ಗೇರುಸೊಪ್ಪೆಯ ವೀರರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ!
ದಟ್ಟಡವಿಯ ನಡುವಿನ ದುರ್ಗಮ ಶಿಖರದ ನೆತ್ತಿಯಲ್ಲಿ
ಮಾನವ ನಿರ್ಮಿಸಿದ ಮಹದಚ್ಚರಿ!!
ಪೋರ್ಚುಗೀಸ್ ಯೋಧರ ನೆತ್ತಿಯಮೇಲೆ
ಉರುಳುಗಲ್ಲುರುಳಿಸಿದ ವೀರಮಹಿಳೆಯ ಶಕ್ತಿಕೇಂದ್ರ!!!
ಪೋರ್ಚುಗೀಸರಿಂದ ‘ರೈನಾ ದ ಪಿಮೆಂಟಾ’ ಅಥವಾ ಪೆಪ್ಪರ್ ಕ್ವೀನ್ ಎಂದು ಕರೆಸಿಕೊಂಡ,೧೫೫೨ರಿಂದ ೧೬೦೬ರವರೆಗೆ ಐವತ್ನಾಲ್ಕು ವರ್ಷಗಳ ಕಾಲ ಹೈವ,ತುಳುವ,ಕೊಂಕಣ ಪ್ರದೇಶಗಳನ್ನು ಗೇರುಸೊಪ್ಪೆಯನ್ನು ಕೇಂದ್ರವಾಗಿಟ್ಟುಕೊಂಡು ಆಳಿದ ವೀರ ರಾಣಿ ಚೆನ್ನಭೈರಾದೇವಿಯ ಕೋಟೆಯೇ ಕಾನೂರು ಕೋಟೆ. ಗೇರುಸೊಪ್ಪೆ ಆಕೆಯ ರಾಜಧಾನಿಯಾಗಿದ್ದು ಅದು ಸುಸಜ್ಜಿತನಗರವಾಗಿದ್ದರೂ ಅದು ಸುರಕ್ಷಿತವೆಂದು ಹೇಳಲಾಗದಾಗಿತ್ತು.ಅದರಲ್ಲೂ ಕುತಂತ್ರಕ್ಕೆ ಹೆಸರಾದ ಪೋರ್ಚುಗೀಸರು ಕೇವಲ ಯುದ್ದವೊಂದೇ ಅಲ್ಲ,ಹಗಲು ದರೋಡೆಗೂ ಹೇಸದವರೆಂಬುದು ಈ ಚತುರ ರಾಣಿಗೆ ತಿಳಿದಿತ್ತು.ಹಾಗಾಗಿ ಆಕೆ ಹೆಸರಿಗೆ ರಾಜಧಾನಿ ಗೇರುಸೊಪ್ಪೆಯೇ ಆಗಿದ್ದರೂ ತನ್ನ ಗುಪ್ತ ಧನ,ಗುಪ್ತ ದಳ ಮತ್ತು ಆಪತ್ತಿನ ಸಂದರ್ಭದಲ್ಲಿ ತನ್ನ ರಹಸ್ಯ ವಾಸ್ತವ್ಯಕ್ಕೆ ಆಯ್ದುಕೊಂಡದ್ದು ಕಾನೂರು ಕೋಟೆಯನ್ನು. ಮೂರು ದಿಕ್ಕಿನಲ್ಲಿ ಸಾವಿರ ಅಡಿಗಳಿಗೂ ಆಳವಾದ ಕಣಿವೆಯನ್ನು ಹೊಂದಿರುವ,ಕಡಿದಾದ ಶಿಖರದೆತ್ತರದಲ್ಲಿ ಅತಿ ಸುರಕ್ಷಿತವಾಗಿರುವ ( ಚಿತ್ರ ಒಂದು ಮತ್ತು ಎರಡರಲ್ಲಿ ಕಾನೂರು ಕೋಟೆ ಎಂತಹ ಕಡಿದಾದ ಶಿಖರದ ತುದಿಯಲ್ಲಿ ಇದೆ ಎಂಬುದನ್ನು ಗಮನಿಸಿ) ಕಾನೂರು ಕೋಟೆ ಅಬೇಧ್ಯವೆಂಬುದು ಆಕೆಗೆ ತಿಳಿದಿತ್ತು.