img_20151230_153138-1ಗಿರಿ ಕಾನನಗಳ ನಾಡು, ಕಲೆ, ಸಾಹಿತ್ಯ, ಸಂಸ್ಕೃತಿಯ ನೆಲೆವೀಡು, ಪುರಾಣ ಪ್ರಸಿದ್ಧ ಕ್ಷೇತ್ರದ ತವರೂರು ಅದುವೇ ಗೇರುಸೊಪ್ಪ.
ಹೌದು, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದಟ್ಟ ಕಾಡಿನ ನಡುವೆ ಶೋಭಿಸುವ, ಐತಿಹಾಸಿಕ ಪ್ರಾಮುಖ್ಯತೆ ಪಡೆದ ಶ್ರೇಷ್ಠ ಸ್ಥಳವೇ ಗೇರುಸೊಪ್ಪ. ಇಂಥ ಗೇರುಸೊಪ್ಪ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವೂ ಹೌದು. ಇದಕ್ಕೆ ಇಲ್ಲಿನ ಪರಿಸರ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ. ಇಲ್ಲಿನ ಜೈನ ಬಸದಿಗಳು ಹಾಗೂ ಹಿಂದೂ ದೇವಸ್ಥಾನಗಳೇ ಧರ್ಮ ಸಂಸ್ಕೃತಿಗೆ ಸಾಕ್ಷೀಕರಿಸುತ್ತಿವೆ. ಇಂಥವುಗಳಲ್ಲಿ ಶ್ರೀ ಕ್ಷೇತ್ರ ಬೆಳ್ಳಿಮಕ್ಕಿ ಪ್ರಮುಖವಾದುದು.
ಹೊನ್ನಾವರ ತಾಲೂಕಿನಿಂದ 30 ಕಿಮಿ ಜೋಗದ ರಸ್ತೆಯಲ್ಲಿ ಸಾಗಿದರೆ ಕಾಣಸಿಗುತ್ತದೆ ಶ್ರೀ ಕ್ಷೇತ್ರ ಬೆಳ್ಳಿಮಕ್ಕಿ. ಶರಾವತಿ ನದಿಯ ದಂಡೆಯ ಸುಂದರ ಪರಿಸರದಲ್ಲಿ ನೆಲೆಸಿದ್ದಾನೆ ಶ್ರೀ ಪಂಚಮುಖಿ ಮುಖ್ಯಪ್ರಾಣ ದೇವರು. ತನ್ನ ನಂಬಿ ಬಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ಶಮನ ಮಾಡು ಶ್ರೀ ಆಂಜನೇಯ, ಬೇಡಿದ ವರಗಳನ್ನು ನೀಡಿ ಕಾಪಾಡುವ ಕರುಣಾಮಯಿ. ಶ್ರೀ ಮುಖ್ಯಪ್ರಾಣನ್ನು ನಂಬಿ ಬಂದರೆ ಭಕ್ತರ ಎಲ್ಲ ಕಷ್ಟಗಳೂ ದೂರವಾಗುತ್ತದೆ ಎನ್ನುವ ಪ್ರತೀತಿ ಇದೆ. ಹೀಗಾಗಿಯೇ ಇತ್ತೀಚೆಗೆ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿ ಬಂದು ಪೂಜೆ ಸಲ್ಲಿಸಿ ಶ್ರೀ ಆಂಜನೇಯನ ಕೃಪೆಗೆ ಒಳಗಾಗುತ್ತಿದ್ದಾರೆ.
