ಬೆಂಗಳೂರು, ಜು.4- ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯುವ ಮುಖಂಡ, ಮಾಜಿ ಸಚಿವ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ. ಎಸ್.ಆರ್.ಪಾಟೀಲ್ ಅವರ ರಾಜೀನಾಮೆಯಿಂದ ತೆರವಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತ ಮುಖಂಡ ಈಶ್ವರ್ ಖಂಡ್ರೆ ಅವರನ್ನು ನೇಮಿಸಿದ್ದು, ಇಂದು ಸಂಜೆಯೊಳಗೆ ಈ ಇಬ್ಬರ ನೇಮಕಾತಿ ಅಧಿಕೃತ ಆದೇಶ ಹೊರಬಿದ್ದಿದೆ.

ಮುಂಬರುವ 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯುವಕರಿಗೆ ಆದ್ಯತೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಒಲವು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅದೇ ರೀತಿ ಉತ್ತರ ಕರ್ನಾಟಕ ಹಾಗೂ ಲಿಂಗಾಯತ ಸಮುದಾಯದಿಂದ ತೆರವಾಗಿದ್ದ ಕಾರ್ಯಾಧ್ಯಕ್ಷ ಸ್ಥಾನವನ್ನು ಅದೇ ಭಾಗದ ಅದೇ ಸಮುದಾಯದ ಮುಖಂಡರಿಗೆ ನೀಡಲು ನಿರ್ಧರಿಸಲಾಗಿದ್ದು, ಈಶ್ವರ್ ಖಂಡ್ರೆ ಅವರು ಕಾರ್ಯಾಧ್ಯಕ್ಷರಾಗಿದ್ದಾರೆ

ಹಾಲಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿತ್ತು. ಸಂಸದರಾದ ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ ಅವರ ಹೆಸರುಗಳು ಕೇಳಿಬಂದಿದ್ದವು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಯುವ ನಾಯಕರಿಗೆ ಆದ್ಯತೆ ನೀಡಬೇಕೆಂಬ ಒಲವನ್ನು ಮೊದಲಿನಿಂದಲೂ ವ್ಯಕ್ತಪಡಿಸುತ್ತ ಬಂದಿದ್ದರು.

ಕೃಷ್ಣಭೈರೇಗೌಡ, ದಿನೇಶ್ ಗುಂಡೂರಾವ್ ಹೆಸರು ಮುಂಚೂಣಿಯಲ್ಲಿದ್ದವು. ಕೃಷ್ಣ ಭೈರೇಗೌಡ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರಿಂದ ಅವರಿಗೆ ಈ ಹುದ್ದೆ ಸಿಗುವ ಸಾಧ್ಯತೆ ಕಡಿಮೆ ಇತ್ತು.
2019ರ ಲೋಕಸಭೆ ಚುನಾವಣೆ, ಪಕ್ಷ ಸಂಘಟನೆ, ಯುವ ಶಕ್ತಿಯ ಆಕರ್ಷಣೆ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಪುತ್ರರಾದ ದಿನೇಶ್ ಗುಂಡೂರಾವ್ ಗಾಂಧಿನಗರ ಕ್ಷೇತ್ರವನ್ನು ಮೂರು ಬಾರಿ ಪ್ರತಿಪಾದಿಸಿದ್ದು, ಯುವ ಕಾಂಗ್ರೆಸ್ ಪದಾಧಿಕಾರಿಗಳಾಗಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.