0030ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.
1. ಪ್ರಸಂಗ: ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗಧಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು “ಗದಾಯುದ್ದ ಪ್ರಸಂಗ” ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.
2. ಪಾತ್ರಧಾರಿಗಳು:ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ – ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.
3. ವೇಷಭೂಷಣ :ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜ (ನಾಯಕ)ನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣ ಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ
ಭಿನ್ನವಾಗಿರುತ್ತವೆ.
4. ಭಾಗವಂತಿಕೆ: ಯಕ್ಷಗಾನದ ಜೀವಾಳವೇ ಭಾಗವಂತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ
ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.
5. ಮಾತುಗಾರಿಕೆ:ಭಾಗವತರು ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.
6. ಹಿಮ್ಮೇಳ:ಹಿಮ್ಮೇಳವೆಂದರೆ ಚಂಡೆ, ಮದ್ದಲೆ, ಮೃದಂಗ, ತಾಳ, ಜಾಗಟೆ ಮುಂತಾದ ಸಂಗೀತ ಉಪಕರಣಗಳನ್ನು ಇಲ್ಲಿನ ನೃತ್ಯ, ಭಾಗವತಿಕೆ ಮತ್ತು ಮಾತುಗಾರಿಕೆಯ ವೇಳೆ ಸಂದರ್ಭೋಚಿತವಾಗಿ ಬಳಸುವಿಕೆ. ಒಂದು ಯಕ್ಷಗಾನವು ಪರಿಣಾಮಕಾರಿಯಾಗಿ ಮೂಡಿ ಬರಬೇಕಾದರೆ ಪಾತ್ರಧಾರಿಗಳ ಅಭಿನಯ, ನೃತ್ಯ, ಭಾಗವಂತಿಕೆ ಎಷ್ಟು ಮುಖ್ಯವೋ, ಹಿಮ್ಮೇಳವೂ ಸಹ ಅಷ್ಟೇ ಪ್ರಮುಖವಾದುದು. ಪಾತ್ರಧಾರಿಗಳ ಅಭಿನಯವು ಇನ್ನಷ್ಟು ಛಾಪು ಮೂಡಿಸಲು, ಭಾಗವತರ ಹಾಡು ಇನ್ನಷ್ಟು ಸುಂದರವಾಗಿ ಹೊರಹೊಮ್ಮಲು ಸರಿಯಾದ ಹಿಮ್ಮೇಳ ಬೇಕೇ ಬೇಕು.

ಸಂಗ್ರಹ-ವಾಟ್ಸಪ್