ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ತಗ್ಗಿದೆ. ಆದರೆ, ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ಕೆರೆ–ಕಟ್ಟೆಗಳು ಭರ್ತಿಯಾಗಿವೆ. ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಉಂಟಾಗಿದ್ದ ಭೂ ಕುಸಿತದ ಮಣ್ಣು ಹಾಗೂ ಮರಗಳ ತೆರವು ಕಾರ್ಯ ಮುಕ್ತಾಯವಾಗಿದೆ. ಗುರುವಾರ ರಾತ್ರಿಯಿಂದಲೇ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ಉಪ ವಿಭಾಗದ ಎಂಜಿನಿಯರ್‌ಗಳು ಘಾಟಿಯಲ್ಲಿ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು.

ಭಾರಿ ಮಳೆಯಿಂದ ತತ್ತರಿಸಿದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಮಳೆ ಬಿಡುವು ನೀಡಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ.

ಮುಳುಗಡೆಯಾಗಿದ್ದ ಶೃಂಗೇರಿಯ ಶಾರದಾ ಮಠದ ನರಸಿಂಹವನದ ಗುರುಗಳ ಸಂಧ್ಯಾವಂದನೆ ಮಂಟಪ
ದಲ್ಲಿ ನೀರು ಕಡಿಮೆಯಾಗಿದೆ. ತುಂಗಾ ನದಿಯಲ್ಲಿ ನೀರಿನ ಹರಿವು ಸ್ವಲ್ಪ ಕಡಿಮೆಯಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಪ್ರಾಥಮಿಕ ಸಮೀಕ್ಷೆಯಂತೆ ಮಳೆಯಿಂದಾಗಿ ₹ 5.96 ಕೋಟಿ ಆಸ್ತಿ ಹಾನಿ ಆಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಶ್ರೀರಂಗಯ್ಯ ತಿಳಿಸಿ
ದ್ದಾರೆ.

ಕೊಪ್ಪಳದ ಚಿಕ್ಕಮ್ಯಾಗೇರಿ ಗ್ರಾಮದಲ್ಲಿರುವ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರ್ಕಾರಿ ಪ್ರೌಢಶಾಲೆ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಶಿಕ್ಷಕರು ರಾತ್ರಿ ಶಾಲೆಯಲ್ಲೇ ಉಳಿದುಕೊಂಡರು.

ಒಳಹರಿವು ಹೆಚ್ಚಳ: ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು, ಎರಡೇ ದಿನಗಳಲ್ಲಿ ಆರು ಟಿ.ಎಂ.ಸಿ. ಅಡಿಗಿಂತಲೂ ಅಧಿಕ ನೀರು ಹರಿದು ಬಂದಿದೆ. ಶುಕ್ರವಾರ ಅಣೆಕಟ್ಟೆಯ ಒಳಹರಿವು 48,410 ಕ್ಯುಸೆಕ್‌ ದಾಖಲಾಗಿದೆ.

ಸಾಧಾರಣ ಮಳೆ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿಯಿತು. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿದಿದ್ದು ವಾಹನ ಸಂಚಾರ ಆರಂಭಗೊಂಡಿದೆ. ಲಕ್ಷ್ಮಣತೀರ್ಥ ಹಾಗೂ ಕಾವೇರಿ ನದಿಯಲ್ಲೂ ನೀರಿನ ಮಟ್ಟ ಇಳಿದಿದೆ.

ಹೆದ್ದಾರಿಗೆ ಮರ: ರಾಮನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರಾಮನಗರದ ಐಜೂರು ವೃತ್ತದಲ್ಲಿ ಮರವೊಂದು ಬುಡಸಮೇತ ಹೆದ್ದಾರಿಗೆ ಉರುಳಿಬಿತ್ತು. ಇದರಿಂದಾಗಿ ಆಟೊ, ಕ್ಯಾಂಟರ್‌ ಹಾಗೂ ಕಾರು ಭಾಗಶಃ ಜಖಂಗೊಂಡಿತು. ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.