ಅಂಕೋಲಾ : ಉತ್ತರ ಕನ್ನಡದಲ್ಲಿ ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದವರಲ್ಲಿ ಗಿರಿ ಪಿಕಳೆ ಮಾಸ್ಟರ್‌ ಅಗ್ರಗಣ್ಯರು. ಎಂದು ಹೊನ್ನಾವರದ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಎನ್.ಆರ್.ನಾಯಕ ಅಭಿಪ್ರಾಯಪಟ್ಟರು.

ಕೆಎಲ್‌ಇ ಸಮೂಹ ಸಂಸ್ಥೆ ಆಯೋಜಿಸಿದ್ದ ಶಿಕ್ಷಣತಜ್ಞ ಗಿರಿ ಪಿಕಳೆಯವರ 98ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಹಾಗೂ ಕೂಲಿಕಾರ್ಮಿಕರಿಗಾಗಿ ಅನೇಕ ಹೋರಾಟದಲ್ಲಿ ತೊಡಗಿಕೊಂಡು ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ್ದರು.ಹಾರ, ತುರಾಯಿ ಬಯಸದೆ ಕೆಳಮಟ್ಟದ ಜೀವ ನಡೆಸಿ ನುಡಿದಂತೆ ನಡೆದರು. ಅನೇಕ ಸಾಹಿತಿಗಳ ಬೆಳವಣಿಗೆಯಲ್ಲಿ ಗಿರಿ ಪಿಕಳೆಯವರ ಪಾತ್ರ ಉನ್ನತವಾದದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಯೋಜಕ ಆರ್.ನಟರಾಜ ಅವರು, ಅಂಕೋಲಾದ ಪ್ರತಿ ಕಣಕಣದಲ್ಲಿಯೂ ಪಿಕಳೆ ಮಾಸ್ತರರ ಅವರ ಹೆಜ್ಜೆ ಗುರುತಿದೆ. ಅದನ್ನು ಕೆಎಲ್‌ಸಿ ಸಂಸ್ಥೆ ಸದಾ ಸ್ಮರಿಸುತ್ತದೆ. ಸಾಮಾನ್ಯ ಮನುಷ್ಯರಿಗಿಂತ ಅವರು ಕ್ರಾಂತಿಗಳಿಂದಾಗಿಯೇ ಭಿನ್ನರಾಗಿ ಕಾಣುತ್ತಾರೆ ಎಂದರು.

ಡಾ. ಸ್ಮಿತಾ ಪಾತರಪೇಕರ ಅವರ ‘ಬಾಲವಾಡಿ ಗೀತ್’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಕೃತಿಯ ಕುರಿತು ಸಹ ಶಿಕ್ಷಕಿ ಅನುರಾಧಾ ಗೊಂದಕರ ಪರಿಚಯಿಸಿದರು. ವಿ.ಕೆ.ಗರ್ಲ್ಸ್‌ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಕಾರ್ಯದರ್ಶಿ ಡಾ.ಡಿ.ಎಲ್.ಭಟ್ಕಳ ಮಾತನಾಡಿದರು. ಪ್ರಾಚಾರ್ಯೆ ಸರೋಜಿನಿ ಹಾರವಾಡೆಕರ ಪರಿಚಯಿಸಿದರು. ಪ್ರಾಚಾರ್ಯೆ ನಾಗಮ್ಮಾ ಮಮದಾಪುರ ಸ್ವಾಗತಿಸಿದರು. ಮುಖ್ಯೋಧ್ಯಾಪಕಿ ನಾಗಮ್ಮ ಆಗೇರ ವಂದಿಸಿದರು. ಉಪನ್ಯಾಸಕಿ ಪುಷ್ಪಾ ನಾಯ್ಕ ನಿರೂಪಿಸಿದರು.