ಉತ್ತರ ಕರ್ನಾಟಕ ಎಂದ ತಕ್ಷಣ ಎಲ್ಲರೂ ಬಯಲುಸೀಮೆ ಹಾಗೂ ಬಿಸಿಲಿನ ಪ್ರದೇಶ ಎಂದು ಅಂದಾಜಿಸುವುದು ಸಾಮಾನ್ಯ. ಆದರೆ ಹೀಗೆ ಭಾವಿಸುವ ಜನ ಬೆಳಗಾವಿಯ ಗಡಿ ಪ್ರದೇಶದ ಅಂಬೋಲಿ ಘಾಟ್ ಗೆ ಒಮ್ಮೆ ಭೇಟಿ ನೀಡಿದರೆ ಖಂಡಿತ ಉತ್ತರ ಕರ್ನಾಟಕದ ಕುರಿತ ಅವರ ಅಭಿಪ್ರಾಯ ಬದಲಾಗುವುದರಲ್ಲಿ ಎರಡು ಮಾತಿಲ್ಲ.

ಝರಿಗಳ ರಾಣಿ:
ಕಾಮಧೇನು ಕರ್ನಾಟಕ ರಾಜ್ಯದಲ್ಲಿ ಝರಿಗಳಿಗೆ ಬರವಿಲ್ಲ. ಇಲ್ಲಿ ಜೋಗ ಜಲಪಾತದಿಂದ ಅಬೆ ಜಲಪಾತದ ವರೆಗೆ ಸುಪ್ರಸಿದ್ಧ ಹತ್ತು ಹಲವು ಜಲಪಾತಗಳಿವೆ. ಆದರೆ ಅಂಬೋಲಿ ಘಾಟ್ ಜಲಪಾತ ಇವೆಲ್ಲಕ್ಕಿಂತ ವಿಭಿನ್ನ ಹಾಗೂ ವಿಶಿಷ್ಟವಾದದ್ದು, ಕಾರಣ ಇಲ್ಲಿ ಕೇವಲ ಒಂದು ಜಲಪಾತವಲ್ಲ ಬದಲಾಗಿ ಈ ಬೆಟ್ಟ ಪ್ರದೇಶ ಹತ್ತಾರು ಜಲಪಾತಗಳಿಂದ ಸುತ್ತುವರಿದಿದೆ. ಅಂಭೋಲಿ ಘಾಟ್ ಪ್ರವೇಶಿಸಿ ಹಾಗೆ ಮುಂದೆ ಸಾಗಿದರೆ ನಮಗೆ ಸುಮಾರು 10 ಕಿಮೀ ಪ್ರದೇಶದ ಸುತ್ತ ಎಲ್ಲೆಲ್ಲೂ ಬೆಟ್ಟದಿಂದ ಜಿನುಗಿ ಹರಿಯುವ ಝರಿ ಕಾಣಿಸುತ್ತದೆ. ಹೀಗಾಗಿ ಈ ಪ್ರದೇಶವನ್ನ ಝರಿಗಳ ರಾಣಿ ಎಂದು ಕರೆಯಲಾಗುತ್ತದೆ.

ಗಡಿಭಾಗದ ಕಣಿವೆ ಪ್ರದೇಶ:
ಅಂಬೋಲಿ ಘಾಟ್ ಬೆಟ್ಟ ಪ್ರದೇಶ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿಭಾಗವನ್ನು ಒಳಗೊಂಡಿದೆ. ಬೆಳಗಾವಿ ಕೇಂದ್ರದಿಂದ 60 ಕಿಮೀ ದೂರವಿರುವ ಈ ಭಾಗ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಾಗಿದೆ. ಹೀಗಾಗಿ ಅಂತಾರಾಜ್ಯ ಬಸ್ ಸಂಚಾರಕ್ಕೆ ಇದೇ ಪ್ರಧಾನ ರಸ್ತೆ ಮಾರ್ಗವಾಗಿದೆ. ಆದರೆ ಇಲ್ಲಿ ಬೆಟ್ಟ ಪ್ರದೇಶಗಳು ವಿಪರೀತವಾಗಿದ್ದು ಅಲ್ಲಿಲ್ಲಿ ಬೆಟ್ಟಗಳನ್ನು ಕೊರೆದು ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿ ವಾಹನದಲ್ಲಿ ಸಂಚರಿಸುವುದೇ ಒಂದು ವಿವರಿಸಲಾಗದ ಅನುಭವ.

