ಬೆಂಗಳೂರು: ರಾಜ್ಯದ ಐದು ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ ಕೊಳವೆ ಮೂಲಕ ಮನೆಗಳಿಗೆ ನೈಸರ್ಗಿಕ ಅನಿಲ (ಪಿಎನ್‌ಜಿ) ಪೂರೈಸುವ ಯೋಜನೆಯನ್ನು ಇನ್ನೂ ಎಂಟು ಜಿಲ್ಲೆಗಳಿಗೆ ವಿಸ್ತರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂ­ತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ಮುಂದಾಗಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ ಹಲವು ಮನೆಗಳಿಗೆ ಕೊಳವೆ ಮೂಲಕ ಅನಿಲ ಪೂರೈಕೆ ಮಾಡಲಾಗುತ್ತಿದೆ. ಚಿತ್ರದುರ್ಗ, ದಾವಣಗೆರೆ, ಉಡುಪಿ, ಬಳ್ಳಾರಿ, ಗದಗ, ಬೀದರ್, ರಾಮನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಈ ಯೋಜನೆಯ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.

ಯೋಜನೆಯ ಕಾಮಗಾರಿ ಗುತ್ತಿಗೆ ನೀಡುವುದಕ್ಕಾಗಿ ಬೆಂಗಳೂರಿನಲ್ಲಿ ಮಂಡಳಿಯು ಸೋಮವಾರ 9ನೇ ಸುತ್ತಿನ ಹರಾಜು ಪ್ರಕ್ರಿಯೆ ನಡೆಸಿತು. 10 ಕಂಪನಿಗಳ ಪ್ರತಿನಿಧಿಗಳು ಹಾಗೂ 20 ಸ್ವತಂತ್ರ ಪ್ರತಿನಿಧಿಗಳು ಹರಾಜಿನಲ್ಲಿ ಭಾಗವಹಿಸಿದ್ದರು. ತಲಾ ಒಂದೊಂದು ಜಿಲ್ಲೆಯ ಕಾಮಗಾರಿ ಗುತ್ತಿಗೆಯನ್ನು ₹300 ಕೋಟಿಯಿಂದ ₹500 ಕೋಟಿಯವರೆಗೆ ಹರಾಜು ಹಾಕಲಾಯಿತು.

‘ದೇಶದ 86 ಭೌಗೋಳಿಕ ಪ್ರದೇಶಗಳಲ್ಲಿ (22 ರಾಜ್ಯಗಳ) ಹೊಸದಾಗಿ ಕೊಳವೆ ಅಳವಡಿಸಿ, ಮನೆಗಳಿಗೆ ಅನಿಲ ಪೂರೈಕೆ ಮಾಡುವ ಕಾಮಗಾರಿಯನ್ನು ಗುತ್ತಿಗೆ ನೀಡಲು ಜೂನ್ 10ರಿಂದಲೇ ಹರಾಜು ಆರಂಭಿಸಿದ್ದೇವೆ. ಈಗ ಬೆಂಗಳೂರಿನಲ್ಲಿ (ಕರ್ನಾಟಕದ ಎಂಟು ಜಿಲ್ಲೆಗಳಿಗೆ ಮಾತ್ರ) ಈ ಪ್ರಕ್ರಿಯೆ ನಡೆದಿದ್ದು, ಗುತ್ತಿಗೆ ಪಡೆದವರ ವಿವರವನ್ನು ಗೌಪ್ಯವಾಗಿರಿಸಿದ್ದೇವೆ. ಜೂನ್‌ 25ರಂದು ಕೊಚ್ಚಿ ಹಾಗೂ 28ರಂದು ಮುಂಬೈನಲ್ಲಿ ಅಂತಿಮ ಹರಾಜು ನಡೆಯಲಿದೆ. ಆ ಬಳಿಕ ಗುತ್ತಿಗೆದಾರರ ಹೆಸರು ಬಹಿರಂಗಪಡಿಸಲಾಗುವುದು’ ಎಂದು ಮಂಡಳಿಯ ಸದಸ್ಯ ಸತ್ಪಾಲ್‌ ಗರ್ಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