ಬೆಳ್ಳಿಮಕ್ಕಿಯ ಪೌರಾಣಿಕ ಹಿನ್ನೆಲೆ:
ಈ ಹಿಂದಿನಿಂದಲೂ ಗೇರುಸೊಪ್ಪೆಗೆ ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಬಹಳ ಮಹತ್ವದ ಸ್ಥಾನವಿದೆ. ಪುರಾಣಗಳ ಪ್ರಕಾರ ಒಂದೊಂದು ಹಿಂದೂ ಧಾರ್ಮಿಕ ಸ್ಥಳವೂ ಹೌದು. ಅದರಲ್ಲೂ ಬೆಳ್ಳಿಮಕ್ಕಿಗೆ ಬೇರೆ ಬೇರೆ ಪುರಾಣ ಕಥೆಗಳು ಹಾಗೂ ಐತಿಹ್ಯ ಇದೆ. ಅದರಲ್ಲಿ ಶ್ರೀರಾಮನ ಭಂಟ ಆಂಜನೇಯ ಈ ಕ್ಷೇತ್ರದಲ್ಲಿ ನೆಲೆಸಲು ಶ್ರೀರಾಮನೇ ಕಾರಣ ಎನ್ನುವ ದಂತಕಥೆಯೂ ಸೇರಿದೆ.
ಪ್ರಕೃತಿಯ ಮಡಿಲಲ್ಲಿ ಶೋಭಿಸುವ ಈ ಕ್ಷೇತ್ರ ಶ್ರೀರಾಮ ಸಂಚರಿಸಿದ ಪ್ರದೇಶ ಎನ್ನುವ ಪ್ರತೀತಿ ಇದೆ. ಜೊತೆಗೆ ಹಿಂದೆ ಶ್ರೀರಾಮ, ಶ್ರೀ ಸೀತಾ ಮಾತೆ ಹಾಗೂ ಲಕ್ಷಣರೊಂದಿಗೆ ವನವಾಸಕ್ಕೆ ಇಲ್ಲಿಗೆ ಬಂದಿದ್ದನಂತೆ. ಆಗ ಈ ಕಾಡಿನ ಪರಿಸರದಲ್ಲಿಯೇ ತಂಗಿದ್ದನಂತೆ. ಒಂದು ದಿನ ಶ್ರೀರಾಮನಿಗೆ ಅತೀವ ಬಾಯಾರಿಕೆಯಾಗಿ ನೀರಿನ ಅಭಾವ ಆದಾಗ ಶರಾವತಿ ನದಿಯನ್ನು ಸೃಷ್ಟಿಸಿದನಂತೆ. ಈ ಸಂದರ್ಭದಲ್ಲಿ ಶ್ರೀರಾಮನ ಭಕ್ತನಾದ ಆಂಜನೇಯ ರಾಮನಿಗೆ ಸಹಾಯ ಮಾಡಿದ್ದನಂತೆ. ಹೀಗಾಗಿ ಶರಾವತಿ ನದಿಯ ತಟದಲ್ಲಿ ನೆಲೆಸಿ ಈ ಪ್ರದೇಶದಲ್ಲಿ ಸುಖಸಂಪತ್ತು ಕಾಪಾಡುವಂತೆ ಶ್ರೀರಾಮನೇ ಆಂಜನೇಯನಿಗೆ ಸೂಚಿಸಿದನಂತೆ. ಶ್ರೀ ರಾಮನ ಆಜ್ಞೆಯಂತೆ ಇಂದಿಗೂ ಇಲ್ಲಿ ನೆಲೆಸಿದ್ದಾನೆ ಎನ್ನುವ ಪ್ರತೀತಿ ಇದೆ.
ಇನ್ನೊಂದು ದಂತಕಥೆಯ ಪ್ರಕಾರ, ಶ್ರೀ ರಾಮ ವನವಾಸದಲ್ಲಿದ್ದಾಗ ಈ ಪ್ರದೇಶದಲ್ಲಿ ಬರ ಬಂದು ಕುಡಿಯಲೂ ನೀರಿಗೆ ತತ್ವಾರ ಆಗಿತ್ತಂತೆ. ಆಗ ಇಲ್ಲಿನ ಜನರ ಕಷ್ಟಗಳನ್ನು ಮನಗಂಡ ಶ್ರೀ ರಾಮ ಶರಾವತಿ ನದಿ ಸೃಷ್ಟಿಸಿ ಜೀವನದಿಯಾಗಿ ಹರಿಯುವಂತೆ ಮಾಡಿದನಂತೆ. ಆಗ ಶ್ರೀ ರಾಮನಿಗೆ ಹನುಮ ಸಹಾಯ ಮಾಡಿದ್ದರಿಂದ ಇಲ್ಲಿನ ಜನರ ಕಷ್ಟಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಆಂಜನೇಯನಿಗೆ ವಹಿಸಿದ ಎನ್ನುವ ಕಥೆ ಕೂಡ ಪ್ರಚಲಿತದಲ್ಲಿದೆ.

