ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಪೌರಾಣಿಕ ಕಥೆ !

ಮನೆಯಲ್ಲಿ ಹಬ್ಬ-ಹರಿದಿನ,ಪೂಜೆ-ಹವನ ಮುಂತಾದ ದೇವಕಾರ್ಯಗಳಿರುವಾಗ ಅಡಿಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ.ಅದಕ್ಕೆ ಕಾರಣಗಳೇನು..?

ಈರುಳ್ಳಿ ಹಾಗೂ ಬೆಳ್ಳುಳ್ಳಿಯ ವಿಷಯದಲ್ಲೊಂದು ಪೌರಾಣಿಕೆ ಕಥೆಯಿದೆ.ಸಮುದ್ರಮಂಥನದ ನಂತರ ಮೋಹಿನಿಯ ವೇಷವನ್ನು ಧರಿಸಿ ಮಹಾವಿಷ್ಣು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ.ಅದನ್ನರಿತ ರಾಹು ಹಾಗೂ ಕೇತುವೆಂಬ ರಾಕ್ಷಸರು ಅಮೃತವನ್ನು ಸ್ವೀಕರಿಸಲು ಬರುತ್ತಾರೆ.ಪ್ರಮಾದದಿಂದ ವಿಷ್ಣು ಅವರಿಗೂ ಅಮೃತವನ್ನು ಹಂಚುತ್ತಾನೆ.ತತ್ಕ್ಷಣದಲ್ಲೇ ಸೂರ್ಯ ಹಾಗೂ ಚಂದ್ರ,ಅವರಿಬ್ಬರು ಅಸುರರೆಂಬ ಮಾಹಿತಿಯನ್ನು ಮಹಾವಿಷ್ಣುವಿಗೆ ನೀಡುತ್ತಾರೆ.ಅಷ್ಟರಲ್ಲಿ ಅವರಿಬ್ಬರೂ ಅಮೃತವನ್ನು ಕುಡಿದಾಗಿತ್ತು.ಆದರೆ ಅಮೃತ ಗಂಟಲಿಂದ ಇಳಿದು ದೇಹ ಸೇರಿರಲಿಲ್ಲ.ಕೂಡಲೇ ಮಹಾವಿಷ್ಣು ಅವರಿಬ್ಬರ ತಲೆಯನ್ನು ಕಡಿಯುತ್ತಾನೆ.ಅಮೃತವನ್ನು ಕುಡಿದಿದ್ದರಿಂದ ಅವರ ತಲೆ ನಾಶವಾಗುವುದಿಲ್ಲ.ಕೇವಲ ದೇಹಾಂತ್ಯವಾಗುತ್ತದೆ.ಆ ಕಾರಣದಿಂದ ಇಂದಿಗೂ ರಾಹು,ಕೇತುಗಳಿಗೆ ಶರೀರವಿಲ್ಲ.ಕೇವಲ ಶಿರವಷ್ಟೇ..!!

ಮಹಾವಿಷ್ಣು ಶಿರವನ್ನು ತುಂಡರಿಸುವಾಗ ಅವರ ಬಾಯಲ್ಲಿದ್ದ ಅಮೃತಬಿಂದುಗಳು ನೆಲವನ್ನು ಸೇರಿದವು.ಆಗಲೇ ಹುಟ್ಟಿದ್ದು ಈರುಳ್ಳಿ ಹಾಗೂ ಬೆಳ್ಳುಳ್ಳಿ.ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.ಅಮೃತಕ್ಕೆ ಸರಿಸಮವಾದ ಔಷಧೀಯ ಗುಣಗಳಿವೆ. ಹಾಗೇ ರಾಕ್ಷಸರ ಬಾಯಿಯ ಎಂಜಲೂ ಸೇರಿದ್ದರಿಂದ ದುರ್ಗಂಧ,ಹಾಗೂ ಅಪವಿತ್ರವೆಂಬ ಕುಖ್ಯಾತಿಯೂ ಸೇರಿಕೊಂಡಿದೆ.ಹಾಗಾಗಿ ದೇವಕಾರ್ಯಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸೇವನೆ ವರ್ಜ್ಯವಾಗಿದೆ.ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಶರೀರ ರಾಕ್ಷಸರಂತೇ ಗಟ್ಟಿಮುಟ್ಟಾದರೂ. ಆಚಾರ-ವಿಚಾರಗಳೂ ಸಹ ರಾಕ್ಷಸರಂತಾಗುತ್ತವೆ.ಬೆಳ್ಳುಳ್ಳಿ ಹಾಗೂ ಈರುಳ್ಳಿಗಳನ್ನು ತಾಮಸಿಕ ಆಹಾರವೆಂದು ಕರೆಯಲಾಗುತ್ತದೆ.ನಾವು ತಿನ್ನುವ ಆಹಾರ ನಮ್ಮ ಸ್ವಭಾವವನ್ನು ನಿರ್ಧರಿಸುತ್ತದೆ.ಸಾತ್ವಿಕ ಆಹಾರಗಳನ್ನು ಸೇವಿಸಿದರೆ ಸಾತ್ವಿಕರಾಗುತ್ತೇವೆ.ತಾಮಸಿಕ ಆಹಾರವನ್ನು ಸೇವಿಸಿದರೆ ತಾಮಸೀಪ್ರವೃತ್ತಿ ಬೆಳೆಯುತ್ತದೆ.ತಾಮಸಿಕ ಆಹಾರವನ್ನು ಆದಷ್ಟು ವರ್ಜಿಸುವಂತೆ ಆಹಾರನಿಯಮಗಳು ತಿಳಿಸುತ್ತವೆ.ಅತಿಯಾದರೆ ಅಮೃತವೂ ವಿಷವೆಂಬಂತೇ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳ ಅತಿಯಾದ ಸೇವನೆ ಒಳ್ಳೆಯದಲ್ಲ.

ಸನಾತನ ಸಂಸ್ಕೃತಿ,