ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದ ‘ಬಾಹುಬಲಿ’ ಸರಣಿ ಚಿತ್ರಗಳ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರ ಯಾವುದೆಂಬ ಸಿನಿ ವೀಕ್ಷಕರ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.

RRR# ಎಂದು ಹೆಸರಿಡಲಾಗಿರುವ ಈ ಚಿತ್ರದಲ್ಲಿ ಖ್ಯಾತ ನಟರುಗಳಾದ ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾ ಅಭಿನಯಿಸಲಿದ್ದು, ನಾಯಕಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗಿದ್ದರೂ ಅದಿನ್ನೂ ಅಧಿಕೃತವಾಗಿಲ್ಲ.

ಇದರ ಮಧ್ಯೆ ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾ ಚಿತ್ರದ ಫೋಟೋ ಶೂಟ್ ಗಾಗಿ ಲಾಸ್ ಏಂಜೆಲೀಸ್ ಗೆ ತೆರಳಿದ್ದರೆನ್ನಲಾಗುತ್ತಿದ್ದು, ಬಳಿಕ ಮಾತನಾಡಿರುವ ರಾಮ್ ಚರಣ್ ತೇಜಾ, ತಾವು ಚಿತ್ರದ ಕಥೆಯನ್ನು ಕೇಳದೆ ಇದನ್ನು ಒಪ್ಪಿಕೊಂಡಿದ್ದೇನೆ. ರಾಜಮೌಳಿಯವರ ಮೇಲಿನ ನಂಬಿಕೆಯೇ ಇದಕ್ಕೆ ಕಾರಣವೆಂದು ಹೇಳಿದ್ದಾರಲ್ಲದೇ ಶೀಘ್ರದಲ್ಲೇ ರಾಜಮೌಳಿ ಸ್ಕ್ರಿಪ್ಟ್ ನೀಡಲಿದ್ದಾರೆಂದು ತಿಳಿಸಿದ್ದಾರೆ.

RRR# ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದ್ದರೂ ಮುಂದೆ ಬದಲಾಯಿಸಲಾಗುತ್ತದೆ ಎನ್ನಲಾಗಿದೆ. ಚಿತ್ರದ ಬಜೆಟ್ ‘ಬಾಹುಬಲಿ’ ಯಷ್ಟವಲ್ಲಾದರೂ ಅದ್ದೂರಿತನಕ್ಕೆ ಯಾವುದೇ ಕೊರತೆಯಿಲ್ಲವೆನ್ನಲಾಗಿದೆ.