ಮಂಗಳೂರು, ಜೂನ್ 6: ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ಕಟ್ಟಿ ಚರಂಡಿಗೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಜೂನ್ 2 ರಂದು ಮಂಗಳೂರು ಹೊರವಲಯದ ಸುರತ್ಕಲ್ ಕೃಷ್ಣಾಪುರ ರಸ್ತೆಯ ಚುಕ್ಕಬೆಟ್ಟು ಎಂಬಲ್ಲಿಯ ಚರಂಡಿಯಲ್ಲಿ ಗೋಣಿಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು.

ಮಂಗಳೂರಿನ ಸುರತ್ಕಲ್‌ನಲ್ಲಿ ಗೋಣಿಚೀಲದಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

ಕೊಲೆಯಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಕಬ್ಬರಗಿ ನಿವಾಸಿ ಮರಿಯಪ್ಪ(50) ಎಂದು ಗುರುತಿಸಲಾಗಿತ್ತು.

ಈ ಪ್ರಕರಣದ ಕುರಿತು ತನಿಖೆ ನಡೆಸಿದ ಸುರತ್ಕಲ್ ಠಾಣೆಯ ಪೊಲೀಸರು ಮೃತರ ಸಂಬಂಧಿಕರನ್ನು ಪತ್ತೆ ಮಾಡಿ, ಅವರನ್ನು ವಿಚಾರಣೆ ನಡೆಸಿದಾಗ ಮೃತ ಮರಿಯಪ್ಪ, ಹುಲ್ಲಪ್ಪ ಮತ್ತು ಸಣ್ಣಗೌಡ್ರು ಎಂಬವರ ಜೊತೆ ವಾಸ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿತ್ತು.

ಈ ಮಾಹಿತಿಯ ಆಧಾರದ ಮೇಲೆ ಹುಲ್ಲಪ್ಪ ಹಾಗು ಸಣ್ಣಗೌಡ್ರು ಎಂಬವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಒಳಪಡಿಸಿದಾಗ ಕೊಲೆಯ ವಿವರ ಬಯಲಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಹುನುಗುಂದ ನಿವಾಸಿ ಸಣ್ಣಗೌಡ್ರ (55) ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ ನಿವಾಸಿ ಹುಲ್ಲಪ್ಪ ಬಸಪ್ಪ ಸೂಡಿ (28) ಅವರನ್ನು ಬಂಧಿಸಲಾಗಿದೆ.

ಮೃತ ಮರಿಯಪ್ಪ ಆರೋಪಿಗಳಿಬ್ಬರ ಜತೆ ಒಂದೇ ಕೊಠಡಿಯಲ್ಲಿ ವಾಸವಿದ್ದರು. ಆರೋಪಿ ಗೌಡಪ್ಪ ಅಲಿಯಾಸ್ ಸಣ್ಣಗೌಡ್ರು ಮೃತ ಮರಿಯಪ್ಪ ಅವರಿಗೆ ಹಣ ನೀಡಬೇಕಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಇದರಿಂದ ಕುಪಿತರಾದ ಆರೋಪಿಗಳಿಬ್ಬರು ಸೇರಿ ಸಂಚು ರೂಪಿಸಿ ಮರಿಯಪ್ಪ ಅವರನ್ನು ಕೊಲೆ ಮಾಡಿರುವುದನ್ನು ತನಿಖೆ ಸಂದರ್ಭದಲ್ಲಿ ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.