ಪಶ್ಚಿಮಘಟ್ಟದ ಪರ್ವತಶ್ರೇಣಿ:
ನರ್ಮದಾ ನದಿ ತೀರದಿಂದ ಆರಂಭವಾಗುವ ಪಶ್ಚಿಮ ಘಟ್ಟದ ಪರ್ವತಶ್ರೇಣಿ ಕರ್ನಾಟಕಕ್ಕೆ ಪ್ರವೇಶಿಸುವುದು ಬೆಳಗಾವಿಯ ಅಂಬೋಲಿ ಘಾಟ್ ಪ್ರದೇಶದಲ್ಲೆ. ಇಲ್ಲಿಂದ ಪಶ್ಚಿಮಘಟ್ಟ ತಮಿಳುನಾಡಿನ ನೀಲಗಿರಿ ಪರ್ವತಶ್ರೇಣಿಗಳ ವರೆಗೆ ಸುಮಾರು ನೂರಾರು ಕಿಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಹೀಗಾಗಿ ಇಲ್ಲಿ ಎಲ್ಲಿ ನೋಡಿದರೂ ಬರೀ ತಂಪೆರೆಯುವ ಹಸಿರಿನ ವಾತಾವರಣ ಎಲ್ಲರ ಕಣ್ಮಣ ಸೆಳೆಯುತ್ತದೆ.

ಪ್ರವಾಸಿಗರ ನೆಚ್ಚಿನ ತಾಣ:
ಪ್ರಕೃತಿ ಪ್ರವಾಸಿಗರ ನೆಚ್ಚಿನ ತಾಣ ಎಂದರೆ ಅದು ಅಂಬೋಲಿ ಘಾಟ್. ಸಾಮಾನ್ಯವಾಗಿ ಮಹಾರಾಷ್ಟ್ರ ಹಾಗೂ ಗೋವಾದಿಂದ ಇಲ್ಲಿಗೆ ಬರುವ ಪ್ರವಾಸಿಗಳ ಸಂಖ್ಯೆ ಅಧಿಕ. ಇಲ್ಲಿಗೆ ಆಗಮಿಸುವ ಪ್ರವಾಸಿಗಳಿಗೆ ಹೋಮ್ ಸ್ಟೇ ಹಾಗೂ ಹೋಟೆಲ್ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ. ಅಲ್ಲದೆ ರಾಜ್ಯದ ಪ್ರವಾಸಿಗರು ಬೆಳಗಾವಿಯಲ್ಲೇ ಉಳಿದು ಅಲ್ಲಿಂದ ತಮ್ಮ ವಾಹನಗಳಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ಆಗಮಿಸುವ ಪ್ರವಾಸಿಗಳು ಇಲ್ಲಿ ರಸ್ತೆಯಲ್ಲಿ ನಡೆಯುತ್ತ ಝರಿಯಲ್ಲಿ ನೆನೆಯುತ್ತಲೇ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದು ಸಾಮಾನ್ಯ.

