ಕಿಂಗ್ಡಾವೋ (ಚೀನಾ) (ಪಿಟಿಐ): ‘ದೇಶ–ದೇಶಗಳ ಮಧ್ಯೆ ಸಂಪರ್ಕ ಕಲ್ಪಿಸುವ ಬೃಹತ್ ಯೋಜನೆಗಳು ನೆರೆಯ ದೇಶಗಳ ಗಡಿ ಮತ್ತು ಸಾರ್ವಭೌಮತೆಯನ್ನು ಗೌರವಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಾದು ಹೋಗುವ ಒಂದು ವಲಯ ಒಂದು ರಸ್ತೆ ಯೋಜನೆಯನ್ನು ಭಾರತದ ಪ್ರಬಲ ವಿರೋಧದ ನಡುವೆಯೂ ಅನುಷ್ಠಾನಕ್ಕೆ ತಂದಿರುವ ಚೀನಾಕ್ಕೆ ಈ ಮೂಲಕ ಅವರು ತಿರುಗೇಟು ನೀಡಿದರು. ಭಾರತವನ್ನು ಹೊರತುಪಡಿಸಿ ಎಸ್‌ಸಿಒದ ಇತರ ಏಳೂ ಸದಸ್ಯ ರಾಷ್ಟ್ರಗಳು ಯೋಜನೆಯನ್ನು ಬೆಂಬಲಿಸಿವೆ.

ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 18ನೇ ವಾರ್ಷಿಕ ಶೃಂಗಸಭೆಯಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಈ ಬಾರಿಯ ಶೃಂಗಸಭೆಯನ್ನು ಚೀನಾ ಆಯೋಜಿಸಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಸಮ್ಮುಖದಲ್ಲೇ ಮೋದಿ ಈ ಮಾತು ಹೇಳಿದ್ದಾರೆ.

‘ದೇಶಗಳ ಮಧ್ಯೆ ಮುಕ್ತ ಸಂಪರ್ಕ ಇರಬೇಕು ಎಂಬುದು ಭಾರತದ ನಿಲುವು. ನೆರೆ ದೇಶಗಳ ಸಾರ್ವಭೌಮತೆಯನ್ನು ಗೌರವಿಸುವ, ಕಾರ್ಯಸಾಧುವಾದ ಮತ್ತು ಸುಸ್ಥಿರವಾದ ಸಂಪರ್ಕ ಯೋಜನೆಗಳಿಗೆ ಭಾರತ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುತ್ತದೆ’ ಎಂದು ಮೋದಿ ಘೋಷಿಸಿದರು. ‘ಇಂತಹ ಯೋಜನೆಗಳು ‘SECURE’ ಆಗಿರಬೇಕು. ಎಸ್‌–ನಾಗರಿಕರ ಭದ್ರತೆ (ಸೆಕ್ಯುರಿಟಿ ಆಫ್ ಸಿಟಿಜನ್ಸ್), ಇ–ಆರ್ಥಿಕ ಅಭಿವೃದ್ಧಿ (ಎಕನಾಮಿಕ್ ಡೆವಲಪ್‌ಮೆಂಟ್), ಸಿ–ಪ್ರಾದೇಶಿಕ ಸಂಪರ್ಕ (ರೀಜನಲ್ ಕನೆಕ್ಟಿವಿಟಿ), ಯು–ಒಗ್ಗಟ್ಟು (ಯುನಿಟಿ), ಆರ್‌– ಸಾರ್ವಭೌಮತೆಗೆ ಗೌರವ (ರೆಸ್ಪೆಕ್ಟಿಂಗ್ ಸಾವರೆಂಟಿ) ಮತ್ತು ಇ–ಪರಿಸರ ಸಂರಕ್ಷಣೆ (ಎನ್ವಿರಾನ್‌ಮೆಂಟ್‌ ಕನ್ಸರ್ವೇಷನ್)’ ಎಂದು ಸೆಕ್ಯೂರ್ ಎಂಬುದನ್ನು ಮೋದಿ ವಿವರಿಸಿದರು.

ಜಿನ್‌ಪಿಂಗ್ ಕರೆ: ‘ಎಸ್‌ಸಿಒಗೆ ಭಾರತ ಮತ್ತು ಪಾಕಿಸ್ತಾನಗಳ ಪ್ರವೇಶದಿಂದ ಸಂಘಟನೆಯ ಶಕ್ತಿ ವೃದ್ಧಿಸಿದೆ. ನಾವೀಗ ಶೀತಲ ಸಮರದ ಮನಸ್ಥಿತಿಯನ್ನು ಕಿತ್ತೊಗೆಯಬೇಕು’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಕರೆ ನೀಡಿದರು.