ಮೋದಿ ಪ್ರೇರಣೆಯಿಂದ 51 ದೇವಾಲಯ ಕಟ್ಟಿಸಲು ಮುಂದಾದ ಮುಸ್ಲಿಮ್ ಉದ್ಯಮಿ*
ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಬಂಧ ಮುಸ್ಲಿಮ್ ಸಮುದಾಯದ ವ್ಯಕ್ತಿಗಳಲ್ಲಿ ಪರ, ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಸ್ಲಿಮ್ ಉದ್ಯಮಿಯೊಬ್ಬರು 51 ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಉತ್ತರಪ್ರದೇಶದ ಅಲಹಾಬದ್ ನ ನಗರದ ಶೈನ್ ಗ್ರೂಪ್ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕರಾಗಿರುವ ಉದ್ಯಮಿ ರಶೀದ್ ನಸೀಮ್ ರವರು `ಕೋಮು ಸಾಮರಸ್ಯದ’ ಸಂದೇಶ ಸಾರುವ ಸಲುವಾಗಿ ದೇವಾಲಯ ನಿರ್ಮಾಣದ ಕೆಲಸಕ್ಕೆ ಮುಂದಾಗಿದ್ದಾರೆ.
ಅಲಹಾಬಾದ್-ವಾರಾಣಾಸಿ ಹೆದ್ದಾರಿಯಲ್ಲಿ ಈಗಾಗಲೇ ಒಂದು ದೇಗುಲ ನಿರ್ಮಾಣಗೊಂಡಿದ್ದು, ಶ್ರಾವಣ ತಿಂಗಳು ಮುಗಿದ ನಂತರ ದೇವಾಲಯ ಉದ್ಘಾಟನೆಯಾಗಲಿದೆ. ಈ ವರ್ಷದ ಅಂತ್ಯದೊಳಗೆ 21 ಮತ್ತು ಮುಂದಿನ ವರ್ಷದ ಅಂತ್ಯದೊಳಗೆ 51 ದೇವಾಲಯಗಳ ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವಾದಿ ರಶೀದ್ ರವರು ತಿಳಿಸಿದ್ದಾರೆ.
51 ದೇವಾಲಯಗಳ ನಿರ್ಮಾಣಕ್ಕಾಗಿ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಜಾಗಗಳನ್ನು ಸಹ ಗುರುತಿಸಲಾಗಿದೆ. ಹಿಂದೂ-ಮುಸ್ಲಿಂ ಸಂಸ್ಕೃತಿಗಳ ಸಮ್ಮಿಲನವಾಗಬೇಕು ಎಂಬುದು ರಶೀದ್ರವರ ಇಚ್ಛೆಯಾಗಿದೆ.
ಉತ್ತರಪ್ರದೇಶದಲ್ಲಿ ಪ್ರವಾಸೋದ್ಯಮ, ವಾಹನ ಹಾಗೂ ಜಲ ಶುದ್ಧೀಕರಣ ಸಲಕರಣಗಳ ಉದ್ಯಮ ಹೊಂದಿರುವ ರಶೀದ್ ರವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಸ್ಫೂರ್ತಿಯಂತೆ. ಈ ಬಗ್ಗೆ ಮಾತನಾಡಿದ ಅವರು ಮೋದಿಯವರು ದೇಶದ ಅಭಿವೃದ್ಧಿಗಾಗಿ ನಿತ್ಯವೂ 50 ಸಾವಿರ ಕಿ.ಮೀ.ಗೂ ಹೆಚ್ಚು ಸಂಚಾರ ನಡೆಸುತ್ತಾರೆ. ನಮ್ಮ ಪ್ರಧಾನಿ ಅಷ್ಟೊಂದು ದೇಶಕ್ಕೋಸ್ಕರ ಓಡಾಡುವಾಗ ನಾವೇಕೆ ಇಂತಹ ಕೆಲಸಗಳನ್ನು ಮಾಡಬಾರದು ಎಂದು ಈ ಯೋಜನೆಯನ್ನು ಕೈಗೊಂಡಿದ್ದಾಗಿ ತಿಳಿಸಿದ್ದಾರೆ.