ನಮ್ಮ ಮನೆಯ ಹಿತ್ತಿಲಿನಲ್ಲೇ ಸಿಗುವ ಅದೆಷ್ಟೋ ಸೊಪ್ಪುಗಳು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಪೂರಕವಾಗಿವೆ. ಆದರೇ ನಾವು ಅದನ್ನು ನಿರ್ಲಕ್ಷಿಸಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳ ಮೊರೆ ಹೋಗುತ್ತೇವೆ. ಸೊಪ್ಪುಗಳನ್ನೇ ಸದ್ಭಳಕೆ ಮಾಡಿಕೊಂಡರೆ ಜಗಮೆಚ್ಚುವ ಸೌಂದರ್ಯ ಗಳಿಸಿಕೊಳ್ಳಬಹುದು. ಇಂತಹ ಸೊಪ್ಪುಗಳಲ್ಲಿ ನುಗ್ಗೆಸೊಪ್ಪು ಕೂಡಾ ಒಂದು.
ನುಗ್ಗೆ ಸೊಪ್ಪು ಚರ್ಮದ ವೃದ್ಧಾಪ್ಯವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ಔಷಧೀಯ ಗುಣಗಳು ಮುಖದ ಚರ್ಮ ಸುಕ್ಕುಗಟ್ಟಲು ಕಾರಣವಾಗುವ ಪ್ರಿರಯಾಡಿಕಲ್ ಅಂಶವನ್ನು ತಡೆಗಟ್ಟಿ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ನುಗ್ಗೆಕಾಯಿ ಸೊಪ್ಪನ್ನು ನುಣ್ಣಗೆ ರುಬ್ಬಿ ಮುಖ, ಕತ್ತಿಗೆ ಹಚ್ಚಿಕೊಂಡು ಕೆಲ ಸಮಯ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮತ್ತು ಇದು ಮುಖವನ್ನು ಬ್ಯಾಕ್ಟಿರಿಯಾ ಮುಕ್ತವಾಗಿಸುತ್ತದೆ.
ಹದಿಹರೆಯದ ಯುವತಿಯರನ್ನು ಕಾಡುವ ಮೊಡವೆ ಸಮಸ್ಯೆಗೂ ನುಗ್ಗೆಸೊಪ್ಪು ರಾಮಬಾಣವಾಗಿದೆ. ನುಗ್ಗೆ ಸೊಪ್ಪನ್ನು ಲಿಂಬೆಹಣ್ಣಿನ ರಸದೊಂದಿಗೆ ಅರೆದು ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಕಾಣಬಹುದು. ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ಅಂಶಗಳಿಂದಾಗಿ ಚರ್ಮದ ಮೇಲೆ ಗುಳ್ಳೆಗಳು ಏಳುವುದು ಹಾಗೂ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ರಕ್ತ ಶುದ್ಧಿಗಾಗಿ ನುಗ್ಗೆಸೊಪ್ಪನ್ನು ಬಳಸಬಹುದು.
ನುಗ್ಗೆಸೊಪ್ಪಿನ ಎರಡು ಚಮಚ ರಸವನ್ನು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ನುಗ್ಗೆಸೊಪ್ಪಿಗೆ ಒಂದು ಚಮಚ ಅರಿಶಿಣ, ಲಿಂಬೆರಸ, ಗಂಧದ ಪುಡಿ ಸೇರಿಸಿ, ನುಣ್ಣಗೆ ರುಬ್ಬಿ ಫೇಸ್ ಪ್ಯಾಕ್ ನಂತೆ ಬಳಸಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.