108 ಶಿವದೇವಾಲಯ:
ಅಂಬೋಲಿ ಘಾಟ್ ಸುತ್ತಲ ಪ್ರದೇಶದಲ್ಲಿ ಅಸಂಖ್ಯಾತ ಗುಹೆಗಳಿದ್ದು 108 ಪ್ರಾಚೀನ ಶಿವ ದೇವಾಲಯಗಳಿವೆ. ಆದರೆ ಇದು ದಟ್ಟ ಅರಣ್ಯ ಪ್ರದೇಶವಾದ ಕಾರಣ ಎಲ್ಲಾ ದೇವಾಲಯಗಳೂ ಪ್ರವಾಸಿಗರಿಗೆ ಸುರಕ್ಷಿತವಲ್ಲದ ಕಾರಣ ಸರ್ಕಾರ 2005 ರಿಂದ 12 ದೇವಾಲಯಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಹಿರಣ್ಯಕೇಶಿ ನದಿ:
ಇಲ್ಲಿನ ಹಿರಣ್ಯ ಕೇಶಿ ನದಿಯೂ ಪ್ರಾಚೀನ ನದಿಯಾಗಿದ್ದು ಈ ನದಿಯ ಜತೆಗೆ ಹತ್ತು ಹಲವಾರು ಪುರಾತನ ಕಥೆಗಳನ್ನು ಹೆಣೆಯಲಾಗಿದೆ. ಈ ನದಿ ಇಡೀ ಬೆಟ್ಟ ಪ್ರದೇಶದ ಸುತ್ತ ಹರಿದು ಪ್ರವಾಸಿಗರ ಕಣ್ಮಣ ಸೆಳೆಯುತ್ತದೆ. ಅಲ್ಲದೆ ಸ್ಥಳೀಯ ಗ್ರಾಮಗಳಿಗೆ ಕೃಷಿ ಹಾಗೂ ಕುಡಿಯಲು ಇದು ಪ್ರಮುಖ ಆಧಾರವಾಗಿದೆ.

ಅನನ್ಯ ಸಂಪನ್ಮೂಲಗಳ ತಾಣ:
ಅಂಬೋಲಿ ಘಾಟ್ ಪಶ್ಚಿಮ ಘಟ್ಟಗಳ ಪರ್ವತಶ್ರೇಣಿಯಾದ ಕಾರಣ ಇಲ್ಲಿ ಅಪಾರವಾದ ಸಸ್ಯ ಹಾಗೂ ಪ್ರಾಣಿ ಸಂಪನ್ಮೂಲಗಳಿಗೂ ಕೊರತೆಯಿಲ್ಲ. ಈ ಪ್ರದೇಶವು ಮೂರು ರಾಜ್ಯಗಳ ಸುತ್ತ ಸುತ್ತುವರಿರುವ ಕಾರಣ ಮೂರೂ ರಾಜ್ಯಗಳು ಈ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶದ ಸಾಲಿಗೆ ಸೇರಿಸಿದ್ದು, ಇಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ.

ಮಳೆಗಾಳಕ್ಕೆ ಸೂಕ್ತ ಪ್ರವಾಸಿತಾಣ:
ಉತ್ತರ ಕರ್ನಾಟದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ತಾಣಗಳಲ್ಲಿ ಅಂಬೋಲಿ ಘಾಟ್ ಸಹ ಒಂದು..ಜೂನ್ ತಿಂಗಳ ಮಾನ್ಸೂನ್ ಆರಂಭಕ್ಕೆ ಇಲ್ಲಿ ಸರಿಯಾಗಿ ಮಳೆಯಾಗುತ್ತದೆ. ಈ ಅವಧಿಯಲ್ಲಿ ಇಡೀ ಬೆಟ್ಟದ ಸುತ್ತಲೂ ಝರಿಗಳು ತುಂಬಿ ಹರಿಯುತ್ತದೆ. ಇದನ್ನು ನೋಡಲು ಎರಡು ಕಣ್ಣುಗಳೂ ಸಾಲದು..ಹೀಗಾಗಿ ಜೂನ್ ಜುಲೈ ತಿಂಗಳಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗಳ ಸಂಖ್ಯೆ ಅಧಿಕ.