ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು 1908ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಪಟೇಲ್ ಹೊನ್ನಪ್ಪ ಮತ್ತು ಗಂಗಮ್ಮ ನವರ ಮಗನಾಗಿ ಜನಿಸಿದರು. ವೀರಾಪುರ ಮತ್ತು ನಾಗವಲ್ಲಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪಿಯುಸಿ ಮತ್ತು ಡಿಗ್ರಿ ಪದವಿ ಪಡೆದ ಕಾಲಜ್ಞಾನಿ ಶ್ರೀ ಉದ್ಧಾನ ಶಿವಯೋಗಿ ಸ್ವಾಮಿಗಳಿಂದ 1930ರಲ್ಲಿ ದೀಕ್ಷೆ ಸ್ವೀಕರಿಸಿ 1941ರಲ್ಲಿ ಮಠಾಧಿಪತಿಗಳಾದರು. ಜನಾನುರಾಗಿ ಭಾವನೆ, ಬಡವರ ಮೇಲೆ ಅನುಕಂಪ, ಶಿಸ್ತಿನ ಜೀವನ, ಮಾನವೀಯ ಗುಣಗಳಿಂದ ಪ್ರಸಿದ್ಧಿ ಪಡೆದವರು. 128 ಶಾಲಾ ಕೇಂದ್ರಗಳನ್ನು ಹೊಂದಿರೋ ಮಠದಲ್ಲಿ ಈಗಲೂ 10 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ನಸುಕಿನ ಜಾವ 2 ಗಂಟೆಗೆ ಏಳುವ ಶ್ರೀಗಳು ಸ್ನಾನ, ಶಿವಪೂಜೆ ಮುಗಿಸಿ ಬೆಳಗಿನ ಜಾವ 5.30 ರಿಂದ 6ರ ವೇಳೆಗೆ ಕಚೇರಿಗೆ ಬರ್ತಾರೆ. ರಾತ್ರಿ 9.30 ರವರೆಗೂ ಒಂದಲ್ಲೊಂದು ಕಾರ್ಯದಲ್ಲಿ ತೊಡಗಿ ರಾತ್ರಿ 11 ಗಂಟೆ ವೇಳೆಗೆ ನಿದ್ರೆಗೆ ಜಾರಿ ಆರೋಗ್ಯವನ್ನ ಕಾಪಾಡಿಕೊಂಡು ಬಂದಿದ್ದಾರೆ. ಶ್ರೀಗಳ 111ನೇ ಹುಟ್ಟುಹಬ್ಬದ ಅಂಗವಾಗಿ ನಗರದಾದ್ಯಂತ ಶುಭಾಶಯದ ಬ್ಯಾನರ್ ಹಾಗೂ ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ. ಮಠಕ್ಕೆ ಬಕ್ತರಿಗೆ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷ ಭಕ್ತರಿಗೆ ಆಗುವಷ್ಟು ಪಾಯಸ, 250 ಕ್ವಿಂಟಲ್ ಬೂಂದಿ, ಚಿತ್ರಾನ್ನ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು. ಮಠದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಶಾಂತಿಗೆ ಭಂಗವಾಗಬಾರದು ಎಂಬ ಉದ್ದೇಶದಿಂದ ಭಕ್ತಾದಿಗಳು 10 ಗಂಟೆಯ ನಂತರ ಮಠಕ್ಕೆ ಆಗಮಿಸಿ ಶುಭ ಕೋರುವಂತೆ ಕಿರಿಯ ಸಿದ್ದಲಿಂಗಶ್ರೀಗಳು ಮನವಿ ಮಾಡಿದರು.

ಶ್ರಿಗಳ ಹೆಜ್ಜೆ ಗುರುತು:

1908: ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಹೊನ್ನಪ್ಪ , ಗಂಗಮ್ಮ ದಂಪತಿ ಪುತ್ರರತ್ನರಾಗಿ ಜನನ.
1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆ.
1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ.
1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ.
1941: ಜ.11ರಂದು ಶ್ರೀಉದ್ಧಾನ ಶಿವಯೋಗಿ ಸ್ವಾಮೀಜಿ ಲಿಂಗೈಕ್ಯ, ಮಠಾಧ್ಯಕ್ಷರಾಗಿ ಶಿವಕುಮಾರ ಸ್ವಾಮೀಜಿ ಅಧಿಕಾರ ಸ್ವೀಕಾರ.
1949: ಜೂ.18ರಂದು ಶ್ರೀಸಿದ್ಧಲಿಂಗೇಶ್ವರರ ಸಂಸ್ಕೃತ ಮತ್ತು ವೇದಪಾಠಶಾಲೆ ರಜತೋತ್ಸವ.
1950: ಧರ್ಮಸ್ಥಳದ ಶ್ರೀಮಂಜಯ್ಯ ಹೆಗ್ಗಡೆಯವರಿಂದ ಮಹಾ ನಡಾವಳಿ ಉತ್ಸವದಲ್ಲಿ ಗೌರವ ಸ್ವೀಕಾರ.
1956: ಶ್ರೀಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡ ನಿರ್ಮಾಣ.
1960: ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.
1962: ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆ.
1963: ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ.
1965: ನ.6 ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ.
1970: ಡಿ.27 ಬೆಂಗಳೂರಿನಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ.
1972: ಮೇ 26 ಶ್ರೀಮಠದ ಪೀಠಾಧಿಕಾರ ಸ್ವೀಕಾರದ ರಜತ ಮಹೋತ್ಸವ.
ಮೇ.28 ಉಚಿತ ವಿದ್ಯಾರ್ಥಿ ನಿಲಯ ಮತ್ತು ಸಂಸ್ಕೃತ ಕಾಲೇಜಿನ ಸುವರ್ಣ ಮಹೋತ್ಸವ.
1982: ಏ.24 ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಸ್.ಗುಂಡೂರಾವ್ ಅವರಿಂದ ಸುವರ್ಣಮಹೋತ್ಸವ ನೆನಪಿಗಾಗಿ ಗೌರವ ಗ್ರಂಥ `ಸಿದ್ಧಗಂಗಾಶ್ರೀ’ ಬಿಡುಗಡೆ,
ಶ್ರೀಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ.
1984: ನೆಲಮಂಗಲದಲ್ಲಿ ಶ್ರೀಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ, ಶ್ರೀಸಿದ್ಧಗಂಗಾ ಫಾರ್ಮಸಿ ಕಾಲೇಜು ಸ್ಥಾಪನೆ
1987: ಏ.20 ಹುಬ್ಬಳ್ಳಿ 3 ಸಾವಿರ ಮಠದ ಜಗದ್ಗುರು ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿ ರಜತ ಮಹೋತ್ಸವದ ಅಧ್ಯಕ್ಷತೆ.
1988: ಮಾ.30 ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಸ್ವಾಮೀಜಿ ನೇಮಕ.
1992: ಫೆ.16 ಶ್ರೀಗಳ ವಜ್ರ ಮಹೋತ್ಸವ ಸ್ಮಾರಕ ಕಟ್ಟಡಗಳ ಶಿಲಾನ್ಯಾಸ ಅಂದಿನ ಉಪರಾಷ್ಟ್ರಪತಿ ಡಾ.ಶಂಕರ್ ದಯಾಳ್ ಶರ್ಮ ಅವರಿಂದ ಸಿದ್ಧಗಂಗಾ ನರ್ಸಿಂಗ್ ಕಾಲೇಜು ಸ್ಥಾಪನೆ.
1995: ಫೆ.2 ಸಿದ್ಧಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.
1997: ಮಾ.22 ಶ್ರೀಗಳ ವಜ್ರಮಹೋತ್ಸವ ಬೃಹತ್ ವಿದ್ಯಾರ್ಥಿನಿಲಯ, ಪ್ರಸಾದ ನಿಲಯ ಹಾಗೂ ದಾಸೋಹ ಸಿರಿ ಗ್ರಂಥ ಸಮರ್ಪಣೆ.
2000-05: ಜ.30 ಪ್ರಧಾನಿ ವಾಜಪೇಯಿ ಅವರಿಂದ ಸಂಸ್ಕೃತ ಕಾಲೇಜು, ಅಮೃತ ಮಹೋತ್ಸವ ಉದ್ಘಾಟನೆ. ಅಂಧ ಮಕ್ಕಳಿಗೆ ನೂತನ ಶಾಲಾ ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ.
2005: ಏ.24 ಶ್ರೀಗಳ 98ನೇ ಜನ್ಮದಿನೋತ್ಸವ ಸಮಾರಂಭ, ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಭಾಗಿ.
ಏ.25 75ನೇ ಪೀಠಾರೋಹಣ(ಅಮೃತ ಮಹೋತ್ಸವ) ಸಮಾರಂಭ ಗೃಹಸಚಿವ ಶಿವರಾಜ್ ಪಾಟೀಲ್, ಸಿಎಂ ಧರಂಸಿಂಗ್ ಭಾಗಿ.
2006:ಏ.7 ಶ್ರೀಗಳ ಗುರುವಂದನಾ ಕಾರ್ಯಕ್ರಮ ರಾಷ್ಟ್ರಪತಿ ಎಪಿಜೆ ಅಬ್ಬುಲ್ ಕಲಾಂ, ರಾಜ್ಯಪಾಲ ಚತುರ್ವೇದಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧ್ಯಕ್ಷರು ಭಾಗವಹಿಸಿದ್ದರು.
2007: ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ, ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ
2012: ಗುರುವಂದನಾ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗಿ.
2013: ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.
2014: ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ
2015: ಜುಲೈನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ..
ಈಗ ಲಕ್ಷಾಂತರ ಮಂದಿ ಬಕ್ತರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಏನೇಂದರೆ ಈ ಮಹಾನ್ ಚೇತನಕ್ಕೆ ಈಗಲಾದರೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸ ಬೇಕು ಎಂದು..