” ಎಷ್ಟೊಂದು ಜನ ನಿತ್ಯ ಬಾಗಿಲೆದುರಲಿ ನಿಂದು

ತೋಡಿಕೊಳುವುದ ಕಂಡೆ ಅವರವರ ಅಳಲು,

ಅವರವರಿಗವತರ ಮಮತೆಯಮೃತಧಾರೆ,

ಸುರಿಸುರಿಸುವುದೆ ಚೋದ್ಯ ಮಾಂತೃತ್ವ ಮುಗಿಲು”.

ಶ್ರೀ ಕ್ಷೇತ್ರ ಬಂಗಾರಮಕ್ಕಿಯ ದರ್ಶನ ವೈಖರಿಯನ್ನು ಕಂಡು ಭಕ್ತ ಕವಿ ಮಾಸ್ಕೇರಿಯ ಶ್ರೀ ಎಮ್.ಕೆ. ನಾಯಕರು ಬರೆದ ‘ಕ್ರಾಂತ ದೃಷ್ಟಿ’ಎಂಬ ಕವನದ ಮೊದಲ ಚರಣ ಇದು.ಭಕ್ತಿ, ಶೃದ್ಧೆ, ನಂಬಿಕೆ, ವಿಶ್ವಾಸ ಇವುಗಳನ್ನು ಹೃದಯದಲ್ಲಿ ತುಂಬಿಕೊಂಡವನೇ ಭಾಗ್ಯವಂತ.ಅವನೇ ಸಹೃದಯಿ. ವೇದೋಕ್ತವಾಗಿ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯಗಳು, ಅಂದರೆ ಮೂರ್ತಿ,ಅರ್ಚಕರು, ಅಲಂಕಾರ, ರಥ, ಧ್ವಜಸ್ಥಂಭಗಳು ಇವೆಲ್ಲವೂ ಸೇರಿ ಅಗೋಚರವೂ ಆದ ದೈವೀ ಶಕ್ತಿಯನ್ನು ತಮ್ಮ ಗರ್ಭದಲ್ಲಿರಿಸಿಕೊಂಡು ಸ್ವಯಂ ಪೂರ್ಣವಾಗಿ ಸಹೃದಯಿಗಳನ್ನು ಆಕರ್ಷಿಸುತ್ತದೆ. ಅಂಥವುಗಳನ್ನು ಪವಿತ್ರ ಕ್ಷೇತ್ರಗಳು ಎನ್ನುತ್ತಾರೆ. ಇಂಥ ಪವಿತ್ರ ಕ್ಷೇತ್ರಗಳಿಗೆ ಬಂದು ಸಮರ್ಪಣಾ ಭಾವದಿಂದ ದೇವರೆದುರಿನಲ್ಲಿ ನಿಂದು ಕಣ್ತೆರೆದು ಅಲ್ಲಿ ಹೊರಸೂಸುವ ದಿವ್ಯತೆಯನ್ನು ಕಂಡು ಅನುಭವಿಸುವುದಕ್ಕೆ ಪೂರ್ವಜನ್ಮದ ಪುಣ್ಯ ಬೇಕು. ಹಾಗಿದ್ದಾಗ ಮಾತ್ರ ಅಲ್ಲಿ ಕವಿಯಾದವನಿಗೆ ಸಹೃದಯನಿಗೆ ಮಾತೃತ್ವದ ದರ್ಶನವಾಗುತ್ತದೆ.ಅದು ಮುಗಿಲಿನಷ್ಟು ವಿಶಾಲ, ಅಪಾರ. ಅದರ ಸತ್ಯಾಸತ್ಯತೆಯನ್ನು ಅಳೆಯಲೆತ್ನಿಸುವವನೇ ಪಾಮರ, ನಿರ್ಭಾಗ್ಯ.

ವಿಶ್ವಾಸೋ ಫಲದಾಯಕಃ ಇದನ್ನೇ Faith moves mountain ಎಂದು ಇಂಗ್ಲೀಷ್ ನಲ್ಲಿಯೂ ಹೇಳಿದ್ದಾರೆ.ದೇವರ ಎದುರಿಗೆ ಬರುವ ಭಕ್ತರ ದೇಹಗಳನ್ನು ಲೆಕ್ಕಮಾಡಬಹುದೇ ಹೊರತು ಅವರ ಭಕ್ತಿಯನ್ನಲ್ಲ;ಅದಕ್ಕಾಗಿಯೇ ಎಷ್ಟೊಂದು ಜನ ನಿತ್ಯ! ಎಂದಿದ್ದಾರೆ.ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ವಾರದಲ್ಲಿ 3-4 ದಿನ ನಡೆಯುವ “ದರ್ಶನ”ದ ಲಾಭವನ್ನು ಪಡೆಯುವದೆಂದರೆ ” ಕಪಿಲೆ‌ ಸುರಿಸುವ ತನ್ನ ಕೆಚ್ಚಲಿನ ಹಾಲನ್ನು ಕರು ತಾನೆ ಪೀರ್ವಂತೆ.” ಶತ ಶತಮಾನಗಳ ಹಿನ್ನೆಲೆ ಹೊಂದಿದ “ದರ್ಶನ” ದಲ್ಲಿ ಶ್ರೀ ವೀರಾಂಜನೇಯ ದೇವರು ಇಲ್ಲಿಯ ಅರ್ಚಕರ ಮನೆತನದವರ ಮೇಲೆ ಆಹ್ವಾನಿತನಾಗಿ, ಬಂದ ಭಕ್ತರ ಮೊರೆಯನ್ನು ಕೇಳಿ ಅದು,ಕೌಟುಂಬಿಕವಿರಲಿ, ವ್ಯಾಪಾರೋದ್ಯೋಗ,ಮಕ್ಕಳ ವಿಧ್ಯಾಭ್ಯಾಸ, ದಾಂಪತ್ಯ, ಸಂತಾನ, ಅಧಿಕಾರ, ಅಂತಸ್ತು, ಸ್ಥಾನಮಾನಗಳಿಗೆ ಸಂಬಂಧಿಸಿರಲಿ ಶಾರೀರಿಕ ಮಾನಸಿಕ ಸಮಸ್ಯೆಗಳಿರಲಿ ಅವುಗಳಿಗೆ ಸೂಕ್ತ ಪರಿಹಾರ ಅಭಯಗಳನ್ನು ನೀಡುವ ಆ ಪರಿಯನ್ನು ಅನುಭವಿಸಿಯೇ ಅರಿಯಬೇಕಾಗುತ್ತದೆ.ಬದುಕಿನ ಭವಣೆಯಲ್ಲಿ ಬೆಂದು ಬಸವಳಿದು ಇನ್ನೇನು ಬದುಕೇ ಬೇಡ ಎಂದೆನಿಸಿದವರೂ ಸಹ ಸನ್ನಿಧಿಯ ಬಳಿ ಬಂದು ಜೀವನ್ಮುಖಿಗಳಾಗಿದ್ದಾರೆ. ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂಬ ಹಂತಕ್ಕೆ ಹೋದ ರೋಗಿಯೊಬ್ಬ ತಾನಾಗಿಯೇ ಎದ್ದು ಮನೆಗೆ ಬಂದ ಅಚ್ಚರಿಯ ಉದಾಹರಣೆಗಳೂ ಇವೆ.

ಇಂಥ ಮಹಿಮಾ ತಾಣ ಶ್ರೀ ಕ್ಷೇತ್ರ ಬಂಗಾರಮಕ್ಕಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಹರಿಯುತ್ತಿರುವ ಪಾವನ ನದಿ ಶರಾವತಿಯ ಬಲ ದಂಡೆಯಲ್ಲಿ ಪಶ್ಚಿಮ ಘಟ್ಟದ ನಿಸರ್ಗ ರಮಣೀಯ ಗಿರಿಕಂದರಗಳ ಅಡಿಯಲ್ಲಿ ಜೋಗ ಜಲಪಾತದಿಂದ ಕೇವಲ 32 ಕಿ.ಮೀ.ಮತ್ತು ಹೊನ್ನಾವರದಿಂದ 35 ಕಿ.ಮೀ.ದೂರದಲ್ಲಿ ಬಿ.ಎಚ್.ರೋಡಿನಲ್ಲಿರುವ ಈ ಕ್ಷೇತ್ರ ಹನುಮ ಹುಟ್ಟಿದ ಊರಾಗಿತ್ತು ಎಂಬ ದಂಥಕತೆಯೂ ಇದೆ. ಅದೇನೇ ಇದ್ದರೂ “ಹನುಮಾನ್ ದಾಸ್ಯೇ” ಎಂಬಂತೆ ರಾಮಾಯಣದಲ್ಲಿ ಶ್ರೀ ರಾಮಚಂದ್ರನ ಸೇವೆಗಾಗಿಯೇ ತನ್ನ ಸರ್ವಸ್ವವನ್ನೂ ಮುಡಿಪಿಟ್ಟು ಶತ ಯೋಜನ ವಿಸ್ತೀರ್ಣವುಳ್ಳ ಸಾಗರವನ್ನೇ ಲಂಘಿಸಿ ಸೀತಾ ಸಂಶೋಧನೆಯಲ್ಲಿ ಜಯವನ್ನು ಸಾಧಿಸಿ ಉತ್ತರಾಭಿಮುಖಿಯಾಗಿ , ಗಧಾಪಾಣಿಯಾಗಿ ಇಲ್ಲಿ ನಿಂತ ಹನುಮಂತ ವಿಜಯ ಹಾಗೂ ಸಮೃದ್ಧಿಯ ಸಂಕೇತವೇ ಆಗಿರುತ್ತಾನೆ.ಅಣಿಮಾದಿ ಅಷ್ಟಸಿದ್ಧಿಗಳನ್ನು ಮೈಗೂಡಿಸಿಕೊಂಡ ನವವ್ಯಾಕರ್ಣ ಪಂಡಿತ, ಹನುಮಂತ ಕಲಿಯುಗದ ಬ್ರಹ್ಮನೂ ಆಗಿರುತ್ತಾನೆ. ಆರೋಗ್ಯದಾಯಕ, ಅಭಯದಾಯಕನಾದ ಈತ ಕಲಿಯುಗದ ಜಾಗ್ರತ ದೇವರಲ್ಲಿ ಒಬ್ಬ.ಶ್ರೀ ಮಾರುತಿಯ ಉಪಾಸಕರ ಕುಟುಂಬವೊಂದರಲ್ಲಿ ಜನಿಸಿದ ದಿ||ವೇದಮೂರ್ತಿ ಬ್ರಹ್ಮಶ್ರೀ ಗಣೇಶ ಭಟ್ಟರು ಇಲ್ಲಿಯ ಶ್ರೀ ವೀರಾಂಜನೇಯ ದೇವರ ಪ್ರತಿಷ್ಠಾಪನಾಚಾರ್ಯರು ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳ ಮಾರ್ಗದರ್ಶನದಂತೆ ಜಲಾಧಿವಾಸದಲ್ಲಿದ್ದ ಈ ಮೂರ್ತಿಯನ್ನು ತಂದು ಇಲ್ಲಿ ಸ್ಥಾಪಿಸಿದರು.

ಶ್ರೀ ಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೇಯ ದೇವರು ನಮಸ್ಕಾರ ಮುದ್ರೆಯಲ್ಲಿ ನಿಂತಿರುವ ಭಂಗಿಯಲ್ಲಿದೆ.ಗದೆಯನ್ನು ಕಾಲುಗಳ ನಡುವೆ ಸಿಕ್ಕಿಸಿ ಒಡೆಯನಾದ ಶ್ರೀ ರಾಮಚಂದ್ರನಿಗೆ ಶರಣಾಗತಿಯಾದ ರೀತಿಯಲ್ಲಿದೆ.

ವರದಿ:- ಎಮ್.ಎಸ್.ಶೋಭಿತ್ ಮೂಡ್ಕಣಿ