ಹಾಗಾಗಿಯೇ1559ರಲ್ಲಿ ಗೋವಾದಿಂದ ೧೧೩ ನಾವೆ ಮತ್ತು ೨೫೦೦ ಯೋಧರೊಂದಿಗೆ ಹೊನ್ನಾವರವನ್ನು ಆಕ್ರಮಿಸಿಕೊಂಡು ಅದನ್ನು ಸುಟ್ಟು ಹಾಕಿದ ಪೋರ್ಚುಗೀಸ್ ಕ್ಯಾಪ್ಟನ್ ಲೂಯೀಸ್ ದೆ ಅಟಾಯ್ದೆ , ಗೇರುಸೊಪ್ಪೆಯನ್ನು ಮಣಿಸಿಯೇಬಿಟ್ಟೆವೆಂದು ಭಾವಿಸಿ ಗೇರುಸೊಪ್ಪೆಯ ಕೋಟೆಯನ್ನು ಆಕ್ರಮಿಸಲು ಬಂದ.ಆದರೆ ಅದು ನಿರ್ಜನವಾಗಿತ್ತು. ರಾಣಿ ಕಾನೂರಿನಲ್ಲಿರುವುದನ್ನು ತಿಳಿದು ಅವಳನ್ನು ಬಂಧಿಸಲು ಕಾನೂರನ್ನು ವಶಪಡಿಸಿಕೊಳ್ಳಲೆಂದು ಕಡಿದಾದ ಶಿಖರವನ್ನೇರಲು ತೊಡಗಿದ ಆತನ ಯೋಧರ ತಲೆಯ ಮೇಲೆ ಶಿಖರದ ತುದಿಯಿಂದ ಉರುಳು ಗಲ್ಲುಗಳು ಬಂದು ಬೀಳತೊಡಗಿ ಅವರು ದಿಕ್ಕಪಾಲಾದರು.ಕಾನೂರನ್ನು ಸೇರುವುದು ದಃಸ್ತರವೆಂಬುದನ್ನು ಮನಗಂಡ ಪೋರ್ಚುಗೀಸ್ ಸೈನ್ಯ ಅಲ್ಲಿಂದ ಪರಾರಿಯಾಗಿ ಹೋಗಿ ಬಸ್ರೂರನ್ನು ಮುತ್ತಿತು. ಆದರೆ ಚೆನ್ನಭೈರಾದೇವಿ ಕಾನೂರಿನಿಂದಲೇ ಬಸ್ರೂರು ದೊರೆಯನ್ನು ಬೆಂಬಲಿಸಿ ಅವರನ್ನು ಹಿಮ್ಮೆಟ್ಟಿಸಿದಳು. ಅಂದಿನಿಂದ ಕಾನೂರು ಪ್ರದೇಶಕ್ಕೆ ಉರುಳುಗಲ್ಲು ಎಂದೇ ಹೆಸರಾಯಿತು.ಇಂದಿಗೂ ಕಾನೂರು ಕೋಟೆ ಇರುವುದು ಉರುಳುಗಲ್ಲು ಗ್ರಾಮದಲ್ಲಿ.
ವಿದೇಶೀಯರೊಂದಿಗೆ ಕಾಳುಮೆಣಸಿನ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದ ಚೆನ್ನಭೈರಾದೇವಿಯನ್ನು ಮಣಿಸಲು ಕೆಳದಿ ನಾಯಕರು,ಬಿಳಗಿ ಅರಸರು ಹರಸಾಹಸ ಪಡುತ್ತಿದ್ದರು. ಅವರಿಗೆ ಬೈಂದೂರು, ಹೊನ್ನಾವರ,ಮಿರ್ಜಾನ ಅಂಕೋಲ ಬಂದರುಗಳನ್ನು ವಶಪಡಿಸಿಕೊಳ್ಳುವುದು ಅತಿಮಹತ್ವದ್ದಾಗಿತ್ತು.ಆದರೆ ಕಾನೂರು ಕೋಟೆಯ ಭದ್ರತೆ ಮತ್ತು ಚೆನ್ನಭೈರಾದೇವಿಯ ಪ್ರತಾಪದೆದುರು ಅವರ ಮೀಸೆಗಳು ಮಣ್ಣಾಗಿದ್ದವು.
