ನವದೆಹಲಿ, ಜೂ.6- ಭಾರತವು ಜಾಗತಿಕ ನವೋದ್ಯಮ (ಸ್ಟಾರ್ಟಪ್) ಆಗಿ ಹೊರಹೊಮ್ಮುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂತಹ ಹೊಸ ಉದ್ಯಮಗಳ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ 10,000 ಕೋಟಿ ರೂ.ಗಳ ನಿಧಿಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ನವೋದ್ಯಮ ಉತ್ತೇಜನ ನೀತಿಯ ಫಲಾನುಭವ ಪಡೆದ ಯುವ ಉದ್ಯಮಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಮೋದಿ, ಯಾವುದೇ ಕ್ಷೇತ್ರವಿರಲಿ, ಅದರ ಉತ್ತೇಜನ ಮತ್ತು ಬೆಳವಣಿಗೆಗೆ ಹಣಕಾಸು ಅತಿ ಮುಖ್ಯ. ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ 10,000 ಕೋಟಿ ರೂ.ಗಳ ನಿಧಿಯನ್ನು ಮೀಸಲಿಟ್ಟಿದೆ ಎಂದರು.

ನವೋದ್ಯಮಗಳು ತಮ್ಮ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ. ಇದಕ್ಕಾಗಿ ಉತ್ತಮ ಬೆಲೆ ನೀಡಲಾಗುವುದು. ಈ ಸಂಬಂಧ ಇರುವ ನೀತಿ-ನಿಯಮಗಳನ್ನು ನಾವು ಸಡಿಲಗೊಳಿಸುತ್ತೇವೆ. ಆ ಮೂಲಕ ಜಾಗತಿಕ ನವೋದ್ಯಮ ವ್ಯವಸ್ಥೆಗೆ ಪ್ರೋತ್ಸಾಹ ನೀಡಿದ್ದೇವೆ ಎಂದರು.
ಭಾರತದ ನವೋದ್ಯಮವು ಇಂದು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಅದು ಪುಟ್ಟ ಪಟ್ಟಣಗಳು ಮತ್ತು ಗ್ರಾಮಗಳಲ್ಲೂ ಯಶಸ್ವಿಯಾಗಿ ಹೊರಹೊಮ್ಮುತ್ತಿದೆ. ಭಾರತವು ಈ ಯಶಸ್ಸಿನೊಂದಿಗೆ ಗ್ಲೋಬಲ್ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.

ಈ ಹಿಂದೆ ನವೋದ್ಯಮಗಳು ಡಿಜಿಟಲ್ ಮತ್ತು ತಾಂತ್ರಿಕ ಅನ್ವೇಷಣೆಗಳಿಗೆ ಮಾತ್ರ ಮೀಸಲಾಗಿತ್ತು. ಈಗ ಕಾಲ ಬದಲಾಗಿದೆ. ವಿವಿಧ ಕ್ಷೇತ್ರಗಳಲ್ಲೂ ನವೋದ್ಯಮಗಳು ಮುಂಚೂಣಿಗೆ ಬರುತ್ತಿವೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತವು ಯುವಶಕ್ತಿಯ ರಾಷ್ಟ್ರ. ಇಂದು ಯುವಕರು ಉದ್ಯೋಗ ಸೃಷ್ಟಿಕರ್ತರಾಗುತ್ತಿದ್ದಾರೆ. ನೂರಾರು ಜನಕ್ಕೆ ಕೆಲಸ ನೀಡುತ್ತಿದ್ದಾರೆ. ಇಂತಹ ಉದ್ಯೋಗದಾತರಿಗೆ ಅಗತ್ಯವಾದ ಸಕಲ ನೆರವು, ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಪುನರುಚ್ಚರಿಸಿದರು. ನವೋದ್ಯಮಗಳಲ್ಲಿ ಶೇ.45ರಷ್ಟು ಮಹಿಳಾ ಉದ್ಯಮಿಗಳೆ ಇರುವುದು ಆಶಾದಾಯಕ ಬೆಳವಣಿಗೆ. ಇದು ಭಾರತದ ಸ್ತ್ರೀ ಸಬಲೀಕರಣವನ್ನು ಜಗತ್ತಿಗೆ ಸಾಬೀತುಪಡಿಸುತ್ತದೆ ಎಂದು ಮೋದಿ ಪ್ರಶಂಸೆಯ ಮಾತುಗಳನ್ನಾಡಿದರು.