Jpeg

ಬೆಳ್ಳಿಮಕ್ಕಿಯ ತಾಳೆಗರಿ ಐತಿಹಾಸ :
ಶ್ರೀ ಪಂಚಮುಖಿ ಮುಖ್ಯಪ್ರಾಣ ದೇವರು ಶ್ರೀ ಕ್ಷೇತ್ರ ಬೆಳ್ಳಿಮಕ್ಕಿ ಎಂಬ ಈ ಪುಣ್ಯ ಕ್ಷೇತ್ರದ ಮಹಿಮೆಯ ಬಗ್ಗೆ ಸಾಕಷ್ಟು ಕಥೆಗಳಿವೆ. ಹಾಗೆಯೇ ಐತಿಹಾಸಿಕ ಹಿನ್ನೆಲೆಯೂ ಇದೆ ಎನ್ನುತ್ತಿವೆ ಇಲ್ಲಿನ ಕುರುಹುಗಳು. ಹೊನ್ನಾವರ ತಾಲೂಕಿನ ಹೈಗುಂದದ ಶ್ರೀ ಪ್ರಭಾಕರ ಹೆಗಡೆ ಅವರಿಗೆ ಸಿಕ್ಕಿದ ತಾಳೆಗರಿ ಇದಕ್ಕೆ ಸಾಕ್ಷೀಕರಿಸುತ್ತಿದೆ. ಹೀಗೆ ಸಿಕ್ಕಿದ ತಾಳೆಗರಿಯನ್ನು ಪರಿಶೀಲಿಸಿದ ಪ್ರಭಾಕರ ಹೆಗಡೆ, ಅದನ್ನು ಕನ್ನಡಕ್ಕೆ ಭಾಷಾಂತರಿಸಿದ್ದು, ಇಂದಿಗೂ ಈ ತಾಳೆಗರಿಗಳು, ಶ್ರೀ ಕ್ಷೇತ್ರ ನಿರ್ಮಾತೃರೂ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾಗಿರುವ ಶ್ರೀ ವೇ|ಮೂ| ನಾಗೇಶ ವೆಂಕಪ್ಪ ಭಟ್ಟರಲ್ಲಿ ಇಂದಿಗೂ ಲಭ್ಯವಿದೆ.
ಈ ಹಿಂದೆ ಪ್ರವಾಸಕ್ಕೆ ಬಂದಿದ್ದ ಪೋರ್ಚುಗೀಸ್‌ ಪ್ರವಾಸಿ ಟೋಮ್ ಫೀರಸ್ ಹಾಗೂ ರೋಮನ್‌ ಪ್ರವಾಸಿ ಪಿಯತ್ರೋ ದೆಲ್ಲಾವೆಲ್ಲೆ, ಈ ಕ್ಷೇತ್ರದ ಬಗ್ಗೆ ಹಾಗೂ ತಮಗಾದ ಅನುಭವದ ಬಗ್ಗೆ ಉಲ್ಲೇಖಿಸಿ, ಶ್ರೀ ದೇವರ ಶಕ್ತಿ ಅಪಾರವಾಗಿತ್ತು ಎಂದು ತಾಳೆಗರಿಯಲ್ಲಿ ಬರೆದಿದ್ದಾರೆ.
