ಮೋದಿ ಕಾರ್ಮಿಕ ಕೇರ್‌ : ಮೋದಿ ಕೇರ್‌ ರೀತಿ ಮತ್ತೂಂದು ಭದ್ರತಾ ಯೋಜನೆ

ಹೊಸದಿಲ್ಲಿ: ಆಯುಷ್ಮಾನ್ ಭಾರತ್ ಯೋಜನೆ ಘೋಷಣೆ ಬಳಿಕ ದೇಶದ 50 ಕೋಟಿ ಕಾರ್ಮಿಕರಿಗೆ ಅನುಕೂಲವಾಗುವಂತಹ ಕಲ್ಯಾಣ ಯೋಜನೆ (ಮೋದಿ ಕಾರ್ಮಿಕ ಕೇರ್)ಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶೀಘ್ರವೇ ಜಾರಿಗೆ ತರಲು ಮುಂದಾಗಿದೆ. ಆರಂಭದಲ್ಲಿ ಪಿಂಚಣಿ, ಜೀವವಿಮೆ ಮತ್ತು ಮೆಚ್ಯುರಿಟಿ ಬೆನಿಫಿಟ್ ಒಳಗೊಂಡ ಮೂರು ಯೋಜನೆಗಳನ್ನು ಮೋದಿ ಜಾರಿಗೊಳಿಸಲಿದ್ದಾರೆ. ಅನಂತರದ ಹಂತದಲ್ಲಿ ನಿರುದ್ಯೋಗಿಗಳು ಮತ್ತು ಮಕ್ಕಳ ಕಲ್ಯಾಣ ಯೋಜನೆಗಳನ್ನು ತರಲಾಗುತ್ತದೆ. ಆದರೆ ಇದಕ್ಕೆ ಸಮಯ ಮತ್ತು ಸಂಪನ್ಮೂಲದ ಕೊರತೆಯೇ ಹೆಚ್ಚಾಗಿ ಕಾಡುತ್ತಿದೆ ಎನ್ನಲಾಗಿದೆ.

2019ರ ಚುನಾವಣೆಗೂ ಮುನ್ನ ಇದು ಸರಕಾರಕ್ಕೆ ಮಹತ್ವದ ಯೋಜನೆಯಾಗಿದೆ. ಆದರೆ ಸದ್ಯ ಏಷ್ಯಾದಲ್ಲೇ ಅತ್ಯಂತ ಹೆಚ್ಚು ವಿತ್ತೀಯ ಕೊರತೆ ಹೊಂದಿರುವ ಭಾರತದ ಆರ್ಥಿಕತೆಯ ಮೇಲೆ ಇದು ಸಹಜವಾಗಿಯೇ ಪರಿಣಾಮವನ್ನೂ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಏಕೀಕೃತ ಕಾರ್ಮಿಕ ಕಾನೂನು: ಪ್ರಸ್ತುತ ಚಾಲ್ತಿಯಲ್ಲಿರುವ 15 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ ಹಾಗೂ ಸರಳಗೊಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಸರಕಾರ ಮಸೂದೆ ರೂಪಿಸಿದೆ. ಜುಲೈನಲ್ಲಿ ಆರಂಭವಾಗಲಿರುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಈಗಾಗಲೇ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

ಯೋಜನೆ ಬಗ್ಗೆ
– ಮೊದಲಿಗೆ ಪಿಂಚಣಿ, ಜೀವವಿಮೆ ಮತ್ತು ಮೆಚ್ಯುರಿಟಿ ಬೆನಿಫಿಟ್‌ ಒಳಗೊಂಡ 3 ಯೋಜನೆ ಜಾರಿ
– 2ನೇ ಹಂತದಲ್ಲಿ ನಿರುದ್ಯೋಗಿ ಗಳು ಮತ್ತು ಮಕ್ಕಳ ಕಲ್ಯಾಣ ಯೋಜನೆಗಳ ಅನುಷ್ಠಾನ
– ಇದಕ್ಕಾಗಿ 15 ಕಾರ್ಮಿಕ ಕಾನೂನುಗಳ ವಿಲೀನ
– ಮುಂದಿನ ಸಂಸತ್‌ ಅಧಿವೇಶನದಲ್ಲಿ ಈ ಕುರಿತ ಮಸೂದೆ ಮಂಡನೆ
– ಕೆಲವು ರಾಜ್ಯಗಳ 6 ಜಿಲ್ಲೆಗಳಲ್ಲಿ ಪ್ರಾಯೋಗಿಕ ಜಾರಿ