ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಮೊದಲಾದವು ಪವಿತ್ರ ಕ್ಷೇತ್ರಗಳಾಗಿದ್ದು, ಹೃಷಿಕೇಶವು ಈ ಸ್ಥಳಗಳಿಗೆ ತಲುಪುವ ಪ್ರವೇಶ ದ್ವಾರದಂತಿದೆ.

ಶಿವಾಲಿಕ್ ಪರ್ವತ ಶ್ರೇಣಿಯಲ್ಲಿರುವ ಹರಿದ್ವಾರ ಗಂಗಾ ನದಿ ದಂಡೆಯ ಮೇಲಿದೆ. ದೇಶದ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಹರಿದ್ವಾರ ಒಂದಾಗಿದೆ.

ಹರಿದ್ವಾರದ ಬಿಲ್ವಾ ಪರ್ವತದ ಮೇಲಿನ ಮಾನಸದೇವಿ ಮಂದಿರ ಪ್ರಮುಖ ಸ್ಥಳ. ಮೆಟ್ಟಿಲು ಮತ್ತು ರೋಪ್ ವೇ ಟ್ರಾಲಿಯ ಮೂಲಕ ಬೆಟ್ಟಕ್ಕೆ ತೆರಳಬಹುದು. ಬೆಟ್ಟದ ಮೇಲಿನ ದೇವಾಲಯ ಬಳಿ ನಿಂತು ಗಂಗಾ ನದಿ ಮತ್ತು ಹರಿದ್ವಾರದ ವಿಹಂಗಮ ದೃಶ್ಯ ಕಣ್ತುಂಬಿಕೊಳ್ಳಬಹುದಾಗಿದೆ.

ಹರಿದ್ವಾರದ ಪ್ರಮುಖ ಸ್ನಾನಘಟ್ಟವೇ ಹರ್ ಕೀ ಪೈಡಿ. ಗಂಗಾ ಮಂದಿರ, ಹರಿಚರಣ ಮಂದಿರ, ಬಿರ್ಲಾ ಟವರ್ ಇಲ್ಲಿನ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಾಗಿವೆ. ಹರಿದ್ವಾರದಿಂದ 6 ಕಿಲೋ ಮೀಟರ್ ದೂರದಲ್ಲಿ ಶಿವಾಲಿಕ್ ಪರ್ವತಗಳ ನಡುವೆ ಚೀಲಾ ಎಂಬ ರಮಣೀಯ ಸ್ಥಳವಿದೆ. ಪ್ರವಾಸೋದ್ಯಮ ಇಲಾಖೆಯ ತಂಗುದಾಣ ಇಲ್ಲಿದ್ದು, ಪ್ರವಾಸಿಗರು ಉಳಿಯಲು ವ್ಯವಸ್ಥೆ ಇದೆ. ಚೀಲಾ ರಾಜಾಜಿ ರಾಷ್ಟ್ರೀಯ ಉದ್ಯಾನ, ನೀಲ್ ಧಾರಾ ಸಫಾರಿಯಲ್ಲಿ ಅಪರೂಪದ ಪಕ್ಷಿಗಳನ್ನು ನೋಡಬಹುದು.

ಸ್ವಾಮಿ ಶ್ರದ್ಧಾನಂದರು ಸ್ಥಾಪಿಸಿದ್ದ ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ, ಸಪ್ತ ಸರೋವರ, ಪ್ರಮುಖ ಕೈಗಾರಿಕೆಗಳಲ್ಲಿ ಒಂದಾದ ಬಿ.ಹೆಚ್.ಇ.ಎಲ್., ಶಾಂತಿಕುಂಜ್, ಪವನಧಾಮ, ಮೊದಲಾದ ಸ್ಥಳಗಳನ್ನು ನೋಡಬಹುದು.

ಹರಿದ್ವಾರದಲ್ಲಿ ರುದ್ರಾಕ್ಷಿ, ಬಿದಿರು ಕರಕುಶಲ ವಸ್ತುಗಳು, ಉಡುಪು ಮೊದಲಾದ ವಸ್ತುಗಳನ್ನು ಖರೀದಿಸಬಹುದು. ವಿವಿಧೆಡೆಯಿಂದ ರೈಲು ಸಂಪರ್ಕವಿದೆ. ಹರಿದ್ವಾರ ಪ್ರವಾಸ ಕೈಗೊಳ್ಳಲು ಸೆಪ್ಟಂಬರ್ ನಿಂದ ಮೇ ತಿಂಗಳು ಸೂಕ್ತವಾದ ಸಮುಯವಾಗಿದೆ. ನೀವೂ ಒಮ್ಮೆ ದಿ ಗೇಟ್ ವೇ ಟು ಗಾಡ್ಸ್ ಎಂದೇ ಕರೆಯಲ್ಪಡುವ ಹರಿದ್ವಾರ ಹಾಗೂ ಸುತ್ತಲಿನ ಪ್ರದೇಶಗಳನ್ನು ನೋಡಿಬನ್ನಿ.