ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದ ಪೌಡಿ ಜಿಲ್ಲೆಯಲ್ಲಿ ಖಾಸಗಿ ಬಸ್‌ ಕಂದಕಕ್ಕೆ ಉರುಳಿ 48 ಪ್ರಯಾಣಿಕರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ರಾಮ್‌ನಗರಕ್ಕೆ ತೆರಳುತ್ತಿದ್ದ ಬಸ್, ಧುಮಾಕೋಟ್‌ ನಗರದ ಹಳ್ಳಿಯೊಂದರ ಬಳಿ 700 ಅಡಿ ಆಳದ ಕಂದಕಕ್ಕೆ ಉರುಳಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗತ್ ರಾಮ್ ಜೋಶಿ ತಿಳಿಸಿದರು.

45 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯ
ಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, 28 ಸೀಟುಗಳ ಸಾಮರ್ಥ್ಯದ ಮಿನಿ ಬಸ್‌ನಲ್ಲಿ 58 ಜನರನ್ನು ತುಂಬಿಸಲಾಗಿತ್ತು. ಉರುಳಿದ ರಭಸಕ್ಕೆ ಬಸ್‌ನ ಮೇಲ್ಚಾವಣಿ ನಜ್ಜುಗುಜ್ಜಾಗಿದೆ.

ತನಿಖೆಗೆ ಆದೇಶ: ಘಟನೆಯ
ಮ್ಯಾಜಿಸ್ಟೀರಿಯಲ್‌ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ ₹ 2 ಲಕ್ಷ ಮತ್ತು ಗಾಯಾಳುಗಳಿಗೆ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ.