ಕುಮಟಾ: ಇಲ್ಲಿಯ ಭಾರತೀಯ ಕುಟುಂಬ ಯೋಜನಾ ಸಂಘ ಹಾಗೂ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕಸ್ತೂರಬಾ ಇಕೋ ಕ್ಲಬ್ ಸಹಯೋಗದಲ್ಲಿ ಹದಿಹರಯದಲ್ಲಿ ಆರೋಗ್ಯ ರಕ್ಷಣೆಯ ಕುರಿತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಶಾಲೆಯ ಪಿ.ಆರ್.ನಾಯಕ ಸಭಾಭವನದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾ.ಕು.ಯೋ.ಸಂ. ಉಪಾಧ್ಯಕ್ಷ ವಿ.ಆಯ್.ಹೆಗಡೆ ವಿದ್ಯಾರ್ಥಿ ಜೀವನವನ್ನು ಹಸನು ಮಾಡಿಕೊಳ್ಳಲು ಅಧ್ಯಯನದಷ್ಟೇ ಆರೋಗ್ಯಕ್ಕೂ ಮಹತ್ವವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು. ಬಂಗಾರಂದತಹ ಬದುಕು ಮತ್ತೆ ಮತ್ತೆ ಬರಲಾರದು. ಅದನ್ನು ಅಸುಪಯೋಗಪಡಿಸಿ ಆನಂದಿಸಿ ಎಂದರು. ವಿದ್ಯಾರ್ಥಿಗಳಿಗೆ ಸಕಲ ರೀತಿಯಲ್ಲಿ ಅವಕಾಶ ಕಲ್ಪಿಸಿ ಅವರ ಪ್ರತಿಭೆ ವಿಕಸಿಸಲು ವಿಪುಲ ಅವಕಾಶ ಕಲ್ಪಿಸಿಕೊಡುತ್ತಿರುವ ಶಾಲೆಯ ಶಿಕ್ಷಕವೃಂದವನ್ನು ಶ್ಲಾಘಿಸಿದರು. ಸಂಘದ ಆರೋಗ್ಯಾಧಿಕಾರಿ ಡಾ.ರಾಧಿಕಾ ಕೊಡ್ಲೆಕೆರೆ ಹದಿಹರಯದಲ್ಲಿನ ದೈಹಿಕ ಮತ್ತು ಮಾನಸಿಕ ಬದಲಾವಣೆಯ ಸಂಕ್ರಮಣ ಕಾಲಘಟ್ಟದಲ್ಲಿನ ಪರಿಣಾಮಗಳನ್ನು ವಿಶ್ಲೇಷಿಸುತ್ತಾ ಅದನ್ನು ಪರಿಹರಿಸಿ ಎದುರಿಸುವ ಸೂಕ್ತ ಕ್ರಮಗಳನ್ನು ನೀಡುತ್ತಾ ಮಕ್ಕಳೊಂದಿಗೆ ಸಂವಾದಿಸಿದರು. ಹಲವು ಮಕ್ಕಳೊಡನೆ ಆಪ್ತ ಸಮಾಲೋಚನೆ ನಡೆಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಪಠ್ಯಪೂರಕವಾದ ವಿಷಯಗಳನ್ನು ಮನದಟ್ಟಾಗಿಸಲು ಇಂತಹ ಕಾರ್ಯಾಗಾರಗಳು ಪರಿಣಾಮಕಾರಿಯಾಗುತ್ತವೆ ಎಂದು ಅಭಿಪ್ರಾಯಿಸಿದರು. ಪ್ರಾರಂಭದಲ್ಲಿ ಶಿಕ್ಷಕ ವಿ.ಎನ್.ಭಟ್ಟ ಸ್ವಾಗತಿಸಿದರು. ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು ನಿರೂಪಿಸಿದರು. ಭಾ.ಕು.ಯೋ.ಸಂ. ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ಗೌಡ ವಂದಿಸಿದರು. ೨೮೫ ವಿದ್ಯಾರ್ಥಿಗಳು ಪ್ರಯೋಜನ ಪಡೆದರು.

(ಭಾ.ಕು.ಯೋ.ಸಂ. ಉಪಾಧ್ಯಕ್ಷ ವಿ.ಐ.ಹೆಗಡೆ ಹದಿಹರಯದಲ್ಲಿ ಆರೋಗ್ಯ ರಕ್ಷಣೆ ಯ ಕುರಿತಾದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯಾಧ್ಯಾಪಕ ಎನ್.ಆರ್.ಗಜು, ವೈದ್ಯಾಧಿಕಾರಿ ಡಾ.ರಾಧಿಕಾ ಭಟ್ಟ, ಕೊಡ್ಲೆಕೆರೆ, ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು, ಕಾರ್ಯಕ್ರಮ ನಿರ್ವಾಹಕಿ ಮಂಜುಳಾ ಗೌಡ ಇದ್ದರು)