ಜಮ್ಮು ಮತ್ತು ಕಾಶ್ಮೀರದ ಉದಂಪುರ್‌ ಜಿಲ್ಲೆಯಲ್ಲಿರುವ ಪತ್ನಿಟಾಪ್ ಮನಮೋಹಕವಾದ ಹಿಲ್‌ ರೆಸಾರ್ಟ್‌ನಿಂದಾಗಿ ಗಮನ ಸೆಳೆಯುತ್ತದೆ. ಮೊದಲು ‘ಪತನ್‌ ಡಾ ತಲಾಬ್‌’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಸ್ಥಳವನ್ನು ಬಳಿಕ ಪತ್ನೀಟಾಪ್‌ ಎಂದು ಕರೆಯಲು ಪ್ರಾರಂಭಿಸಿದರು. ಪತನ್ ಕಾ ತಲಾಬ್‌ ಅಂದರೆ ‘ರಾಜಕುಮಾರಿಯ ಕೊಳ’ ಎಂದು ಅರ್ಥೈಸಿಕೊಳ್ಳಬಹುದು.  ಸಮುದ್ರ ಮಟ್ಟದಿಂದ 2024 ಮೀಟರ್ ಎತ್ತರದಲ್ಲಿರುವ ಈ ಸ್ಥಳ ದಟ್ಟವಾದ ದೇವದಾರು ಕಾಡು, ಪರ್ವತಗಳಿಂದ ಕೂಡಿದ್ದು, ಅಚ್ಚರಿಯಿಂದ ಉಸಿರುಗಟ್ಟಿಸುತ್ತದೆ. ಚಾಲ್ತಿಯಲ್ಲಿರುವ ದಂತಕಥೆಯೊಂದರ ಪ್ರಕಾರ, ಅಲ್ಲಿನ ರಾಜಕುಮಾರಿ ಈ ಕೊಳವನ್ನು ಸ್ನಾನಕ್ಕಾಗಿ ಬಳಸುತ್ತಿದ್ದಳು. ವಿಹಾರಕ್ಕೆ ಉತ್ತಮ ವಾತಾವರಣವನ್ನು ಹೊಂದಿರುವ ಈ ಪ್ರದೇಶದಲ್ಲಿ ಮೂರು ಸಿಹಿನೀರಿನ ಬುಗ್ಗೆಗಳಿವೆ. ಇಲ್ಲಿಂದ ಲಭ್ಯವಾಗುವ ನೀರಿನಲ್ಲಿ ಹೇರಳವಾದ ಔಷಧೀಯ ಗುಣವಿದೆ ಎಂದು ನಂಬಲಾಗಿದೆ.   ಚಳಿಗಾಲದಲ್ಲಿ ಪ್ರವಾಸಕ್ಕೆಂದು ಇಲ್ಲಿಗೆ ಬಂದರೆ ಸ್ಕೀಯಿಂಗ್‌, ಟ್ರೆಕ್ಕಿಂಗ್‌ಗೆ ಉತ್ತಮವಾಗಿರುತ್ತದೆ ವಾತಾವರಣ. ಇದರ ಜತೆಯಲ್ಲಿ ಏರೋಕ್ರೀಡೆಗಳು, ಗಾಲ್ಫ್‌, ಕುದುರೆ ಸವಾರಿ, ಪ್ಯಾರಾಗ್ಲೈಂಡಿಂಗ್ ಗೂ ಇಲ್ಲಿ ಸಾಕಷ್ಟು ಅವಕಾಶವಿದೆ. ಛಾಯಾಗ್ರಹಣದಲ್ಲಿ ಆಸಕ್ತಯುಳ್ಳವರು ನೀವಾಗಿದ್ದರೆ, ನಿಮಗಿದು ಸ್ವರ್ಗಸದೃಶ! ಇವೆಲ್ಲವುಗಳ ಜತೆ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಅಪರೂಪದ ಪ್ರವಾಸೀ ತಾಣಗಳು ಇಲ್ಲಿವೆ. ಅವುಗಳೆಂದರೆ, ಸರ್ಪ ದೇವಾಲಯ, ಬುದ್ಧ ಅಮರನಾಥ್ ದೇವಾಲಯ, ಬಹು ಫೋರ್ಟ್, ಇವುಗಳ ಜತೆ ಶುಧ್‌ ಮಹಾದೇವ್‌, ಗೌರಿಕುಂಡ, ಕುಡ ಮತ್ತು ಶಿವಘರ್ ನಂತಹ ಪವಿತ್ರ ಸ್ಥಳಗಳು ಇಲ್ಲಿವೆ. ಇನ್ನುಳಿದಂತೆ ಹೇಳುವುದಾದರೆ ಇಲ್ಲಿಗೆ ರೈಲು ಮತ್ತು ವಿಮಾನ ಸಂಪರ್ಕ ಇಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರಗಳ ಮೂಲಕ ರಸ್ತೆ ಸಾರಿಗೆಯ ಮೂಲಕ ಸುಲಭವಾಗಿ ಪತ್ನಿಟಾಪ್‌ಗೆ ಬರಬಹುದು. ಜಮ್ಮುವಿನ ವಿಮಾನ ಮತ್ತು ರೈಲು ನಿಲ್ದಾಣದಿಂದ ಪತ್ನಿಟಾಪ್‌ಗೆ ಹೇರಳವಾಗಿ ಸಾರಿಗೆ ಸೌಲಭ್ಯವಿದೆ. ವರ್ಷದ ಯಾವುದೇ ದಿನಗಳಲ್ಲಿ ಇಲ್ಲಿಗೆ ಆಗಮಿಸಬಹುದಾದರೂ, ಮೇ ಯಿಂದ ಸೆಪ್ಟೆಂಬರ್‌ ವರರೆಗೆ ಇಲ್ಲಿಗೆ ಆಗಮಿಸಲು ಹೆಚ್ಚು ಸೂಕ್ತವಾಗಿದೆ. ಡಿಸೆಂಬರಿನಿಂದ ಪೆಭ್ರುವರಿ ವರೆಗೆ ಸ್ಕೀಯಿಂಗ್‌, ಟ್ರೆಕ್ಕಿಂಗ್‌ ಕೈಗೊಳ್ಳಲು ವಾತಾವರಣ ಸೂಕ್ತವಾಗಿರುತ್ತದೆ. ಯಾವಾಗ ಬರಬೇಕೆಂಬ ಆಯ್ಕೆ ನಿಮಗೆ ಬಿಟ್ಟದ್ದು.