟ್ಯನೋಡಿ ಮೂಗಿನ ಮೇಲೆ ಬೆರಳಿಡುವವರದೆಷ್ಟೋ ಮಂದಿ. ಕೇವಲ ಅವರ ಹೆಸರು ಕೇಳಿದರೇನೆ ಚಪ್ಪಾಳೆ ಶಿಳ್ಳೆಗಳ ಸುರಿಮಳೆ. ಹಾಗಾಗಿ ಅವರನ್ನು ಯುವ ಕಲಾವಿದರ ಸ್ಪೂರ್ತಿಯ ಪ್ರತೀಕ ಎಂದರೆ ತಪ್ಪಾಗಲಾರದು.
ಪ್ರಸ್ತುತ ಸಾಂಸಾರಿಕವಾಗಿ ನೆಮ್ಮದಿಯನ್ನು ಹೊಂದಿರುವ ಆಚಾರ್ಯರು ಬೈಂದೂರು ಸಮೀಪದ ನಾಯ್ಕನಕಟ್ಟೆಯಲ್ಲಿ ನೆಲೆಸಿರುತ್ತಾರೆ. ತಮ್ಮ ಒಬ್ಬನೇ ಮಗನನ್ನು ದೂರದ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಪದವಿ ಓದಲು ಕಳುಹಿಸಿ ಈ ವರ್ಷವೇ ಮಗನ ಇಂಜಿನಿಯರಿಂಗ್ ಕೂಡಾ ಮುಗಿಯಲಿದೆ. ಅಲ್ಲಿಗೆ ತಾನು ಪಡೆಯದ ವಿಧ್ಯಾಭ್ಯಾಸವನ್ನು ತನ್ನ ಮಗನಿಗೆ ಕೊಡಿಸುವ ಆಚಾರ್ಯರ ಕನಸೂ ನನಸಾದಂತೆ. ಆದರೆ ಇನ್ನಷ್ಟು ವರ್ಷ ಗೋಪಾಲಾಚಾರ್ಯರ ಯಕ್ಷಸೇವೆಯನ್ನು ಸವಿಯುವ ಆಶಯದಿಂದ ಇರುವ ಕಲಾಭಿಮಾನಿಗಳಿಗೆ ಒಂದು ಕಟು ಸತ್ಯ ಶ್ರೀ ಗೋಪಾಲ ಆಚಾರ್ಯರು ಈ ವರ್ಷಕ್ಕೆ ತಮ್ಮ ಮೇಳದ ತಿರುಗಾಟದ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಸತ್ಯ ಕಹಿಯಾದರೂ ಒಪ್ಪಿಕೊಳ್ಳಲೇಬೇಕು. ಏಕೆಂದರೆ ಸತ್ಯವೆಂದೂ ಸುಳ್ಳಾಗಲು ಸಾಧ್ಯವಿಲ್ಲ. ಅವರ ನಿವೃತ್ತ ಜೀವನ ವಿಘ್ನಗಳಿಲ್ಲದೆ ಸಾಗಲಿ. ಅವರ ಕನಸೆಲ್ಲವೂ ನೆರವೇರಲಿ. ಹಾಗೆಯೇ ಅವರಿಂದ ಪ್ರೇರಣೆ ಪಡೆದು ಅವರಂತೆ ಯಕ್ಷರಂಗದಲ್ಲಿ ಮಿಂಚುವ ಹಲವಾರು ಯುವ ಕಲಾವಿದರನ್ನು ನಾವು ಕಾಣುವಂತಾಗಲಿ ಎಂಬ ಹಾರೈಕೆಗಳೊಂದಿಗೆ.

ಯಕ್ಷಗಾನಂ ವಿಶ್ವಗಾನಂ

Source-whats app