5 ಬಗೆಯ ಕಾಮಗಾರಿ: ‘ಅನಿಲ ಸಂಪರ್ಕ, ನಿಲ್ದಾಣಗಳ ಸ್ಥಾಪನೆ, ಕೊಳವೆ ಅಳವಡಿಕೆ, ಸಾರಿಗೆ ಹಾಗೂ ಅನಿಲದ ಪೂರೈಕೆಗಾಗಿ ಸಾರಿಗೆ… ಹೀಗೆ ಐದು ಬಗೆಯ ಕಾಮಗಾರಿಗಳನ್ನು ಗುತ್ತಿಗೆ ನೀಡುತ್ತಿದ್ದೇವೆ’ ಎಂದರು.

‘ರಾಜ್ಯದ ಐದು ಜಿಲ್ಲೆಗಳ ಕಾಮಗಾರಿ ಗುತ್ತಿಗೆಯನ್ನು ಈ ಹಿಂದೆ ಒಟ್ಟು ₹ 6,283 ಕೋಟಿಗೆ ಹರಾಜು ಮಾಡಲಾಗಿತ್ತು. ಆ ಜಿಲ್ಲೆಗಳಲ್ಲಿ ಬಹುಪಾಲು ಕಾಮಗಾರಿ ಮುಕ್ತಾಯವಾಗಿದ್ದು, ಮನೆಗಳಿಗೆ ಅನಿಲ ಪೂರೈಕೆ ಹಂತ ಹಂತವಾಗಿ ಆರಂಭವಾಗಿದೆ. ಹೊಸದಾಗಿ ಎಂಟು ಜಿಲ್ಲೆಗಳಲ್ಲಿ ಮುಂದಿನ ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಗರ್ಗ್‌ ತಿಳಿಸಿದರು.

‘ಕೈಗಾರಿಕೆಗಳು ಹಾಗೂ ವಾಣಿಜ್ಯ ಘಟಕಗಳಿಗೆ ಅನಿಯಮಿತವಾಗಿ ಇಂಧನ ಪೂರೈಸಲು, ಮಾಲಿನ್ಯರಹಿತ ಪರಿಸರ, ಆರೋಗ್ಯಕರ ಜೀವನ ಹಾಗೂ ಯುವಕ–ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಈ ಯೋಜನೆ ಸಹಕಾರಿ ಆಗಿದೆ. ಕಡಿಮೆ ದರದಲ್ಲಿ ಬಳಕೆಗೆ ಅನಿಲವೂ ಸಿಗಲಿದೆ’ ಎಂದು ಹೇಳಿದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಆಹಾರ ಇಲಾಖೆಯ ಕಾರ್ಯದರ್ಶಿ ಪಂಕಜ್‌ಕುಮಾರ್‌ ಪಾಂಡೆ, ‘ಕೊಳವೆ ಅಳವಡಿಕೆಗೆ ಬೇಕಾದ ಭೂಮಿ ಹಾಗೂ ಉಳಿದೆಲ್ಲ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಕಲ್ಪಿಸಿಕೊಡಲಿದೆ. ಗುತ್ತಿಗೆದಾರರ ಬೇಡಿಕೆಗಳನ್ನೂ ಈಡೇರಿಸಲಿದೆ. ಅನಿಲದ ಬಳಕೆ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಲಿದೆ’ ಎಂದರು.

ಹರಾಜಿನಲ್ಲಿ ಭಾಗವಹಿಸಿದ್ದ ಕಂಪನಿಗಳು

l ಭಾರತೀಯ ಅನಿಲ ಪ್ರಾಧಿಕಾರ (ಗೇಲ್‌)

l ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌

l ಅದಾನಿ ಸಮೂಹ