ಗೇರುಸೊಪ್ಪವನ್ನಾಳಿದ 12 ನಾಯಕರ ನಂತರ ರಾಣಿ ಚನ್ನಬೈರಾದೇವಿ ಆಳ್ವಿಕೆ ನಡೆಯಿತು. ಈ ಸಂದರ್ಭದಲ್ಲಿ ಗೇರುಸೊಪ್ಪ ಭಾರತದ ಸಾಂಬಾರ ಪದಾರ್ಥಗಳು ಹಾಗೂ ಕಾಳುಮೆಣಸು ರಪ್ತು ಸಾಗಣೆಯ ಕೇಂದ್ರವಾಗಿತ್ತು. ಈ ಸಂದರ್ಭದಲ್ಲಿ ರಾಣಿ ಚೆನ್ನಬೈರಾದೇವಿ ಆಡಳಿತ ಕಾಣಲು ಹಾಗೂ ವ್ಯಾಪಾರ ವಹಿವಾಟಿನ ಸಂಬಂಧ ಬಂದಿದ್ದ, ಈ ಪ್ರವಾಸಿಗರು ಶ್ರೀ ಕ್ಷೇತ್ರದ ಬಗ್ಗೆ ಉಲ್ಲೇಖಿಸಿದ್ದಾರೆ. ಉಲ್ಲೇಖಗಳ ಪ್ರಕಾರ, ಕ್ರಿ.ಶ 1618 ರಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು ಎನ್ನುವುದು ತಿಳಿದುಬರುತ್ತದೆ.
ಉಲ್ಲೇಖಗಳ ಪ್ರಕಾರ, ಗೇರುಸೊಪ್ಪಾ ಎನ್ನುವುದು ಮೊದಲಿಗೆ ಗೆರ್ಸೊಪಾ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು. ನಂತರ ಅದು ಕಾಲ ಕ್ರಮೇಣ ಗೇರುಸೊಪ್ಪಾ ಎನ್ನುವ ಪದಕ್ಕೆ ರೂಪಾಂತರ ಹೊಂದಿತು. ಹೀಗೆ ಇವರು ಗೇರುಸೊಪ್ಪಾಕ್ಕೆ ಹೊನ್ನಾವರ ಮಾರ್ಗವಾಗಿ ಹಡಗಿನ ಮೂಲಕ ಬರುವಾಗ ದಾರಿತಪ್ಪಿತಂತೆ. ಆಗ ಹೊನ್ನಾವರಕ್ಕೆ ಹತ್ತಿರವಿರುವ ರಾಮತೀರ್ಥದ ಕಡೆಗೆ ಹೋಗಿ ಅಲ್ಲಿನ ಪರಿಸರ ನೋಡಿ ಬಂದರಂತೆ. ನಂತರ ಪುನಃ ಗೇರುಸೊಪ್ಪಾಕ್ಕೆ ಪ್ರಯಾಣ ಬೆಳೆಸಿದರಂತೆ. ಈ ಸಂದರ್ಭದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಹಾಗೂ ಶರಾವತಿಯ ಸೊಬಗನಗನು ನೋಡಲು ಶರಾವತಿ ನದಿಯ ಈ ಕಡೆ ಸಂಚಾರಕ್ಕೆಂದು ಬಂದಿದ್ದರು. ಈ ವೇಳೆಗೆ ನದಿಯ ದಂಡೆಯಲ್ಲಿ ಸುಮಾರು ದೂರ ಕ್ರಮಿಸಿದ ನಂತರ ಅವರಿಗೆ ಒಂದು ಗುಡಿಸಿಲಿನಂತೆ ಕಾಣಿಸಿತು. ಅದರ ಅಕ್ಕಪಕ್ಕದಲ್ಲಿ ಗಿರಿ ಕೋಟೆಗಳು ಇದ್ದವು. ಅದಕ್ಕೆ ಅವರು ಅದನ್ನು ಗರಿ ಕೋಟೆ ಅಥವಾ ಗೋವರ್ಧನ ನಗರ ಎಂದು ಕರೆದರು.
