ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿ ಬ್ಯಾರೇಜ್‌ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಗುಡ್ಡ ಕುಸಿದು, ಉಂಟಾದ ಅಡೆತಡೆಯನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ತೆರವುಗೊಳಿಸಲಾಗಿದ್ದರೂ, ಘಾಟಿಯಲ್ಲಿ ಎರಡು ದಿನ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಇದೇ 14ರವರೆಗೆ ಎರಡೂ ಕಡೆಗಳಿಂದ (ಮೂಡಿಗೆರೆ, ಮಂಗಳೂರು) ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆ ಬಂದ್‌ ಆಗಿ ಸೋಮವಾರ ತಡರಾತ್ರಿಯಿಂದ ಘಾಟಿಯಲ್ಲಿ ಸಿಲುಕಿ
ಕೊಂಡು ಸಾಲುಗಟ್ಟಿ ನಿಂತಿದ್ದ ವಾಹನ
ಗಳ ಸಂಚಾರಕ್ಕೆ ಅನುವು ಮಾಡಿ
ಕೊಟ್ಟಾಗ ಮಂಗಳವಾರ ಮಧ್ಯಾಹ್ನ 3 ಗಂಟೆಯಾಗಿತ್ತು. ಘಾಟಿಯಲ್ಲಿ ಅನ್ನ, ನೀರು ಇಲ್ಲದೆ ಸಿಲುಕಿ ಹಾಕಿಕೊಂಡಿದ್ದ 3 ಸಾವಿರಕ್ಕೂ ಅಧಿಕ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳನ್ನು ಯಾವ ಕಡೆಗೂ ತಿರುಗಿಸಲಾಗದ ಸ್ಥಿತಿ ಉಂಟಾಗಿತ್ತು. ಮಹಿಳೆಯರು ಮತ್ತು ಮಕ್ಕಳು, ಆಹಾರ, ನೀರು, ವಿಶ್ರಾಂತಿ ಇಲ್ಲದೆ ಲಾರಿ, ಬಸ್‌ಗಳ ಬಳಿ ನಿಂತು ಮಳೆಯಿಂದ ರಕ್ಷಣೆ ಪಡೆಯಲು ಹಾತೊರೆಯುತ್ತಿದ್ದರು.

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಉಭಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯಿತು. ಅಗ್ನಿ ಶಾಮಕ ಸಿಬ್ಬಂದಿ, ಹೆದ್ದಾರಿ ಪ್ರಾಧಿಕಾರ, ಪೊಲೀಸರು, ಸ್ವಯಂಸೇವಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ನಸುಕಿನಿಂದಲೇ ಹರಸಾಹಸಪಟ್ಟು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮಣ್ಣಿನ ರಾಶಿ, ಮರಗಳನ್ನು ತೆರವುಗೊಳಿಸಿದರು. ಭಾರಿ ಮಳೆಯ ನಡುವೆ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಸುಮಾರು 25 ಅಡಿಯಷ್ಟು ಎತ್ತರದ ಮಣ್ಣಿನ ರಾಶಿಯನ್ನು ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಲಾಯಿತು.