ನವದೆಹಲಿ (ಪಿಟಿಐ): ದೇಶವು ಆರ್‌ಎಸ್‌ಎಸ್‌–ಬಿಜೆಪಿಯ ಮೂವರು ನಾಯಕರ ಹಿಡಿತದಲ್ಲಿದೆ. ಮುಂದಿನ ಆರು ತಿಂಗಳಿನಿಂದ ಒಂದು ವರ್ಷದಲ್ಲಿ ವಿರೋಧ ಪಕ್ಷಗಳು ಒಟ್ಟಾಗಲಿವೆ. ಭಾರತದ ಜನರೇ ದೇಶವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಈ ಒಗ್ಗಟ್ಟು ಮೂವರು ನಾಯಕರಿಗೆ ಮನವರಿಕೆ ಮಾಡಿಕೊಡಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು ಶೀಘ್ರದಲ್ಲಿಯೇ ಜನರ ಶಕ್ತಿಯನ್ನು ನೋಡಲಿದ್ದಾರೆ ಎಂದರು.

ಪಕ್ಷದ ಮೊದಲ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಒಬಿಸಿಗೆ ಸಲ್ಲಬೇಕಾದ ಸ್ಥಾನವನ್ನು ನೀಡಲಾಗುವುದು ಎಂದು ಹೇಳುವ ಮೂಲಕ ಈ ವರ್ಗಗಳ ಮನಗೆಲ್ಲುವ ಪ್ರಯತ್ನವನ್ನು ರಾಹುಲ್‌ ಗಾಂಧಿ ಮಾಡಿದ್ದಾರೆ.

ಆರ್‌ಎಸ್‌ಎಸ್‌–ಬಿಜೆಪಿಯ ವಿಭಜನಕಾರಿ ನೀತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಇತರ ಹಿಂದುಳಿದ ವರ್ಗಗಳ ಜನರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಮುಂದಿಡುವುದನ್ನು ಆರ್‌ಎಸ್‌ಎಸ್‌–ಬಿಜೆಪಿ ಸಹಿಸುವುದಿಲ್ಲ. ಹಾಗಾಗಿ ಈ ವರ್ಗಗಳು ಒಟ್ಟಾಗುವುದನ್ನು ತಡೆಯುತ್ತಿವೆ ಎಂದರು.

ದೇಶದ ಜನಸಂಖ್ಯೆಯ ಶೇ 50ರಿಂದ 60ರಷ್ಟಿರುವ ಸಮುದಾಯಗಳ ಹಿತಾಸಕ್ತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಾಲ್‌ಕಟೋರ್‌ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಗಳನ್ನು ಕಡೆಗಣಿಸಿದೆ. ಕೆಲವೇ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಈ ಉದ್ಯಮಿಗಳ ಸುಮಾರು ₹2.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ತೆರೆಮರೆಯಲ್ಲಿ ಕೆಲಸ ಮಾಡುವ ಜನರಿಗೆ ಯಾವ ಪ್ರಯೋಜನವೂ ದೊರೆಯುವುದಿಲ್ಲ. ಕಠಿಣ ದುಡಿಮೆಯ ಫಲವನ್ನು ಕೆಲವರಷ್ಟೇ ಅನುಭವಿಸುತ್ತಿದ್ದಾರೆ ಎಂದರು.

‘₹2.5 ಲಕ್ಷ ಕೋಟಿಯನ್ನು 15 ಉದ್ಯಮಿಗಳಿಗೆ ನೀಡಲಾಗಿದೆ. ರೈತರಿಗೆ ಏನೂ ಸಿಕ್ಕಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ’ ಎಂದು ರಾಹುಲ್‌ ಹೇಳಿದರು.

ದೇಶದಲ್ಲಿ ಕೌಶಲದ ಕೊರತೆ ಇದೆ ಎಂಬ ಸರ್ಕಾರದ ನಿಲುವನ್ನು ರಾಹುಲ್‌ ಪ್ರಶ್ನಿಸಿದರು. ಕೌಶಲವನ್ನು ಗುರುತಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ತಿಳಿಸಿದರು.