ಕುಮಟಾ : ‘ಪ್ರಧಾನಿ ನರೇಂದ್ರ ಮೋದಿ ಅವರು ಕಾಣುತ್ತಿರುವ ಸ್ವಚ್ಛ ಭಾರತ ನಿರ್ಮಾಣ ಕನಸು, ಜನರ ಬದ್ಧತೆ ಇಲ್ಲದೆ ವಾಸ್ತವದಲ್ಲಿ ಅನುಷ್ಠಾನಕ್ಕೆ ಬರುವುದು ಕಷ್ಟಸಾಧ್ಯ’ ಎಂದು ಪರಿಸರವಾದಿ ಎನ್.ಬಿ. ನಾಯ್ಕ ಹೇಳಿದರು.

ಕುಮಟಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂರೂರು ವಲಯ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪಟ್ಟಣವನ್ನು ಶುಚಿಯಾಗಿಡುವುದು ಪುರಸಭೆ ಜವಾಬ್ದಾರಿ. ಆದರೆ ಕೆಲ ಪುರಸಭೆ ಸದಸ್ಯರ ಮನೆಗಳಲ್ಲಿಯೇ ಶೌಚಾಲಯಿ ಇಲ್ಲದಿರುವುದು ವಿಷಾದದ ಸಂಗತಿ. ಶೌಚಾಲಯ ಹೊಂದಿರುವ ಎಷ್ಟೋ ಜನರು ರಸ್ತೆ ಪಕ್ಕದಲ್ಲಿ ಶೌಚಕ್ಕೆ ಹೋಗುತ್ತಿದ್ದಾರೆ, ಹೀಗಾಗಿ ವಾಸ್ತವದಲ್ಲಿ ಮೋದಿ ಕನಸಿನ ಸ್ವಚ್ಛ ಭಾರತ ನಿರ್ಮಾಣ ಸಾಧ್ಯವಿಲ್ಲ’ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಎಂ.ಎಂ. ನಾಯ್ಕ, ‘ಮನೆ, ಅಂಗಳ ನಂತರ ನಮ್ಮ ಬೀದಿಗಳಲ್ಲಿ ಸ್ವಚ್ಛತೆ ತರುವುದರಲ್ಲಿ ಮಹಿಳೆಯರ ಪಾತ್ರ ಮುಖ್ಯ’ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂರೂರು ವಲಯದ ಮೇಲ್ವಿಚಾರಕಿ ರೇಖಾ ಈಶ್ವರ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಕ್ಕೂಟ ಸದಸ್ಯರಿಗೆ ನೀಡಿದ ಗಿಡಗಳ ಬಗ್ಗೆ ನಿಗಾ ಇಡಲಾಗುತ್ತದೆ. ಕಳೆದ ವರ್ಷ ನೆಟ್ಟ 150ಕ್ಕೂ ಹೆಚ್ಚು ಗಿಡಗಳು ಆರೋಗ್ಯಕರವಾಗಿ ಬೆಳೆಯುತ್ತಿವೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಗೀತಾ ಭಂಡಾರಕರ್, ‘ಪುರಸಭೆ ವತಿಯಿಂದ ಕಸವನ್ನು ಒಯ್ಯಲು ವಾಹನ ಸೌಲಭ್ಯ ನೀಡಲಾಯಿತು. ಆದರೆ, ಅದಕ್ಕೆ ಸಾರ್ವಜನಿಕರು ಸಹಕಾರ ನೀಡಲಿಲ್ಲ. ಅಂಗಡಿ, ಮೀನು ಮಾರುಕಟ್ಟೆಗೆ ಹೋಗುವಾಗ ಗಂಡಸರ ಕೈಗೆ ಬಟ್ಟೆಯ ಕೈ ಚೀಲವನ್ನು ಕೊಟ್ಟರೆ ಅವರು ಪ್ಲಾಸ್ಟಿಕ್ ಚೀಲ ತರುವುದು ತಪ್ಪುತ್ತದೆ’ ಎಂದರು. ‌

ಪತ್ರಕರ್ತ ಎಂ.ಜಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು.