ಶಿವಮೊಗ್ಗ: ನಗರದ ಜೆಎನ್‌ಎನ್‌ಸಿಇ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಜೂನ್‌ 12ರಿಂದ 26ರವರೆಗೆ ಸಿಇಟಿ–2018 ಆನ್‌ಲೈನ್‌ ಸೀಟು ಹಂಚಿಕೆಗಾಗಿ ದಾಖಲಾತಿ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ಸಿಇಟಿ ಉಪಕೇಂದ್ರದ ನೋಡಲ್ ಅಧಿಕಾರಿ ಡಾ.ಎಸ್‌. ನಾಗಮಣಿ ತಿಳಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶಿವಮೊಗ್ಗ ಸೇರಿದಂತೆ ರಾಜ್ಯದ ಆಯ್ದ ಜಿಲ್ಲೆಗಳ 16 ಸಹಾಯಕ ಕೇಂದ್ರ
ಗಳಲ್ಲಿ ಸಿಇಟಿ–2018ರ ಆನ್‌ಲೈನ್‌ ಸೀಟು ಹಂಚಿಕೆಗಾಗಿ ದಾಖಲಾತಿ ಪರಿಶೀಲನೆ ನಡೆಸುತ್ತಿದೆ. ವಿದ್ಯಾರ್ಥಿಗಳು ಪಡೆದಿರುವ ರ್‍ಯಾಂಕ್‌ಗಳ ಆಧಾರದ ಮೇಲೆ ನಿಗದಿಪಡಿಸಲಾದ ದಿನಾಂಕ
ಗಳಂದು ದಾಖಲಾತಿಗಳನ್ನು ಪರಿಶೀಲಿಸ
ಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಭ್ಯರ್ಥಿಗಳು ಅರ್ಹಗೊಳ್ಳುವ ಎಲ್ಲಾ ಕೋರ್ಸುಗಳಿಗೆ ದಾಖಲಾತಿ ಪರಿಶೀಲನೆಯನ್ನು ಒಂದೇ ಬಾರಿಗೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕೋರ್ಸುಗಳಿಗೆ ರ್‍ಯಾಂಕ್ ಪಡೆದಿದ್ದರೆ ಅಂತಹ ಅಭ್ಯರ್ಥಿಗಳು ಯಾವುದಾದರೂ ಕೋರ್ಸ್‌ನ ಗರಿಷ್ಠ ರ್‍ಯಾಂಕ್‌ನ ಆಧಾರದ ಮೇಲೆ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು. ಅಭ್ಯರ್ಥಿಗಳು ಪರಿಶೀಲನೆ ಸಮಯದಲ್ಲಿ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು. ಅಲ್ಲದೇ ದಾಖಲೆಗಳನ್ನು ಪರಿಶೀಲನೆಗೆ ತರುವ ಮೊದಲು ನಕಲು ಪ್ರತಿಗಳನ್ನು ಯಾವುದೇ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿಕೊಂಡು ತರುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಸೇರಿದಂತೆ ವಿವಿಧ ಸ್ನಾತಕ ಪದವಿ ಸೀಟುಗಳ ಹಂಚಿಕೆಗೆ ಅವಕಾಶ ಕಲ್ಪಿಸಲಾಗಿದೆ. ದಾಖಲೆಗಳ ಪರಿಶೀಲನೆಯ ನಂತರ ಅರ್ಹರಾದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ತಮಗೆ ನೀಡಲಾದ ಪ್ರತ್ಯೇಕ ಕೋಡ್ ಸಂಖ್ಯೆಯನ್ನು ಬಳಸಿ, ಗರಿಷ್ಠ ಸಂಖ್ಯೆಯ ವಿಷಯಗಳನ್ನು ಆದ್ಯತೆಯ ಮೇಲೆ ದಾಖಲಾತಿಗಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದರು.

ಮೀಸಲಾತಿ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗ ಮುಂತಾದ ವಿಷಯಗಳ ಕುರಿತು ಸಲ್ಲಿಸಲಾದ ಮಾಹಿತಿಯನ್ನು ದಾಖಲಾ
ತಿಗಳ ಪರಿಶೀಲನೆಸಂದರ್ಭದಲ್ಲಿ ಕಡ್ಡಾಯವಾಗಿ ಪರಿಶೀಲನೆಗೊಳಪಡಿ
ಸಬೇಕು. ಸಲ್ಲಿಸಿದ ದಾಖಲಾತಿಗಳು ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಇತರೆ ವರ್ಗಕ್ಕೆ ವರ್ಗಾಯಿಸಲಾಗುವುದು. ಆನ್‌ಲೈನ್‌
ನಲ್ಲಿ ತಪ್ಪಾಗಿ ಮಾಹಿತಿ ನಮೂದಿಸಿದ್ದಲ್ಲಿ ಅಂತಹ ಮಾಹಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಅಭ್ಯರ್ಥಿಗಳು ರ್‍ಯಾಂಕುಗಳ ಆಧಾರದ ಮೇಲೆ ರಾಜ್ಯದ ಯಾವುದೇ ಸಹಾಯಕ ಕೇಂದ್ರಗಳಲ್ಲಿ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿಕೊಳ್ಳಬಹುದು. ಶಿವಮೊಗ್ಗ ಕೇಂದ್ರದಲ್ಲಿ ದಾಖಲೆ ಪರಿಶೀಲನೆಗೆ ಪ್ರತ್ಯೇಕವಾದ 5 ಕೌಂಟರ್‌
ಗಳನ್ನು ತೆರೆಯಲಾಗಿದೆ ಎಂದರು.

ಜೆಎನ್‌ಎನ್‌ಸಿಇ ಪ್ರಾಂಶುಪಾಲ ಎಚ್.ಆರ್. ಮಹದೇವಸ್ವಾಮಿ ಮಾತನಾಡಿ, ‘ದಾಖಲಾತಿಗಳ ಪರಿಶೀಲನೆಗಾಗಿ ಬೇರೆ-ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಮ್ಮ ಕಾಲೇಜಿನಿಂದ ದಿನಕ್ಕೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಶಿವಮೊಗ್ಗ ಬಸ್ ನಿಲ್ದಾಣದಿಂದ ಕಾಲೇಜಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಗೆ ಪೂರಕವಾಗಿ ಗಣಕಯಂತ್ರ ಹಾಗೂ ಸಿಬ್ಬಂದಿ ಸೌಲಭ್ಯ ಒದಗಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭದಲ್ಲಿ ತಂಗಲು, ಜೆರಾಕ್ಸ್‌, ಇಂಟರ್‌ನೆಟ್‌ ಹಾಗೂ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಲಾಭ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಹಮ್ಮದ್‌ ಇಮ್ತಿಯಾಜ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಎ.ಎಸ್‌.ವಿಶ್ವನಾಥ್, ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಸಹಾಯಕ ನೋಡಲ್ ಅಧಿಕಾರಿ ಡಿ. ರವಿನಾಯ್ಕ ಇದ್ದರು.