ಅವಳು ಕಾಳುಮೆಣಸು ದಾಸ್ತಾನು ಮಾಡಲೂ ಕಾನೂರು ಕೋಟೆಯನ್ನೇ ಬಳಸುತ್ತಿದ್ದಳು. ಮಲೆನಾಡಿನಲ್ಲಿ ಖರೀದಿಸಿದ ಕಾಳುಮೆಣಸು ಶರಾವತಿಯನ್ನು ದಾಟುತ್ತಿದ್ದ ಸ್ಥಳಕ್ಕೇ ಮೆಣಸುಗಾರು ಎಂಬ ಹೆಸರು ಬರುವಷ್ಟು ಬಿರುಸಾಗಿ ಆಗ ಕಾಳುಮೆಣಸಿನ ವ್ಯಾಪಾರ ಸಾಗಿತ್ತು.ಅಂತಹ ರಾಣಿಯನ್ನು ೧೬೦೬ರಲ್ಲಿ ಕೆಳದಿಯ ಅರಸು ಹಿರಿಯ ವೆಂಕಟಪ್ಪ ನಾಯಕ ಮತ್ತು ಬಿಳಿಗಿಯ ಅರಸರು ಇಬ್ಬರೂ ಪರಸ್ಪರ ಬಾಂಧವ್ಯ ಬೆಸೆದುಕೊಂಡು ದಳವಾಯಿ ಲಿಂಗಣ್ಣ ಎನ್ನುವ ಸರದಾರನ ಮೂಲಕ ಮೋಸದಿಂದ ಸೆರೆ ಹಿಡಿಸುತ್ತಾರೆ.ನಂತರ ಆಕೆಯನ್ನು ಹಳೆ ಇಕ್ಕೇರಿ ಕೋಟೆಯಲ್ಲಿ ಬಂಧನದಲ್ಲಿಟ್ಟು ಆಕೆ ಅಲ್ಲಿಯೇ ಕೊನೆಯುಸಿರೆಳೆಯುತ್ತಾಳೆ.ಅಂತಹ ವೀರ ಮಹಿಳೆಯ ಶಕ್ತಿಕೇಂದ್ರವಾಗಿ ಮೆರೆದಿದ್ದ ಸುಭದ್ರ ಕಾನೂರು ಕೋಟೆ ಇಂದು ಅನಾಥವಾಗಿದೆ. ಅದರಲ್ಲಿದ್ದ ಎರಡು ದೇವಾಲಯಗಳು( ಒಂದು ಜಿನಮಂದಿರ ಒಂದು ಶಿವಾಲಯ) ಇಂದು ಕಳ್ಳ ಖದೀಮರ ಕೈಗೆ ಸಿಕ್ಕು ದಯನೀಯ ಸ್ಥಿತಿ ತಲುಪಿದೆ.ಯಾವ ಪುರಾತತ್ವ ಇಲಾಖೆಯೂ, ಯಾವ ಸಾಂಸ್ಕೃತಿಕ ಅಥವಾ ಇತಿಹಾಸ ಅಕಾಡಮಿಗಳೂ ಅದರತ್ತ ಗಮನ ವಹಿಸದೆ ಅದು ಅನಾಥವಾಗಿದೆ. ದ್ವಜಸ್ಥಂಭವನ್ನು ನಿಧಿಯಾಸೆಗೆ ಉರುಳಿಸಲಾಗಿದೆ.ಶಿವಲಿಂಗವನ್ನು ಹೊರಗೆಳೆದ ಭಿನ್ನಗೊಳೆಸಿ ಬಿಸಾಡಲಾಗಿದೆ.