ಹಳಿಯಾಳ: ಪಟ್ಟಣದ ಆನೆಗುಂದಿ ಬಡಾವಣೆಯಲ್ಲಿ ಮಂಗಳವಾರ ಬೆಳಗಿನ ಜಾವ ಸರಣಿ ದರೋಡೆ ನಡೆದಿದೆ.

ಇಲ್ಲಿನ ನಿವಾಸಿ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಮಂಜುನಾಥ ಶಾಸ್ತ್ರಿ ಅವರ ಮನೆಗೆ ನುಗ್ಗಿದ ದರೋಡೆಕೋರರು ದಂಪತಿ ಮೇಲೆ ಹಲ್ಲೆ ನಡೆಸಿ, ₹4 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ದೋಚಿದ್ದಾರೆ.

ಮುಂಬಾಗಿಲಿನ ಇಂಟರ್ ಲಾಕ್ ಹಾಗೂ ಕೊಂಡಿಯನ್ನು ಮುರಿದು ಒಳನುಗ್ಗಿದ ದರೋಡೆಕೋರರ ತಂಡ ಮನೆಯಲ್ಲಿ ಶೋಧ ನಡೆಸಿದೆ. ಬಳಿಕ ಬೆಡ್‌ರೂಂ ಪ್ರವೇಶಿಸಿ ಮಂಜುನಾಥ ಶಾಸ್ತ್ರಿ ಅವರ ತಲೆಗೆ ಕಟ್ಟಿಗೆಯಿಂದ ಹೊಡೆದು ಗಾಯ ಗೊಳಿಸಿ ಬೆದರಿಸಿದರು. 180 ಗ್ರಾಂ ಬಂಗಾರದ ಒಡವೆ ಹಾಗೂ ಬೆಳ್ಳಿಯ ಆಭರಣ, ₹1200 ನಗದು, 2 ಪೆನಸೋನಿಕ್‌ ಕಂಪನಿಯ ಮೊಬೈಲ್ ಮತ್ತು ಮನೆಯ ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ದರೋಡೆ ಸಮಯದಲ್ಲಿ ಮಂಜುನಾಥ ಶಾಸ್ತ್ರಿ ಅವರ ಪತ್ನಿ ದೀಪಾ ಹಾಗೂ ಪುತ್ರಿ ಮಾನಸಿ, ಪುತ್ರ ವಶಿಷ್ಟ ಇದ್ದರು. ದೀಪಾಳ ಅವರ ಮೈಮೇಲಿದ್ದ ಆಭರಣವನ್ನೋ ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆಕೋರರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಮಂಜುನಾಥ ಶಾಸ್ತ್ರಿ ದೂರಿನಲ್ಲಿ ವಿವರಿಸಿದ್ದಾರೆ.

ಗಾಯಗೊಂಡಿರುವ ಮಂಜುನಾಥ ಶಾಸ್ತ್ರಿ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ದರೋಡೆಕೋರರು, ಸಣ್ಣ ನೀರಾವರಿ ಇಲಾಖೆಯ ವಸತಿ ಗೃಹದ ಕೀಲಿ ಮುರಿದು, ಬೀರುವಿನಲ್ಲಿಟ್ಟಿದ್ದ ಒಂದೂವರೆ ತೊಲೆ ಬಂಗಾರದ ಆಭರಣ ಹಾಗೂ ಬೆಳ್ಳಿ, ನಗದು ದೋಚಿದ್ದಾರೆ.

ಈ ವೇಳೆ ಮನೆಯ ಯಜಮಾನರಾದ ಸಣ್ಣ ನೀರಾವರಿ ಇಲಾಖೆಯ ಸೈಯ್ಯದ್‌ ಶಾಬುದ್ದಿನ್ ಅಖಿಲ್ ಬೇರೆ ಊರಿಗೆ ತೆರಳಿದ್ದರು. ಮಂಗಳವಾರ ಬೆಳ್ಳಿಗ್ಗೆ 6 ಕ್ಕೆ ಮನೆಗೆ ಬಂದಾಗ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ ಆಭರಣ ಹಾಗೂ ₹20 ಸಾವಿರ ನಗದು ದೋಚಿರುವುದು ಬೆಳಕಿಗೆ ಬಂದಿತು. ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ದೂರು ದಾಖಲಾಗಿದೆ.