ಕಾರವಾರ: ಮೋಜಿನ ಜೀವನಕ್ಕೆ ತಂದೆಯಿಂದ ಹಣ ಕೀಳುವ ದುರುದ್ದೇಶದಿಂದ ಅಪಹರಣದ ನಾಟಕವಾಡಿದ ಯುವಕನೊಬ್ಬ ಇಲ್ಲಿನ ರೈಲ್ವೆ ಪೊಲೀಸರಿಗೆ ಸೋಮವಾರ ಸಿಕ್ಕಿಬಿದ್ದಿದ್ದಾನೆ.

ಉತ್ತರ ಪ್ರದೇಶದ ಬರೇಲಿ ಸಮೀಪದ ಕೊಲ್ವಾಲಿಯ ಭವೇಶ್‌ ಪಾಠಕ್ (22) ಆರೋಪಿ. ಆತ ತನ್ನ ಅತ್ತೆಯ ಮಗನೊಂದಿಗೆ ಜೂನ್ 7ರಂದು ಮನೆಬಿಟ್ಟು ಬಂದಿದ್ದ. ಪೋಷಕರು ಎಲ್ಲಿ ಹುಡುಕಿದರೂ ಸಿಗಲಿಲ್ಲ. ಇಬ್ಬರೂ ಗೋವಾದ ಮೂಲಕ ಕಾರವಾರಕ್ಕೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಬರುತ್ತಿದ್ದರು. ಗೋವಾ ಪೊಲೀಸರು ನೀಡಿದ ಮಾಹಿತಿ ಆಧರಿಸಿ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ದೀಪಕ್ ಶರ್ಮಾ ಅವರು ತಪಾಸಣೆ ಮಾಡಿದಾಗ ಇಬ್ಬರೂ ಸಿಕ್ಕಿಬಿದ್ದರು.

ಯುವಕನ ತಂದೆ ಸಿ.ವಿ.ಪಾಠಕ್ ಮತ್ತು ಉತ್ತರ ಪ್ರದೇಶದ ಪೊಲೀಸರು ಕಾರವಾರಕ್ಕೆ ಬಂದು ಇಬ್ಬರನ್ನೂ ಕರೆದುಕೊಂಡು ಹೋಗಿದ್ದಾರೆ. ಉತ್ತರ ಪ್ರದೇಶ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಇದು ಅಪಹರಣವಲ್ಲ, ಹಣಕ್ಕಾಗಿ ಹೂಡಿದ ನಾಟಕ ಎಂದು ಬಯಲಾಯಿತು.

ತಂದೆಗೆ ಮೊಬೈಲ್ ಸಂದೇಶ: ಭವೇಶ್ ದೆಹಲಿಯಲ್ಲಿ ತನ್ನ ಅತ್ತೆಯ ಮನೆಯಲ್ಲಿದ್ದುಕೊಂಡು ಕಾನೂನು ಪದವಿ ಅಧ್ಯಯನ ಮಾಡುತ್ತಿದ್ದ. ಯುಪಿಎಸ್‌ಸಿ ಪರೀಕ್ಷೆ ಬರೆಯಲೂ ಸಿದ್ಧತೆ ಮಾಡಿಕೊಂಡಿದ್ದ. ಆದರೆ, ಜೂನ್ 7ರಂದು ನಾಪತ್ತೆಯಾದ ಆತ, ‘ನನ್ನನ್ನು ಯಾರೋ ಅಪಹರಣ ಮಾಡಿದ್ದು, ಬಿಡುಗಡೆ ಮಾಡಲು ₹ 25 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ಕೊಡದಿದ್ದರೆ ಕೊಲ್ಲುವ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ತಂದೆಯ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ.

ಮಗನ ಸಂದೇಶದಿಂದ ಕಂಗಾಲಾದ ಸಿ.ವಿ.ಪಾಠಕ್, ಬರೇಲಿಯ ಕೊಲ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಮೀನು ಮಾರಾಟ ಮಾಡಿ ಹಣ ಹೊಂದಿಸಲು ಯೋಚಿಸಿದ್ದರು. ಅಷ್ಟರಲ್ಲಿ ಭವೇಶ್‌ ಗೋವಾದಲ್ಲಿರುವುದನ್ನು ಆತನ ಮೊಬೈಲ್ ಸಿಗ್ನಲ್ ಮೂಲಕ ಪೊಲೀಸರು ಪತ್ತೆ ಹಚ್ಚಿದರು. ಕೂಡಲೇ ಅಲ್ಲಿಗೆ ಪಾಠಕ್ ಅವರ ಜತೆ ಬಂದರು. ಆದರೆ, ಅಲ್ಲೂ ಸಿಗದ ಕಾರಣ ಗೋವಾ ಪೊಲೀಸರು ಕಾರವಾರ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.