ಜಿನಮಂದಿರವು ಉರುಳಿಬೀಳುವ ದುಃಸ್ಥಿತಿಯಲ್ಲಿ ನಿಂತಿದ್ದರೆ ರಾಣೀವಾಸದಲ್ಲಿ ಹಾವುರಾಣಿಗಳು ಓಡಾಡುತ್ತಿವೆ. ಮಧ್ಯದಲ್ಲಿ ಮರಗಿಡಗಳು ಬೆಳೆದು,ಗೋಡೆಗಳು ಉದುರಿ ಅದರ ಪರಿಸ್ಥಿತಿ ಭಯಾನಕವಾಗಿದೆ.ನಿಧಿಯಾಸೆಗೆ ಪುಂಡರು ಇಲ್ಲಿರುವ ಎಲ್ಲವನ್ನೂ ಅಗೆದು ಬಿಸಾಡಿದ್ದಾರೆ.ನೋಡಲು ಹೋಗುವ ಸಾರ್ವಜನಿಕರಿಗೆ ಪರವಾನಗಿ ಕೊಡಲು ಪರಿತಪಿಸುವ ಅರಣ್ಯ ಇಲಾಖೆ ಇಲ್ಲಿ ನಾಶದಂಚಿನಲ್ಕಿ ನಿಂತಿರುವ ಕೋಟೆಯ ಹೆಬ್ಬಾಗಿಲು, ಮರಮಟ್ಟು ಬೆಳೆಯುತ್ತಿರುವ ಕೋಟೆಯ ಗೋಡೆ, ಉರುಳಿ ಬೀಳುತ್ತಿರುವ ಈಗಾಗಲೇ ಬಹುತೇಕವಿನಾಶದತ್ತ ಸರಿದಿರುವ ರಾಣೀವಾಸದ ಕಟ್ಟಡ,ಅಲ್ಲಿ ಕಂಡುಬರುವ ಬಾವಿಗಳು, ಸುರಂಗ ಮಾರ್ಗಗಳು ,ಸಂಪೂರ್ಣ ಜಖಂ ಗೊಂಡಿರುವ ಶಿವಾಲಯ,ಜೀರ್ಣಗೊಂಡಿರುವ ಜಿನಮಂದಿರ, ಉರುಳಿ ಬಿದ್ದಿದ್ದರೂ ತುಂಡಾಗದ ಬೃಹತ್ ಶಿಲಾದ್ವಜಸ್ಥಂಭ ಇವುಗಳ ರಕ್ಷಣೆಗೆ ಕಿಂಚಿತ್ತೂ ಗಮನ ಹರಿಸದಿರುವುದು ದೇಶದ ದೌರ್ಭಾಗ್ಯ. ಚರಿತ್ರೆಗೆ ನಾವು ಮಾಡುತ್ತಿರುವ ಚರಿತ್ರಾರ್ಹ ಅನ್ಯಾಯ. ಇಂತಹ ಘೋರ ಕಾನನದ ಮಧ್ಯದ ಈ ಮಹದಚ್ಚರಿ ಇನ್ನು ಕೆಲವೇ ವರ್ಷಗಳಲ್ಲಿ ಮಣ್ಣುಗೂಡುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಡಿನ ಪ್ರಜ್ಞಾವಂತರು ನೂರಕ್ಕೆ ನೂರರಷ್ಟು ತಮ್ಮ ಇಚ್ಛಾಶಕ್ತಿಯನ್ನು ತೊಡಗಿಸಿ ಕಾಪಾಡಿ ಕೊಳ್ಳಬೇಕಾದ ಐತಿಹಾಸಿಕ ತಾಣವಿದು.ಒಂದರ್ಥದಲ್ಲಿ ಇದು ನಗರದ ಕೋಟೆಗಿಂತ, ಗೇರುಸೊಪ್ಪೆಯ ಕೋಟೆಗಿಂತ ಮಹತ್ವವುಳ್ಳದ್ದು.