ಧಾರವಾಡ: ಪ್ರಕೃತಿ ವಿಕೋಪದಿಂದ ಭಾಗಶಃ ಹಾನಿಗೀಡಾದ ಮನೆಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದರು.

ಪ್ರಕೃತಿ ವಿಕೋಪ, ಅತಿವೃಷ್ಟಿಯಿಂದಾದ ಹಾನಿ ಹಾಗೂ ಪರಿಹಾರ ವಿತರಣೆ ಪರಿಶೀಲನೆ ಸಂಬಂಧ ಮಂಗಳವಾರ ಇಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಪರಿಹಾರದ ಮೊತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ಇದೆ. ಕೇಂದ್ರ ಸರ್ಕಾರದ ನೂತನ ಕಾಯ್ದೆ ಅನ್ವಯ ಹೆಚ್ಚಿನ ಹಣ ನೀಡಲಾಗದಿದ್ದರೂ, ರಾಜ್ಯ ಸರ್ಕಾರದಿಂದ ಹೆಚ್ಚಿನ ಹಣ ನೀಡಲು ಸಾಧ್ಯವಿದೆ. ಆ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಿದರೆ ಉತ್ತಮ’ ಎಂದು ಗದಗ ಜಿಲ್ಲಾಧಿಕಾರಿ ಮನೋಜಕುಮಾರ ಜೈನ್‌ ಮಾಡಿದ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

‘ರಾಯಚೂರು ಜಿಲ್ಲೆ ಹೊರತುಪಡಿಸಿ ರಾಜ್ಯದ 29 ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಕೆಲವೆಡೆ ಅತಿವೃಷ್ಟಿಯಿಂದಾಗಿ ಬಹಳಷ್ಟು ಮನೆಗಳು ಹಾಳಾಗಿವೆ. ಪೂರ್ಣ ಹಾನಿಯಾದ ಮನೆಗೆ ₹95ಸಾವಿರ ಪರಿಹಾರ ಸಿಗುತ್ತಿದೆ. ಆದರೆ, ಭಾಗಶಃ ಹಾನಿಯಾದ ಮನೆಗಳಿಗೆ ₹3,500 ದಿಂದ ₹5, 500 ಪರಿಹಾರ ನೀಡಲಾಗುತ್ತಿದೆ. ಹಾನಿಗೀಡಾಗುವುದು ಬಡವರ ಮನೆಯೇ ಹೊರತು, ಶ್ರೀಮಂತರ ಆರ್‌ಸಿಸಿ ಮನೆಗಳಲ್ಲ. ಇಂಥ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹೆಚ್ಚು ಧಾರಾಳ ಮನೋಭಾವದಿಂದ ವರ್ತಿಸಬೇಕು’ ಎಂದರು.

‘ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ವಾರದೊಳಗೆ ಪರಿಹಾರ ನೀಡಬೇಕು. ವಾರಕ್ಕೆ ಎರಡು ಬಾರಿ ವಿಡಿಯೊ ಸಂವಾದ ನಡೆಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ವಾರಕ್ಕೊಮ್ಮೆಯಾದರೂ ಜಿಲ್ಲೆಯ ಪ್ರವಾಸ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಪತ್ತು ನಿರ್ವಹಣೆಗಾಗಿ, ಪ್ರತಿ ಜಿಲ್ಲಾಧಿಕಾರಿ ಖಾತೆಯಲ್ಲೂ ಕನಿಷ್ಠ ₹ 5 ಕೋಟಿ  ಇರಬೇಕು. ಕಡಿಮೆ ಇದ್ದಲ್ಲಿ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಪರಿಹಾರ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದರು.