ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಾಗೂ ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವಿಕೆಯ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಧೀಶ ಮತ್ತು ಪ್ರ.ದ.ನ್ಯಾ.ದಂಡಾಧಿಕಾರಿ ವಿಘ್ನೇಶ ಕುಮಾರ ಉದ್ಘಾಟಿಸಿದರು. ಅವರು ಮಾತನಾಡುತ್ತಾ ಮಕ್ಕಳು ಯಾವುದೇ ಬಾಹ್ಯ ಆಮಿಷಕ್ಕೆ ಒಳಗಾಗದೇ ಅಧ್ಯಯನದಲ್ಲಿ ನಿರತರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆನೀಡಿದರು. ಇಂದು ಬಡತನದಿಂದ ಕಲಿಕೆಗೆ ಹಿನ್ನಡೆಯಾಗುತ್ತಿಲ್ಲ ಬದಲು ಬಾಲಕಾರ್ಮಿಕತೆ ಓದನ್ನು ಕಸಿದುಕೊಳ್ಳುತ್ತದೆ ಎಂದರು.
ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನಾ, ಕಾರ್ಮಿಕ, ಪೋಲಿಸ್, ಶಿಶು ಅಭಿವೃದ್ಧಿ ಇಲಾಖೆಗಳು ಹಾಗೂ ಶಾಲೆಯ ಕಾನೂನು ಸಂಘದಡಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯವಾದಿ ಎಂ.ಡಿ.ರಫೀಕ್ ಬಾಲಕಾರ್ಮಿಕ ನಿಷೇದ, ಕಾನೂನು ಮತ್ತು ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವ, ಕಾನೂನು ಮಾಹಿತಿ ಹಾಗೂ ಪೋಲಿಸ್ ದೂರು ಪ್ರಾಧಿಕಾರದ ಕುರಿತಾದ ಸಮಗ್ರ ಮಾಹಿತಿ ನೀಡಿದರು. ಶಿಶು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಿಂದ ಲಭಿಸುವ ಎಲ್ಲ ಸೌಲಭ್ಯಗಳ ಬಗ್ಗೆ ಸಿಡಿಪಿಒ ಲಲಿತಾ ಪಟಗಾರ ವಿವರಿಸಿದರು. ಜ್ವಲಂತ ಉದಾಹರಣೆಗಳ ಮೂಲಕ ಹೆಣ್ಣು ಮಕ್ಕಳು ಹೇಗೆ ಮೋಸಕ್ಕೊಳಗಾಗುತ್ತಾರೆ ಮತ್ತು ತಮ್ಮ ಸುರಕ್ಷತೆಗಾಗಿ ಮಕ್ಕಳು ವಹಿಸಬೇಕಾದ ಎಚ್ಚರಿಕೆಗಳ ಮೂಲ ತಿಳುವಳಿಕೆಯನ್ನು ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಇ.ಸಿ.ಸಂಪತ್ತು ಉದಾಹರಿಸಿ ಧೈರ್ಯ ತುಂಬುವ ಮಾತನಾಡಿದರು. ಯಾವುದೇ ಅವಘಡಗಳು ಎದುರಾದಾಗ ಮೊದಲು ಪೋಲಿಸ್‌ಗೆ ತಿಳಿಸಲು ಮರೆಯಬೇಡಿ ಎಂದೂ ಸೂಚಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು ಶಾಲಾವರಣದ ಹೊರಗಿನ ಮಕ್ಕಳ ನಡಾವಳಿಗಳನ್ನು ಪೋಷಕರ ಒತ್ತಾಯದ ಮೇರೆಗೆ ಪ್ರಶ್ನಿಸುವಾಗಿನ ಸಮಸ್ಯೆಗಳ ಗಂಭೀರತೆಯನ್ನು ಅನುಭವಿಸಿದ ನೋವನ್ನೂ ತೆರೆದಿಟ್ಟರು. ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಆರ್.ಎ.ಹೆಗಡೆ, ವಿದ್ಯಾರ್ಥಿನಿಯರನ್ನು ಚುಡಾಯಿಸುವ ಬೀದಿ ಕಾಮಣ್ಣರ ತಂಟೆಯಿಂದ ದೂರವಾಗಬೇಕೆಂದರೆ ಹೆಣ್ಣು ಮಕ್ಕಳು ಸ್ಟಾಂಗ್ ಆಗಬೇಕಾಗಿದೆಯೆಂದರಲ್ಲದೇ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕೆಂದರು. ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿ ವಂದಿಸಿದರು. ವಿಜಯಾ ನಾಯ್ಕ, ಸುಧಾ ಹೆಗಡೆ, ವಕೀಲರು, ಶಿಕ್ಷಕರು, ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

(ನ್ಯಾ.ವಿಘ್ನೇಶ ಕುಮಾರ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್.ಎ.ಹೆಗಡೆ, ಪಿಎಸ್‌ಐ ಇ.ಸಿ.ಸಂಪತ್ತು, ನ್ಯಾಯವಾದಿ ಎಂ.ಡಿ.ರಫೀಕ್, ಮುಖ್ಯಾಧ್ಯಾಪಕ ಎನ್.ಆರ್.ಗಜು, ಸಿಡಿಪಿಒ ಲಲಿತಾ ಪಟಗಾರ, ವಿಜಯಾ ನಾಯ್ಕ, ಸುಧಾ ಹೆಗಡೆ ಇದ್ದರು)