ಸಾಗರ: ತಾಲ್ಲೂಕಿನ ಸಿರಿವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿಮನೆ ಮತ್ತು ಕಾರೆಮನೆಯಲ್ಲಿ ನಿರ್ಮಿಸಿರುವ ರೈಲ್ವೆ ಗೇಟ್ ಮುಚ್ಚದಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟಿಸಿದರು.

ರೈಲ್ವೆ ಇಲಾಖೆ ಅಧಿಕಾರಿಗಳು ರೈಲ್ವೆ ಗೇಟ್‌ಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಾರೆಮನೆ ಮತ್ತು ಮಾರಿಮನೆಯಲ್ಲಿರುವ ರೈಲ್ವೆ ಗೇಟ್‌ ಅನ್ನು ಶಾಶ್ವತವಾಗಿ ಮುಚ್ಚಲು ಮುಂದಾಗಿದ್ದಾರೆ. ಇದರಿಂದಾಗಿ ಬರದವಳ್ಳಿ ಭಾಗದ ರೈತರಿಗೆ ಕೃಷಿ ಭೂಮಿಗೆ ತೆರಳಲು ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ದೂರಿದರು.

ರೈತರಿಗೆ ಕೃಷಿಭೂಮಿಗೆ ಹೋಗಲು ರೈಲ್ವೆ ಗೇಟ್ ಮೂಲಕ ಇರುವ ಹಾದಿ ಏಕೈಕ ಮಾರ್ಗವಾಗಿದೆ. ರೈಲ್ವೆ ಗೇಟ್ ಮುಚ್ಚಿದರೆ ಕೃಷಿ ಭೂಮಿಗೆ ಹೋಗುವ ಹಾದಿಯನ್ನೇ ಮುಚ್ಚಿದಂತಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಕೃಷಿಭೂಮಿಗೆ ಹೋಗಲು ರೈಲ್ವೆ ಇಲಾಖೆ ಪರ್ಯಾಯ ರಸ್ತೆ ನಿರ್ಮಾಣ ಮಾಡುತ್ತಿದ್ದರೂ ವರದಾ ನದಿ ಪ್ರವಾಹದಿಂದ ಮಳೆಗಾಲದಲ್ಲಿ ಅದು ಮುಚ್ಚಿ ಹೋಗುತ್ತದೆ. ಹೀಗಾಗಿ ಗೇಟ್ ಮುಚ್ಚಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್ ಬರದವಳ್ಳಿ, ಅನಿಲ್ ಬರದವಳ್ಳಿ, ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಶ್ರೀಧರ ಮರಗಿ, ಸದಾಶಿವ ಕತ್ಲೆ, ರವಿಚಂದ್ರ, ಪರಮೇಶ್ವರ ಭಂಡಾರಿ, ಚಂದ್ರಶೇಖರ ತಡಗಳಲೆ, ಸುರೇಶ್ ಕತ್ಲೆ, ರಾಜೇಶ್ ಮಾಸಿರಿ ಹಾಜರಿದ್ದರು.