ಇವುಗಳ ನಡುವೆ ಒಂದು ಗುಡಿಸಿನಲ್ಲಿ ಒಂದು ಹನುಮಂತ ದೇವರ ವಿಗ್ರಹ ಪತ್ತೆಯಾಯಿತು. ಈ ಕುರಿತು ಕುತೂಹಲದಿಂದ ಇನ್ನೂ ಸ್ವಲ್ಪ ಹತ್ತಿರ ಹೋಗಿ ವೀಕ್ಷಣೆ ಮಾಡಿದಾಗ ಆ ಹನುಮಂತನ ವಿಗ್ರಹದ ಮುಂದೆ ದೀಪವು ಉರಿಯುತ್ತಿತ್ತು. ಹಾಗೂ ಆ ಹನುಮಂತನ ಕೈಗಳಿಗೆ ಮಾಡಿಸಿದ ಬೆಳ್ಳಿಯ ಕೈ ಕವಚವಿತ್ತು. ನಂತರ ಆ ಗುಡಿಯ ಮುಂದೆ ವಾದ್ಯ ಭಾರಿಸುತ್ತಿದ್ದಂತೆ ಹಾಗೂ ಅನೇಕ ಜನರು ಸೇರಿ ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಹೊರಟಿರುವ ಶಬ್ಧದಂತೆ ಕೇಳಿಸಿದ ಅನುಭವ ಉಂಟಾಯಿತು ಎಂದು ಪ್ರವಾಸಿಗರು ಬರೆದ ತಾಳೆಗರಿಯಲ್ಲಿ ಉಲ್ಲೇಖವಾಗಿದೆ.
ಈ ಸಂದರ್ಭದಲ್ಲಿ ದೇವರು ದರ್ಶನ ಉಂಟಾದಂತೆ ಭಾಸವಾಯಿತು ಎಂದು ಪೊರ್ಚುಗೀಸ್‌ ಮತ್ತು ರೋಮನ್‌ ಪ್ರವಾಸಿಗರು ಉಲ್ಲೇಖಿಸಿದ್ದಾರೆ. ಹೀಗೆ ಈ ಪುಣ್ಯ ಸ್ಥಳದ ಬಗ್ಗೆ ತಾವು ಸಂಗ್ರಹಿಸಿದ ತಾಳೆ ಗರಿಗಳನ್ನು ಇಲ್ಲಿಯೇ ಬಿಟ್ಟು ಹೋಗಿರಬಹುದು ಎನ್ನಲಾಗಿದೆ. ಈ ಹನುಮಂತ ದೇವರಿಗೆ ಕೈಯಲ್ಲಿ ಬೆಳ್ಳಿಯ ಕಡಗ ಇದ್ದಿದ್ದರಿಂದ, ಹಾಗೂ ಆ ಗುಡಿಯ ಅಕ್ಕಪಕ್ಕದಲ್ಲಿ ಕಾಡು, ಗದ್ದೆ ಇತ್ಯಾದಿಗಳನ್ನು ಕಂಡು ಮಕ್ಕಿ ಎಂದು ಕರೆದರು. ಹೀಗೆ ಈ ಕ್ಷೇತ್ರ ಮುಂದೆ ಬೆಳ್ಳಿಮಕ್ಕಿಯಾಗಿ ಪ್ರಸಿದ್ದಿ ಹೊಂದಿತು ಎನ್ನುವ ಐತಿಹ್ಯವಿದೆ.img_1187
ಶ್ರೀ ಕ್ಷೇತ್ರದ ಅಭಿವೃದ್ಧಿ:
ಇಂಥ ಪುಣ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದಿನಾಂಕ 27.2.1992 ರಲ್ಲಿ ಶ್ರೀ ಪಂಚಮುಖಿ ಮುಖ್ಯಪ್ರಾಣ ದೇವರ ಪುನಃಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿದೆ. ಅಂದು ತಾಂತ್ರಿಕರಾಗಿದ್ದ ದಿ. ವೇದಬ್ರಹ್ಮ ಕಟ್ಟೆ ಪರಮೇಶ್ವರ ಭಟ್ಟ ಇವರ ಅಧ್ವೈರ್ಯದಲ್ಲಿ ನೆರವೇರಿತು. ನಂತರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ನಾಗೇಶ ಭಟ್ಟ ಅರ್ಚಕರಿಗೆ ನೀಡಿದ ಆದೇಶದಂತೆ 1998 ರಿಂದ ಶ್ರೀ ದೇವರ ಬ್ರಹ್ಮರಥೋತ್ಸವವನ್ನು ಆರಂಭಿಸಲಾಯಿತು. ಗೇರುಸೊಪ್ಪ ಸೀಮೆಯಲ್ಲಿಯೇ ಇದು ಪ್ರಪ್ರಥಮ ಬ್ರಹ್ಮರಥೋತ್ಸವವಾಗಿ ಸಾವಿರಾರು ಭಕ್ತವೃಂದ ಪಾಲ್ಗೊಳ್ಳುವಂತಾಯಿತು. ಹೀಗೆ ಆರಂಭವಾದ ಶ್ರೀ ದೇವರ ಬ್ರಹ್ಮರಥೋತ್ಸವ ಪ್ರತೀ ವರ್ಷ ಮಾರ್ಗಶೀರ್ಷ ಬಹುಳ ಪಂಚಮಿಯಂದು ಬಹಳ ವಿಜ್ರಂಭಣೆಯಿಂದ ನಡೆಯುತ್ತದೆ. ಶ್ರೀ ಕ್ಷೇತ್ರದ ಪ್ರತೀ ಬ್ರಹ್ಮರಥೋತ್ಸವದಲ್ಲೂ ದಿವಗಿ ಮಠದ ಶ್ರೀ ಶ್ರೀ ರಮಾನಂದ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುತ್ತದೆ.
ಶ್ರೀ ಕ್ಷೇತ್ರದ ಅಧ್ಯಕ್ಷರಾಗಿ ಪ್ರಾರಂಭದಲ್ಲಿ ದಿ. ಪ್ರಸನ್ನ ನಾಡಕರ್ಣಿ ಕಾರ್ಯ ನಿರ್ವಹಿರ್ವಹಿಸಿದ್ದರು. ಪ್ರಸ್ತುತ ಗೋಕರ್ಣದ ನವೀನ ಪ್ರಸನ್ನ ನಾಡಕರ್ಣಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ಮುತುವರ್ಜಿ ವಹಿಸುತ್ತಿದ್ದಾರೆ. 2010 ರಲ್ಲಿ ಶ್ರೀ ಕ್ಷೇತ್ರದಲ್ಲಿ ಅತಿರುದ್ರ ಮಹಾಯಾಗ ಹಾಗೂ ಬ್ರಹ್ಮಕಲಶ ಪ್ರತಿಷ್ಠಾಪನೆ ಇನ್ನಿತರ ವೈದಿಕ ಕಾರ್ಯಕ್ರಮಗಳು ನಡೆದವು. ಹೀಗೆ ಪ್ರತೀ ವರ್ಷವೂ ಹಲವು ವೈದಿಕ ಕಾರ್ಯಕ್ರಮಗಳು ಹಾಗೂ ಹೋಮ ಹವನಗಳು ವೇ.ಮೂ. ನಾಗೇಶ ಭಟ್ಟರು ಹಾಗೂ ತಾಂತ್ರಿಕರಾದ ವೇದ ಬ್ರಹ್ಮ ಕಟ್ಟೆ ಶ್ರೀ ಶಂಕರ ಭಟ್ಟ ಅವರ ನೇತೃತ್ವದಲ್ಲಿ ಇಂದಿಗೂ ನಡೆದುಕೊಂಡು ಬಂದಿದೆ. ಧಾರ್ಮಿಕ ವಿಧಿ ವಿಧಾನದಂತೆ ನಿತ್ಯ ಪೂಜೆ, ಅನುಷ್ಠಾನ, ದರ್ಶನ, ರುದ್ರ, ಪಾರಾಯಣಗಳು ನಡೆಯುತ್ತವೆ. ಪ್ರತಿನಿತ್ಯವೂ ನೂರಾರು ಭಕ್ತರು ಶ್ರೀಕ್ಷೇತ್ರಕ್ಕೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಕಷ್ಟಗಳನ್ನು ಪರಿಹರಿಸಿಕೊಂಡಿದ್ದಾರೆ. ಬೇಡಿ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಬಂದಿರುವುದು ಕ್ಷೇತ್ರದ ಪ್ರತೀತಿ. ಹೀಗೆ ಶಕ್ತಿ ಕ್ಷೇತ್ರವಾದ ಬೆಳ್ಳಿಮಕ್ಕಿ ಸಾವಿರಾರು ಭಕ್ತ ಸಮೂಹವನ್ನೇ ಹೊಂದಿದೆ.